ರಾಜ್ಯದಲ್ಲಿ ಕನ್ನಡ ಕಡ್ಡಾಯ ಕಾನೂನು : ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆ

Social Share

ಬೆಂಗಳೂರು,ಸೆ.14-ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದ್ದು, ಕಾನೂನಾತ್ಮಕವಾಗಿ ಕನ್ನಡವನ್ನು ಕಡ್ಡಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಜೆಡಿಎಸ್ ಶಾಸಕರು ಹಿಂದಿ ದಿವಸ್ ಆಚರಣೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಅಗ್ರಮಾನ್ಯ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು. ಇದುವರೆಗೂ ಕನ್ನಡ ಕಡ್ಡಾಯಗೊಳಿಸಲು ಕಾನೂನು ಸ್ವರೂಪ ಇರಲಿಲ್ಲ.

ಹೀಗಾಗಿ ಮೊದಲ ಬಾರಿಗೆ ಇದೇ ಅವೇಶನದಲ್ಲಿ ಕನ್ನಡ ಕಡ್ಡಾಯಗೊಳಿಸಲು ವಿಧೇಯಕವನ್ನು ತರಲಾಗುವುದು ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೇರೆ ಬೇರೆ ಸಮಿತಿಗಳು ಇದ್ದರೂ ಕನ್ನಡ ಕಡ್ಡಾಯಗೊಳಿಸಲು ಕಾನೂನು ಸ್ವರೂಪ ಇರಲಿಲ್ಲ. ರಾಜ್ಯದಲ್ಲಿ ಅನ್ಯಭಾಷಿಗರಿಗೂ ಕನ್ನಡ ಕಲಿಯಲು ಒತ್ತು ನೀಡುವುದರ ಜತೆಗೆ ಒತ್ತಾಯ ಮಾಡುತ್ತೇವೆ.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ

ಈಗಾಗಲೇ ವೃತ್ತಿಪರ ಕೋರ್ಸ್‍ನಲ್ಲೂ ಕನ್ನಡವನ್ನು ಅನುಷ್ಠಾನಕ್ಕೆ ತರಲಾಗಿದೆ. ಎಂಜಿನಿಯರ್ ಕೋರ್ಸ್‍ನ ಒಂದು ಸೆಮಿಸ್ಟರ್ ಕನ್ನಡದಲ್ಲೇ ಮುಗಿದಿದೆ. ವೃತ್ತಿಪರ ಕೋರ್ಸ್‍ಗಳಲ್ಲೂ ಕನ್ನಡ ಬಳಕೆಗೆ ಪ್ರೋತ್ಸಾಹ ಕೊಡಲಾಗುತ್ತಿದೆ ಎಂದರು.

ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಿರ್ಣಯ ಮಾಡಲಾಗಿದೆ. ಭಾಷೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಭಾರತ ವಿವಿಧ ಭಾಷೆ ಒಳಗೊಂಡ ಒಕ್ಕೂಟ ವ್ಯವಸ್ಥೆ. ಯಾವುದೇ ಭಾಷೆಯನ್ನು ಹೇರಲು ಅವಕಾಶವಿಲ್ಲ. ಪ್ರಧಾನಮಂತ್ರಿಯವರು ಪ್ರಾದೇಶಿಕ ಭಾಷೆಯನ್ನೂ ಕೂಡ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಾರೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಕನ್ನಡ ಭಾಷೆ ರಕ್ಷಣೆ ಮಾಡಲು ಹಾಗೂ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಸದನದ ಹೊರಗೆ ಧರಣಿ ಮಾಡಿದ್ದೇವೆ. ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶ ನಮ್ಮ ಶಾಸಕರದ್ದಲ್ಲ. ದೇಶದಲ್ಲಿ 56ಕ್ಕೂ ಹೆಚ್ಚು ಭಾಷೆಗಳಿವೆ. ಆದರೆ, ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಭಾಷೆ ನಿಲುವನ್ನು ತಳೆದಿದೆ. ಆಯಾ ರಾಜ್ಯಗಳಲ್ಲಿ ಅವರದ್ದೇ ಆದ ಭಾಷೆ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಪ್ರಾದೇಶಿಕ ಭಾಷೆಗಳ ಕತ್ತು ಹಿಸುಕಬಾರದು ಎಂದು ಮನವಿ ಸಲ್ಲಿಸುವುದು ನಮ್ಮ ಉದ್ದೇಶ ಎಂದರು.

ಇದಕ್ಕೂ ಮುನ್ನ ಜೆಡಿಎಸ್ ಶಾಸಕರಾದ ಡಾ.ಅನ್ನದಾನಿ, ವೆಂಕಟರಾವ್ ನಾಡಗೌಡ ಮತ್ತಿತರರು ಹಿಂದಿ ದಿವಸ್ ಆಚರಣೆ ಕುರಿತು ಮಾತನಾಡಲು ಮುಂದಾದಾಗ ಸಭಾಧ್ಯಕ್ಷರು, ಯಾವುದೇ ನೋಟಿಸ್ ಕೊಟ್ಟಿಲ್ಲ. ಎಲ್ಲರೂ ಎದ್ದು ನಿಂತು ಮಾತನಾಡಿದರೆ ಹೇಗೆ ಎಂದು ಗರಂ ಆದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಎಚ್.ಡಿ.ಕುಮಾರಸ್ವಾಮಿ, ಹಿಂದಿ ದಿವಸ್ ಆಚರಣೆ ವಿಷಯವನ್ನು ಪ್ರಸ್ತಾಪಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Articles You Might Like

Share This Article