ಬೆಂಗಳೂರು,ಜ.25- ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಡ್ಡಾಯಗೊಳಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ಸ್ಥಳೀಯ ಭಾಷೆ ಓದಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ. ಹೈ ಕೋರ್ಟ್ ಈ ನಿಟ್ಟಿನಲ್ಲಿ ಮಧ್ಯಂತರ ಆದೇಶ ಹೊರಡಿಸಿರುವ ಹಿನ್ನೆಲೆ ಸರ್ಕಾರವೂ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಈಗಾಗಲೇ ಕನ್ನಡ ಆಯ್ಕೆ ಮಾಡಿದ ವಿದ್ಯಾರ್ಥಿಗಳು ತಾವು ಇಚ್ಛಿಸುವ ಭಾಷೆಯನ್ನು ಆಯ್ಕೆ ಮಾಡುವ ಅವಕಾಶ ಇದೆ. ಹೊಸ ಭಾಷೆಗೆ ಹಾಜರಾತಿಯನ್ನು ಹೊಂದಾಣಿಕೆ ಮಾಡಲಾಗುವುದು. ವಿವಿಯ ಎಲ್ಲಾ ಉಪಕುಲಪತಿಗಳು, ಖಾಸಗಿ ವಿವಿಯ ರಿಜಿಸ್ಟ್ರಾರ್?ಗಳಿಗೆ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜಿನ ಪ್ರಾಂಶುಪಾಲರಿಗೆ ಈ ಸಂಬಂಧ ನಿರ್ದೇಶನ ನೀಡಲಾಗಿದೆ.
ಸರ್ಕಾರ ಆಗಸ್ಟ್ 7, 2021ರ ತನ್ನ ಆದೇಶದಲ್ಲಿ ರಾಜ್ಯದಲ್ಲಿ ಪದವಿ ಮಾಡುವ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಕಾ ಭಾಷೆಯಾಗಿ ಆಯ್ಕೆ ಮಾಡುವಂತೆ ಹೇಳಿತ್ತು. ಎನ್ ಇಪಿ ಪ್ರಕಾರ, ಈ ಆದೇಶ ಹೊರಡಿಸಲಾಗಿತ್ತು.
ಸಂಸ್ಕೃತ ಭಾರತಿ ಟ್ರಸ್ಟ್ ಮತ್ತು ಇತರ ಸಂಘಟನೆಗಳು ಹಾಗೂ ಕೆಲ ವಿದ್ಯಾರ್ಥಿಗಳು ಸರ್ಕಾರದ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಸಂದರ್ಭದಲ್ಲಿ ಕಲಿಕಾ ಭಾಷೆಯನ್ನು ಕಡ್ಡಾಯವಾಗಿ ಹೇರಬಾರದು. ಮುಂದಿನ ಆದೇಶದವರೆಗೆ ಕನ್ನಡ ಭಾಷೆ ಕಡ್ಡಾಯಗೊಳಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
