ಚಂದ್ರು ಕೊಲೆ ಕೇಸ್ : ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕಮಲ್‍ಪಂತ್

ಬೆಂಗಳೂರು, ಏ.11- ಜೆಜೆ ನಗರದ ಯುವಕ ಚಂದ್ರು ಕೊಲೆ ಪ್ರಕರಣದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಮತ್ತು ಸರ್ಕಾರದ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದೆ. ಈ ಕೊಲೆ ಬೇರೆ ಕಾರಣ ಕ್ಕಾಗಿಯೇ ನಡೆದಿದೆ ಎಂದು ಕಮಲ್‍ಪಂತ್ ಹೇಳಿಕೆ ಕೊಟ್ಟು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಬಿಜೆಪಿಯ ಒಂದು ಗುಂಪು ಸರ್ಕಾರದ ಮೇಲೆ ಒತ್ತಡ ಹೇರಿದೆ.

ಉರ್ದು ಭಾಷೆ ಮಾತನಾಡಲು ಬಾರದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಬಿಜೆಪಿ ಆರೋಪ. ಆದರೆ, ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾಗಿದ್ದರಿಂದ ಮಾತಿಗೆ ಮಾತು ಬೆಳೆದು ಚಂದ್ರುನನ್ನು ಕೊಲೆ ಮಾಡಿದ್ದಾರೆಯೇ ಹೊರತು ಇದಕ್ಕೆ ಭಾಷೆ ಸಂಘರ್ಷ ಕಾರಣವಲ್ಲ ಎಂಬುದು ಕಮಲ್‍ಪಂತ್ ವಾದವಾಗಿದೆ.

ಮೊದಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೊಟ್ಟ ಹೇಳಿಕೆಯನ್ನು ನಂತರ ಹಿಂಪಡೆದು ತಪ್ಪಾಗಿದೆ ಎಂದು ಹೇಳಿದ್ದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿತ್ತು. ಬಿಜೆಪಿಯ ಸಾಲು ಸಾಲು ನಾಯಕರು ಇದಕ್ಕೆ ಭಾಷಾ ಸಂಘರ್ಷದ ಬಣ್ಣ ಕಟ್ಟಲು ಮುಂದಾಗಿದ್ದರು. ಆದರೆ, ಸ್ವತಃ ಕಮಲ್‍ಪಂತ್ ಅವರೇ ಇದು ಅನ್ಯಕಾರಣಕ್ಕಾಗಿ ನಡೆದಿರುವ ಘಟನೆ ಎಂದು ಹೇಳುತ್ತಿರುವುದು ಸರ್ಕಾರದ ವಿರೋಧವನ್ನು ಕಟ್ಟಿಕೊಳ್ಳುವಂತೆ ಮಾಡಿದೆ.

ಇದೀಗ ಚಂದ್ರು ಕುಟುಂಬದ ಸದಸ್ಯರು ಕೂಡ ನನ್ನ ಮಗನಿಗೆ ಉರ್ದು ಮಾತನಾಡಲು ಬಾರದಿದ್ದಕ್ಕೆ ಕೆಲವು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಡುತ್ತಿರುವುದು ಕಮಲ್‍ಪಂತ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದು ಕಡೆ ಕಮಲ್‍ಪಂತ್ ಹಾಗೂ ಮತ್ತೊಂದು ಕಡೆ ಗೃಹ ಸಚಿವರ ಹೇಳಿಕೆ ನಡುವೆ ವ್ಯತ್ಯಾಸ ಉಂಟಾಗುತ್ತಿರುವುದರಿಂದ ವಿರೋಧ ಪಕ್ಷಗಳು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ಮುಗಿ ಬಿದ್ದಿವೆ.

ನಗರ ಪೊಲೀಸ್ ಆಯುಕ್ತರ ಹೇಳಿಕೆಯೇ ಅಧಿಕೃತವಾಗಿರುವುದರಿಂದ ಸುಳ್ಳು ಹೇಳಿಕೆ ನೀಡಿರುವ ಆರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ದೂರು ದಾಖಲಿಸಬೇಕೆಂದು ವಿಪಕ್ಷಗಳು ಒತ್ತಡ ಹಾಕಿವೆ.

ವರ್ಗಾವಣೆಗೆ ಹೆಚ್ಚಿದ ಒತ್ತಡ:
ನಾನು ಘಟನೆಯ ಸತ್ಯಾಂಶವನ್ನು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದೇನೆ ಎಂದು ಕಮಲ್ ಪಂತ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ಕೆಲ ಸಚಿವರು ಮತ್ತು ಶಾಸಕರು ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಒಂದು ವೇಳೆ ಸಿಐಡಿ ತನಿಖೆಯಲ್ಲಿ ಉರ್ದು ಭಾಷೆ ಬಾರದಿದ್ದಕ್ಕೆ ಚಂದ್ರು ಕೊಲೆಯಾಗಿದೆ ಎಂಬುದು ದೃಢಪಟ್ಟರೆ ಕಮಲ್‍ಪಂತ್ ಕ್ಷಮೆ ಕೇಳುವುದಿಲ್ಲ ಅಥವಾ ಅವರಿಗೆ ಶಿಕ್ಷೆಯೂ ಆಗುವುದಿಲ್ಲ. ಈಗ ಮುಜುಗರಕ್ಕೆ ಸಿಲುಕಿರುವುದು ಸರ್ಕಾರ. ಹೀಗಾಗಿ ಅವರನ್ನು ವರ್ಗಾವಣೆ ಮಾಡಲೇಬೇಕೆಂದು ಕೆಲವು ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ.

ಈ ಹಿಂದೆಯೇ ಕಮಲ್‍ಪಂತ್ ವರ್ಗಾವಣೆಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ತೆರವಾಗಲಿರುವ ಈ ಸ್ಥಾನಕ್ಕೆ ಕೆಲವು ಹಿರಿಯ ಅಧಿಕಾರಿಗಳ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಬಿಜೆಪಿಯಲ್ಲೇ ಕಮಲ್‍ಪಂತ್‍ಗೆ ಪ್ರಭಾವಿ ನಾಯಕರೊಬ್ಬರ ಕೃಪಾಶಿರ್ವಾದ ಇರುವುದರಿಂದ ವರ್ಗಾವಣೆಗೆ ಬ್ರೇಕ್ ಬಿದ್ದಿತ್ತು.

ಆದರೆ, ಈಗ ಚಂದ್ರು ವಿಷಯದಲ್ಲಿ ಸರ್ಕಾರ ಮತ್ತು ಪಂತ್ ನಡುವೆ ಸಂಘರ್ಷ ಉಂಟಾಗಿರುವುದರಿಂದ ಎತ್ತಂಗಡಿಯಾದರೂ ಅಚ್ಚರಿ ಇಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಕಳೆದ ನಾಲ್ಕು ದಿನಗಳಿಂದಲೇ ಬಿಜೆಪಿಯ ಗಟಾನುಘಟಿ ನಾಯಕರು ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಪಕ್ಷದ ಒತ್ತಡಕ್ಕೆ ಮಣಿದು ಸಿಎಂ ವರ್ಗಾವಣೆ ಮಾಡುತ್ತಾರೋ ಇಲ್ಲ ಮುಂದುವರೆಸುತ್ತಾರೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.