ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಕ್ರಮ ನಿಶ್ಚಿತ : ಕಮಲ್‍ ಪಂಥ್

ಬೆಂಗಳೂರು, ಆ.19- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಭೆಗಳಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್‍ಪಂಥ್ ತಿಳಿಸಿದ್ದಾರೆ.

ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಅಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ವಿಷಯ ಹೇಳಲು ಸಾಧ್ಯವಿಲ್ಲ ಎಂದರು.

ಗಲಭೆಗೆ ಸಂಬಂಸಿದಂತೆ ಕೆಲ ಆರೋಪಿಗಳನ್ನು ಈಗಾಗಲೇ ಬಂಸಿ ವಿಚಾರಣೆ ಮಾಡಲಾಗುತ್ತಿದೆ. ಬಂಧನದ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.

ಪ್ರಕರಣಗಳ ತನಿಖೆ ಪ್ರಗತಿ ಬಗ್ಗೆ ಈಗಾಗಲೇ ಅಕಾರಿಗಳ ಜತೆ ಸಭೆ ನಡೆಸಿ ಚರ್ಚೆ ಮಾಡಿದ್ದೇನೆ. ಕೆಲವು ಸಲಹೆ-ಸೂಚನೆ ನೀಡಿರುವುದಾಗಿ ಅವರು ಹೇಳಿದರು. ಸಿಸಿಬಿ ಪೊಲೀಸರು ಸಹ ಕೆಲವು ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ತಿಳಿಸಿದರು.

# ಗಲಭೆ: ಅಕಾರಿಗಳೊಂದಿಗೆ ಪಂಥ್ ಚರ್ಚೆ :
ಬೆಂಗಳೂರು, ಆ.19- ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಇಂದು ನಗರ ಪೊಲೀಸ್ ಕಮಿಷನರ್ ಕಮಲ್‍ಪಂಥ್ ಅವರು ಭೇಟಿ ನೀಡಿ ಗಲಭೆಗೆ ಸಂಬಂಸಿದಂತೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಅಕಾರಿಗಳ ಜತೆ ಚರ್ಚೆ ನಡೆಸಿದರು.

ದಾಖಲಾಗಿರುವ ಎಫ್‍ಐಆರ್‍ಗಳನ್ನು ಯಾವ ರೀತಿ ತನಿಖೆ ಮಾಡಬೇಕು, ಯಾವ ರೀತಿಯ ಮೊಹಜರು ನಡೆಸಬೇಕು, ಸಾಕ್ಷ್ಯಾಧಾರಗಳನ್ನು ಯಾವ ರೀತಿ ಸಂಗ್ರಹಿಸಬೇಕೆಂಬುದರ ಬಗ್ಗೆ ಆಯುಕ್ತರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ಪ್ರತಿಯೊಂದು ಪ್ರಕರಣಗಳನ್ನೂ ಗಂಭೀರವೆಂದು ಪರಿಗಣಿಸಿ ಸೂಕ್ಷ್ಮವಾಗಿ ತನಿಖೆ ಮಾಡಬೇಕೆಂದು ತಿಳಿಸಿರುವ ಆಯುಕ್ತರು, ಇದುವರೆಗೂ ಗಲಭೆಗೆ ಸಂಬಂಸಿದಂತೆ ಎಷ್ಟು ಮಂದಿಯನ್ನು ಬಂಸಲಾಗಿದೆ ಎಂಬುದರ ಬಗ್ಗೆ ಅಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.

ಒಂದು ವೇಳೆ ಅಂದಿನ ಗಲಭೆ ಸಂದರ್ಭದಲ್ಲಿ ಭಾಗಿಯಾಗದೆ ಇರುವವರನ್ನು ವಿಚಾರಣೆಗೆ ಕರೆತಂದಿದ್ದರೆ ಕೂಲಂಕಶವಾಗಿ ಪರಿಶೀಲಿಸಿ ಅವರು. ಗಲಭೆಯಲ್ಲಿ ಭಾಗಿಯಾಗಿಲ್ಲ ಎಂಬುದು ಕಂಡುಬಂದರೆ ಮಾತ್ರ ಅವರನ್ನು ವಾಪಸ್ ಕಳುಹಿಸಿ ಎಂದು ಆಯುಕ್ತರು ಸಲಹೆ ನೀಡಿದ್ದಾರೆ.

ಗಲಭೆಯಲ್ಲಿ ಎಷ್ಟು ವಾಹನಗಳು ಬೆಂಕಿಗೆ ಆಹುತಿಯಾಗಿವೆ, ಇಲಾಖೆಗೆ ಸೇರಿದ ವಾಹನಗಳೆಷ್ಟು, ಸಾರ್ವಜನಿಕರಿಗೆ ಸೇರಿದ ವಾಹನಗಳೆಷ್ಟು ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಅವರ ಸಂಬಂಕರ ಮನೆ ಸೇರಿದಂತೆ ಎಷ್ಟು ಮನೆಗಳಿಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ಗಲಭೆ ಸಂದರ್ಭದಲ್ಲಿ ಪ್ರಮುಖವಾಗಿ ಯಾರ ಮನೆಗಳಲ್ಲಿ ಚಿನ್ನ, ಬೆಳ್ಳಿ, ನಗದು ದೋಚಿದ್ದಾರೆ, ಇದಕ್ಕೆ ಸಂಬಂಸಿದ ದೂರುಗಳು ಎಷ್ಟು ಬಂದಿವೆ, ಯಾವುವು, ಆ ದೂರುಗಳನ್ನು ಬಹಳ ಗಂಭೀರತೆಯಿಂದ ತನಿಖೆ ಮಾಡಿ ಎಂದರು.

ಗಲಭೆ ವೇಳೆ ಹಣ, ಆಭರಣ ದೋಚಿ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರ ಬಂಸಿ ಎಂದು ಸೂಚಿಸಿದ ಆಯುಕ್ತರು, ಪ್ರತಿಯೊಂದು ಪ್ರಕರಣವನ್ನೂ ಗಂಭೀರ ಪ್ರಕರಣವೆಂದು ಪರಿಗಣಿಸಿ ತನಿಖೆ ಮಾಡಿ ಎಂದರು.

ಡಿಸಿಪಿ, ಎಸಿಪಿ ಹಾಗೂ ಇನ್ಸ್‍ಪೆಕ್ಟರ್‍ಗಳ ಜತೆ ಚರ್ಚೆ ನಡೆಸಿದ ಕಮಲ್‍ಪಂಥ್ ಅವರು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಬೇಡಿ. ನಾವು ನಿಮ್ಮ ಜತೆ ಇದ್ದೇವೆ. ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಿ ಎಂದು ಹೇಳಿದರು. ನಿಮಗೆ ಬೇಕಾಗಿರುವ ಸೌಲಭ್ಯಗಳನ್ನು ಸರ್ಕಾರ ಹಾಗೂ ಇಲಾಖೆ ವತಿಯಿಂದ ನೀಡುತ್ತೇವೆ. ಯಾವುದೇ ಸಂದರ್ಭದಲ್ಲೂ ಭಯ ಪಡಬೇಡಿ ಎಂದು ಆಯುಕ್ತರು ಅಕಾರಿಗಳಿಗೆ ಧೈರ್ಯ ತುಂಬಿದರು.

ಇದೇ ವೇಳೆ ಕಲ್ಲು ತೂರಾಟ ಹಾಗೂ ಬೆಂಕಿಯಿಂದ ಜಖಂಗೊಂಡಿದ್ದ ಠಾಣೆಯ ಕಿಟಕಿ, ಬಾಗಿಲುಗಳನ್ನು ಗಮನಿಸಿದ ಅವರು ಠಾಣೆ ಮುಂದೆ ಬೆಂಕಿಗಾಹುತಿಯಾದ ವಾಹನಗಳನ್ನು ಪರಿಶೀಲಿಸಿದರು. ನಂತರ ಕೆಜಿ ಹಳ್ಳಿ ಠಾಣೆಗೆ ಭೇಟಿ ನೀಡಿ ಅಲ್ಲೂ ಸಹ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿದರು.

Sri Raghav

Admin