ಕನ್ನಡಕ್ಕೆ ಸ್ಪಂದಿಸದ ಬ್ಯಾಂಕ್‍ಗಳನ್ನ ಧಿಕ್ಕರಿಸಿ : ದೊಡ್ಡರಂಗೇಗೌಡರು

Social Share

ಹಾವೇರಿ,ಜ.6- ಕನ್ನಡ ಭಾಷೆಯಲ್ಲಿ ಕಾರ್ಯನಿರ್ವಹಿಸದ ಬ್ಯಾಂಕುಗಳು, ಸರ್ಕಾರಿ ಉದ್ಯಮಿಗಳು, ಖಾಸಗಿ ಸಂಸ್ಥೆಗಳನ್ನು ಮುಲಾಜಿಲ್ಲದೆ ಧಿಕ್ಕರಿಸಬೇಕು. ಹಾಗಿದ್ದರೆ ಮಾತ್ರ ಮಾತೃಭಾಷೆ ಉಳಿಯಲು ಸಾಧ್ಯ ಎಂದು 86ನೇ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಡಾ. ದೊಡ್ಡರಂಗೇಗೌಡ ಕರೆ ನೀಡಿದ್ದಾರೆ.

ಇಂದಿನಿಂದ ಇಲ್ಲಿನ ಕನಕದಾಸ- ಶ ರೀಫ- ಸರ್ವಜ್ಞ ವೇದಿಕೆಯಲ್ಲಿ ಆರಂಭವಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದೆಲ್ಲೆಡೆ ಕನ್ನಡದಲ್ಲೇ ಸೇವೆ ನೀಡುವಂತೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಬಲವಾಗಿ ಆಗ್ರಹಿಸಿದರೆ ಸಹಜವಾಗಿ ಉದ್ಯೋಗಗಳಲ್ಲಿ ಕನ್ನಡಿಗರ ಸಂಖ್ಯೆ ಖಾಸಗಿವಲಯದಲ್ಲೂ ಗಣನೀಯ ಹೆಚ್ಚಳವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ವಿಧಾನಮಂಡಲದಲ್ಲಿ ಇತ್ತೀಚೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ – 2022 ಅನ್ನು ಮಂಡಿಸಲಾಗಿದೆ. ಕನ್ನಡವನ್ನು ಅಧಿಕೃತ ರಾಜ್ಯಭಾಷೆಯಾಗಿ ತೀರ್ಮಾನಿಸುವ, ಅಡಳಿತ ಮತ್ತು ನ್ಯಾಯಾಂಗದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಅಂಶಗಳೂ ಸೇರಿದಂತೆ ಹಲವು ಉತ್ತಮ ಅಂಶಗಳಿವೆ. ಈ ಮಸೂದೆಯನ್ನು ಕಾಯಿದೆಯಾಗಿ ಸಮರ್ಥವಾಗಿ ಅನುಷ್ಠಾನಗೊಳಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ಇಂದು ಬಹುರಾಷ್ಟ್ರೀಯ ಸಂಸ್ಥೆಗಳ ನವೋದ್ಯಮಗಳ ತವರಾಗಿದೆ. ಆದರೆ ಇಂದು ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗಗಳನ್ನು ನೀಡುತ್ತಿಲ್ಲ. ಅದರಲ್ಲಿಯೂ ಬೆಂಗಳೂರು ನವೋದ್ಯಮಗಳ ರಾಜಧಾನಿಯಾಗಿದೆ.

ಕನಕನ ನಾಡಲ್ಲಿ ಮೊಳಗಿದ ಕನ್ನಡ ಕಹಳೆ

ಕನ್ನಡದಲ್ಲಿ ವಿವಿಧ ಬಗೆಯ ಸೇವೆಯನ್ನು ಒದಗಿಸುವ ನವೋದ್ಯಮಗಳಿಗೆ ಸರ್ಕಾರವು ವಿಶೇಷ ಪ್ರೋತ್ಸಾಹವನ್ನು ನೀಡಬೇಕು. ಅಲ್ಲದೇ, ಆಂಗ್ಲ ಭಾಷೆಯಲ್ಲಿ ಮಾತ್ರವೇ ಸೇವೆಯನ್ನು ಒದಗಿಸುತ್ತಿರುವ ವಿವಿಧ ಆನ್‍ಲೈನ್ಸೇವಾ ಉದ್ಯಮಗಳಿಗೆ ಕನ್ನಡದಲ್ಲಿ ಸೇವೆ ಒದಗಿಸಲು ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕನ್ನಡವನ್ನು ವ್ಯಾಪಿಸಲು ಸರ್ಕಾರವು ವಿಶೇಷ ನೀತಿಯೊಂದನ್ನು ರೂಪಿಸಬೇಕೆಂದು ಹೇಳಿದರು.

ಗಡಿ ವಿವಾದ: ಎಚ್ಚರಿಕೆ ನೀಡಿರುವ ಕನ್ನಡಿಗರು:
ತಮ್ಮ ಭಾಷಣದಲ್ಲಿ ಡಾ. ದೊಡ್ಡರಂಗೇಗೌಡರು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದವನ್ನು ಪ್ರಸ್ತಾಪಿಸಿ, ಬೆಳಗಾವಿ ಎಲ್ಲಿಗೆ ಸೇರಬೇಕು ಎಂಬ ವಿಷಯಗಳು ಬಂದಾಗ ಕರ್ನಾಟಕದ ಜನ ಒಟ್ಟಾಗಿ ಉತ್ತರ ಕೊಟ್ಟಿದ್ದಾರೆ. ಕನ್ನಡದ ಒಂದು ಅಂಗುಲ ನೆಲವನ್ನೂ ಬೇರೆಯವರಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಖ್ಯಾತೆ ತೆಗೆದು ಬಂದವರ ಖಾತೆಗಳೇ ಇಲ್ಲವಾಗಿಸಬಲ್ಲರು ಕನ್ನಡಿಗರು ಎಂದು ಎಚ್ಚರಿಕೆ ಕೊಟ್ಟರು.

ನಾಡಿಗೆ ಅವಮಾನವಾದರೆ ನಮಗೆ ಅವಮಾನ. ನುಡಿಗೆ ಅವಮಾನವಾದರೆ ಕೆರಳುತ್ತೇವೆ. ನಮ್ಮ ಅಭಿಮಾನ ನಾಡು, ನುಡಿಗೆ ಅನ್ಯಾಯವಾಗಲು ನಾವು ಕನ್ನಡಿಗರು ಬಿಡುವುದಿಲ್ಲ. ನಮ್ಮಲ್ಲಿ ಒಗ್ಗಟು ಇದೆ; ಪರಾಕ್ರಮವೂ ಇದೆ. ಎದುರಿಸುವ ಕೆಚ್ಚೂ ನೆಚ್ಚೂ ಆತ್ಮವಿಶ್ವಾಸ ಇದ್ದೇ ಇದೆ. ಬೆಳಗಾವಿಯನ್ನು ನಾವು ಕನ್ನಡಿಗರು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಇದು ನಮ್ಮ ಇಚ್ಛೆ ಇದು ನಮ್ಮ ಹೃದಯಂತರಾಳದ ವಾಂಛೆ! ನಮ್ಮದಲ್ಲದ ನೆಲವನ್ನು ನಾವು ಅಪೇಕ್ಷಿಸುವುದಿಲ್ಲ. ನಮ್ಮ ರಾಜ್ಯದ ಸ್ವತ್ತನ್ನು ನಮ್ಮ ಸರ್ಕಾರ ಕೂಡ ಬಿಟ್ಟು ಕೊಡುವುದಿಲ್ಲ. ಇದು ಸತ್ಯದ ಮಾತು ! ಇದು ಪ್ರತಿನಿತ್ಯದ ಮಾತು ಎಂದು ಗುಡುಗಿದರು.

ಕಾಸರಗೋಡಿನಲ್ಲಿ ಕನ್ನಡ ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗೆ ಹೆಚ್ಚಿನ ಗಮನವನ್ನು ಕೊಡಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸವಾಗಬೇಕು. ಅಲ್ಲಿ ಮಲೆಯಾಳೀಕರಣ ಭರದಿಂದ ನಡೆದಿದೆ. ಕನ್ನಡ ವಿದ್ಯಾರ್ಥಿಗಳು ಕನ್ನಡ ಬಾರದ ಅಧ್ಯಾಪಕರಿಂದ ಪಾಠ ಕೇಳಬೇಕಾದ ವಿಪರ್ಯಾಸದ ಪರಿಸ್ಥಿತಿ ಅಲ್ಲಿದೆ. ಈ ಬಗ್ಗೆ ಗಮನಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡರು.

ಕನ್ನಡಿಗರಿಗೆ ಸಮಸ್ಯೆಗಳು ಇಂದು ಕಿತ್ತು ತಿನ್ನುತ್ತಿವೆ. ಅದರಲ್ಲಿ ಬೇರೆ ರಾಜ್ಯಗಳಿಂದ ಬಂದ ವಲಸಿಗರ ಸಮಸ್ಯೆ ಉಲ್ಬಣವಾಗುತ್ತಿದೆ. ಕನ್ನಡೇತರರು ಇಲ್ಲಿಗೆ ಕೆಲಸ ಅರಸಿ ಬಂದು ಇಲ್ಲಿ ನೆಲೆ ನಿಂತರೆ ಹಾಗೆ ನೆಲೆಗೊಂಡವರು ಕನ್ನಡವನ್ನು ಪ್ರೀತಿಯಿಂದ ಕಲಿಯಬೇಕು, ಇಲ್ಲವಾದರೆ ಕನ್ನಡ ಕಾರ್ಯಕರ್ತರು ಕನ್ನಡವನ್ನು ಕಲಿಸುತ್ತಾರೆ. ಅವರಿಗೆ ಇಲ್ಲಿಯ ನೆಲ ಬೇಕು; ಇಲ್ಲಿಯ ಜಲ ಬೇಕು. ಇಲ್ಲಿಯ ಸಕಲ ಸಂಪನ್ಮೂಲ ಬೇಕು, ಅದರೆ ಅಂಥವರಿಗೆ ಕನ್ನಡ ಬೇಕಾಗಿಲ್ಲ! ಹೀಗೆ ಹೇಳಿದರೆ ಹೇಗೆ ? ಎಂದು ಪ್ರಶ್ನಿಸಿದರು.

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಕಡ್ಡಾಯಕ್ಕೆ ಕಾನೂನು : ಬೊಮ್ಮಾಯಿ

ಕನ್ನಡಿಗರ ಜೊತೆ ಸ್ನೇಹ ಪ್ರೀತಿ ವಿಶ್ವಾಸಗಳಿಂದ ಕನ್ನಡೇತರರು ಒಂದಾಗಿ ಸೌಹಾರ್ದದಿಂದ ಬಾಳಿ ಬದುಕಬೇಕು. ಐ.ಎ.ಎಸ್. ಮುಂತಾದ ಹಿರಿಯ ಅಕಾರಿಗಳು ಕನ್ನಡ ಕಲಿಯಬೇಕು. ಸರ್ಕಾರ ಅಂಥವರಿಗೆ ಮೂರು ತಿಂಗಳ ಅಥವಾ ಆರು ತಿಂಗಳ ಕನ್ನಡ ಕಲಿ-ನಲಿ ಎಂಬ ಪ್ರಶಿಕ್ಷಣ ಕೊಡಬೇಕು.

ಅನೇಕರು ಇನ್ನೂ ಆಂಗ್ಲ ಭಾಷೆಯಲ್ಲೇ ಟಿಪ್ಪಣಿ ಬರೆಯುತ್ತಾರೆ. ಅವರಿಗೆ ಕನ್ನಡಿಗರ ಎಚ್ಚರಿಕೆಯ ಮಾತು ಇಷ್ಟೇ; ನಿಯತ್ತಿನಿಂದ ಕನ್ನಡ ಕಲಿತು ಆಡಳಿತ ನಡೆಸಿ. ಕನ್ನಡ ನಾಡಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆದ್ಯತೆ! ಇಲ್ಲಿ ಕನ್ನಡಕ್ಕೆ ಮೊದಲ ಮಣೆ ಸಂದಾಯ ಆಗಬೇಕು. ಇನ್ನೆಲ್ಲವೂ ಗೌಣ. ಕನ್ನಡ ಕಲಿಯುವುದೆಂದರೆ ಕರ್ನಾಟಕದ ದೇಸಿ ಭಾಷೆಯ ಆಳ ಅಗಲಗಳ ಅರಿಯುವುದು. ಕನ್ನಡ ಸಂಸ್ಕೃತಿ ತಿಳಿಯುವುದು ಎಂದು ಒತ್ತಿ ಹೇಳಿದರು.

ಐದನೇ ತರಗತಿವರೆಗೆ ಕನ್ನಡ ಕಲಿಕೆಯನ್ನು ಸರ್ಕಾರ ಕಡ್ಡಾಯ ಗೊಳಿಸಬೇಕು, ಆ ಮೇಲೆ ಆ ಮಗುವಿನ ಬೌದ್ಧಿಕ ಸಾಮಥ್ರ್ಯದ ಮೇಲೆ ಎಷ್ಟು ಭಾಷೆಗಳನ್ನಾದರೂ ಕಲಿಯಲಿ. ನಮ್ಮ ವಿರೋಧವಿಲ್ಲ. ಇದು ಸೈದ್ಧಾಂತಿಕ ತರ್ಕ. ಆಗಲೇ ಬೇಕಾದ ಕಾರ್ಯ. ಈ ಬಗ್ಗೆ ಗಮನಕೊಡಲಿ ಎಂದು ಹೇಳಿದರು. ನಮ್ಮ ನಲ್ಮೆಯ ಸರ್ಕಾರ.

Kannada, banks, Doddarange Gowda, kannada sahitya sammelana,

Articles You Might Like

Share This Article