ಸರ್ಕಾರದ ಅಧಿಕೃತ ಆದೇಶಗಳಲ್ಲಿ ಕನ್ನಡ ದೋಷವಾದರೆ ಸಂಬಳ ಕಟ್

Social Share

ಬೆಂಗಳೂರು,ಜು.18- ರಾಜ್ಯ ಸರ್ಕಾರಿ ನೌಕರರೇ ಎಚ್ಚರ! ಸರ್ಕಾರದ ಆದೇಶಗಳು ಅಥವಾ ಸುತ್ತೋಲೆಗಳನ್ನು ಕನ್ನಡದಲ್ಲಿ ರಚಿಸುವಾಗ ತಪ್ಪು ತಪ್ಪಾಗಿ ಟೈಪಿಂಗ್ ಅಥವಾ ವ್ಯಾಕರಣದಲ್ಲಿ ದೋಷವಾದರೆ, ಸಂಬಳದಲ್ಲಿ ಕಡಿತವಾಗಲಿದೆ, ಮುಂಬಡ್ತಿ ಕೂಡಾ ನಿರಾಕರಿಸಲಾಗುತ್ತದೆ.

ಈ ಸಂಬಂಧ ಮುಂಬರುವ ವಿಧಾನಮಂಡಲದ ಉಭಯ ಸದನಗಳಲ್ಲಿ ಕನ್ನಡದ ಸುತ್ತೋಲೆಗಳನ್ನು ತಪ್ಪು ತಪ್ಪಾಗಿ ಮುದ್ರಣ ಮಾಡುವ ಇಲ್ಲವೇ ವ್ಯಾಕರಣ ದೋಷ ಮಾಡುವವರ ಮೇಲೆ ಶಿಸ್ತು ಕ್ರಮ ಜರುಗಿಸಲು ಹಾಲಿ ಇರುವ ನಿಯಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ತಿದ್ದುಪಡಿ ಮಾಡಲು ಮುಂದಾಗಿದೆ.

ವಿಧಾನಸಭೆ ಹಾಗೂ ವಿಧಾನಮಂಡದಲ್ಲಿ, ವಿಧಾನಪರಿಷತ್‍ನಲ್ಲಿ ಹೊಸ ಕಾಯ್ದೆ ಜಾರಿಯಾಗಿ ಅನುಷ್ಠಾನಕ್ಕೆ ಬಂದರೆ ಆಕಸ್ಮಿಕವಾಗಿ ಇಲ್ಲವೇ ಕಣ್ತಪ್ಪಿಯೋ ಹಾಗೂ ದುರುದ್ದೇಶಪೂರ್ವಕವಾಗಿ ಸರ್ಕಾರದ ಸುತ್ತೋಲೆಗಳಲ್ಲಿ ಕನ್ನಡವನ್ನು ಅಪಮಾನಿಸಿದರೆ ಅಂಥವರ ವೇತನ ಕಡಿತ, ಮುಂಬಡ್ತಿಗೆ ತಡೆ ಹಾಗೂ ಕೆಲವು ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂಬ ನಿಯಮಗಳನ್ನು ರೂಪಿಸಲು ತಯಾರಿ ನಡೆದಿದೆ.

ಇಲಾಖೆಯ ಸಚಿವರಾದ ನಂತರ ಕೆಲವು ಸುಧಾರಣೆಗಳನ್ನು ಜಾರಿ ಮಾಡಿ ಜನಮನ ಗೆದ್ದಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್‍ಕುಮಾರ್ ಅವರು, ನಿಯಮಗಳಿಗೆ ತಿದ್ದುಪಡಿ ಮಾಡಿ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ಅಗತ್ಯ ಸಿದ್ದತೆಗಳನ್ನುಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಮತ್ತು ಪೋಟೋ ತೆಗೆಯುವ ಆದೇಶವನ್ನು ಕಳೆದ ಶುಕ್ರವಾರ ಸರ್ಕಾರ ಹೊರಡಿಸಿತ್ತು. ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ತಡರಾತ್ರಿ ಹಿಂಪಡೆಯಲಾಯಿತು.
ಹಿಂಪಡೆದ ಆದೇಶದಲ್ಲಿ ಸಾಕಷ್ಟು ಕಾಗುಣಿತ ದೋಷಗಳು ಕಂಡುಬಂದಿದ್ದವು. ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಅದನ್ನು ಹಿಂಪಡೆದು ಸರ್ಕಾರ ಹೊರಡಿಸಿದ ಹೊಸ ಆದೇಶದಲ್ಲಿ ಕರ್ನಾಟಕ ಸೇರಿದಂತೆ ಹಲವು ಪದಗಳಲ್ಲಿ ವ್ಯಾಕರಣ ದೋಷಗಳು ಕಂಡುಬಂದಿದ್ದವು. ಇದರಿಂದಾಗಿ ಸರ್ಕಾರ ತೀವ್ರ ಮುಜುಗರಕ್ಕೆ ಸಿಲಿಕಿತು.

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಚಿವ ಸುನೀಲ್‍ಕುಮಾರ್ ಅವರು, ಸರ್ಕಾರಿ ಅಧಿಸೂಚನೆ ಇಲ್ಲವೇ ಕಡತಗಳಲ್ಲಿ ಕನ್ನಡವನ್ನೇ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಈ ನಿಯಮವನ್ನು ಜಾರಿ ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧಿಸೂಚನೆ ಹೊರಡಿಸುವ, ಟೈಫಿಂಗ್ ಮಾಡುವ ಅಧಿಕಾರಿಗಳು ಭಾಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಈ ಪ್ರಮಾದ ಆಗಿದ್ದು, ಪದೇ ಪದೇ ಕನ್ನಡ ನಿರ್ಲಕ್ಷ್ಯ ಮಾಡುವ ಅಕಾರಿಗಳ ಮೇಲೆ ಬಿಸಿ ಮುಟ್ಟುಸಲು ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ.

ಕೆಲವು ವೇಳೆ ಇಂಗ್ಲೀಷ್‍ನಲ್ಲಿ ಆದೇಶ ಅಥವಾ ಸುತ್ತೋಲೆ ರಚಿಸುವಾಗ ಅಥವಾ ಗೂಗಲ್ ಟ್ರಾನ್ಸ್ಲೇಟ್ ನೆರವು ಪಡೆಯುತ್ತಿರುವುದರಿಂದಲೂ ಈ ರೀತಿಯ ತಪ್ಪುಗಳು ಆಗುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುವವರು ರಾಜ್ಯದ ಭಾಷೆಯನ್ನು ಬಲ್ಲವರಾಗಿರಬೇಕು ಎಂಬುದು ಸುನೀಲ್‍ಕುಮಾರ್ ಅವರ ಆಶಯವಾಗಿದೆ.

ಟೈಪಿಂಗ್ ಮಾಡಿದವರು ಸೇರಿದಂತೆ ಆದೇಶದ ಪತ್ರಕ್ಕೆ ಸಹಿ ಮಾಡಿ ಹೊರಡಿಸಿದ ಅಕಾರಿಗಳ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಕಾರಿಗಳಿಗೆ ಕಳುಹಿಸುತ್ತಿದ್ದಾರೆ. ಸರ್ಕಾರಿ ಆದೇಶ, ಅಸೂಚನೆ ಮತ್ತಿತರ ದಾಖಲಾತಿಗಳಲ್ಲಿ ತಪ್ಪು ಮಾಡಿದವರ ಹೆಸರನ್ನು ಸರ್ವೀಸ್ ರೆಕಾರ್ಡ್‍ನಲ್ಲಿ ಸೇರಿಸಬೇಕು, ಈ ರೀತಿ ಆದಾಗ ಅವರ ಸಂಬಳ ಏರಿಕೆಯಾಗುವುದಿಲ್ಲ ಜೊತೆಗೂ ಮುಂಬಡ್ತಿಯೂ ಸಿಗುವುದಿಲ್ಲ.

ಬಹುತೇಕ ಅಧಿಸೂಚನೆ ಅಥವಾ ಸುತ್ತೋಲೆಗಳನ್ನು ಪ್ರಥಮ ಅಥವಾ ದ್ವಿತೀಯ ದರ್ಜೆ ಸಹಾಯಕರಿಂದ ಬೆರಳಚ್ಚು(ಟೈಪ್) ಮಾಡಿಸಲಾಗುತ್ತದೆ. ಅವರಿಗೆ ಕನ್ನಡ ಭಾಷೆ ಗೊತ್ತಿರುತ್ತದೆ. ಆದರೆ, ಕೆಲವು ವೇಳೆ, ಅವರು ತಡರಾತ್ರಿ ಟೈಪ್ ಮಾಡುವುದು ಮತ್ತಿತರ ಒತ್ತಡಕ್ಕೆ ಸಿಲುಕಿರುತ್ತಾರೆ. ಆದ್ದರಿಂದ ಓದಲು, ತಪ್ಪಿರುವುದನ್ನು ಸರಿಪಡಿಸಲು ಸಾಕಷ್ಟು ಸಮಯವಿರುವುದಿಲ್ಲ ಎಂದು ಡಿಪಿಎಆರ್ ಮೂಲಗಳು ತಿಳಿಸಿವೆ.

Articles You Might Like

Share This Article