ಬೆಂಗಳೂರು, ಫೆ.19- ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾ ತಪಸ್ವಿ ರಾಜೇಶ್ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷ ವಯಸ್ಸಿನ ರಾಜೇಶ್ ಅವರನ್ನು ಫೆ.9ರಂದು ಉಸಿರಾಟದ ತೊಂದರೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 7.30ರ ಸುಮಾರಿಗೆ ರಾಜೇಶ್ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.ವಿದ್ಯಾರಣ್ಯಪುರದಲ್ಲಿರುವ ಸ್ವಗೃಹದಲ್ಲಿ ಇಂದು ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ರಾಜೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ವರನಟ ಡಾ.ರಾಜ್‍ಕುಮಾರ್, ಕಲ್ಯಾಣ್‍ಕುಮಾರ್, ಉದಯ್‍ಕುಮಾರ್ ಮತ್ತಿತರ ಹಿರಿಯ ನಟರ ಸಮಕಾಲೀನವರಾಗಿದ್ದ ರಾಜೇಶ್ ಅವರು ನೂರಾರು ಕನ್ನಡ ಚಿತ್ರಗಳನ್ನು ರಚಿಸಿ ಜನಮನ ಗೆದ್ದಿದ್ದರು.ರಾಜೇಶ್ ಅವರ ಪುತ್ರಿ ಆಶಾ ಅವರನ್ನು ಅರ್ಜುನ್ ಸರ್ಜಾ ಅವರು ವಿವಾಹವಾಗಿದ್ದಾರೆ.ಮೂಲತಃ ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್ ಅವರ ಮೂಲ ಹೆಸರು ಮುನಿಚೌಡಪ್ಪ. ಚಿಕ್ಕ ವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ರಂಗಭೂಮಿಯತ್ತ ಆಕರ್ಷಣೆ ಬೆಳೆಸಿಕೊಂಡರು.ತಂದೆ-ತಾಯಿಗೆ ತಿಳಿಯದಂತೆ ಸುದರ್ಶನ ನಾಟಕ ಮಂಡಳಿ ಸೇರಿದ ಮುನಿಚೌಡಪ್ಪ ಅವರು ನಂತರ ಸ್ವಂತ ಶಕ್ತಿ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದರು.
ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾದೀಪ, ಚಂದ್ರೋದಯ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ನಾಟಕಗಳ ಮೂಲಕ ಗಮನ ಸೆಳೆದಿದ್ದರು.ಲೋಕೋಪಯೋಗಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ರಾಜೇಶ್ ಅವರು ಹುಣಸೂರು ಕೃಷ್ಣಮೂರ್ತಿ ಅವರ ವೀರ ಸಂಕಲ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶ್ರೀರಾಮಾಂಜನೇಯ ಯುದ್ಧ, ಗಂಗೆ ಗೌರಿ ಮುಂತಾದ ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದರು. 1968ರಲ್ಲಿ ತೆರೆಕಂಡ ನಮ್ಮ ಊರು ಚಿತ್ರದ ಮೂಲಕ ತಮ್ಮ ಹೆಸರನ್ನು ರಾಜೇಶ್ ಎಂದು ಬದಲಾಯಿಸಿಕೊಂಡರು. ಆ ಚಿತ್ರದ ಮೂಲಕ ಯಶಸ್ವಿ ಗಾಯಕರಾಗಿಯೂ ರಾಜೇಶ್ ಗುರುತಿಸಿಕೊಂಡರು.
Koo Appಕನ್ನಡ ಚಿತ್ರರಂಗದ ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಶ್ರೀ ರಾಜೇಶ್ ಅವರು ನಿಧನರಾದ ಸುದ್ದಿ ತೀವ್ರ ಆಘಾತ ತಂದಿದೆ. 150 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ರಾಜೇಶ್ ಅವರ ನಿಧನ ಕನ್ನಡ ಕಲಾ ರಂಗಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏– Araga Jnanendra (@aragajnanendra) 19 Feb 2022
ಬಿಳುಪು, ಬೃಂದಾವನ, ಬೋರೇಗೌಡ ಊರು, ಗಂಗೆ-ಗೌರಿ, ಸತಿ ಸುಕನ್ಯ, ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯಿತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬೆಳವಲದ ಮಡಿಲಲ್ಲಿ, ಕಪ್ಪು, ಬಿಡುಗಡೆ, ದೇವರ ದುಡ್ಡು, ಕಲಿಯುಗ, ಪಿತಾಮಹ ಮುಂತಾದ ಚಿತ್ರಗಳಲ್ಲಿ ರಾಜೇಶ್ ನಾಯಕನಟರಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.