ಹಾವೇರಿ, ಜ.6- ಏಲಕ್ಕಿ ನಾಡು ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ, ನಾಡು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವ ಮೂಲಕ ಅಕ್ಷರ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಸಮ್ಮೇಳನ ನಡೆಯುವ ಮುಖ್ಯ ವೇದಿಕೆ ಎದುರು ಬೆಳಗ್ಗೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಸಾಹಿತ್ಯ ಉತ್ಸವಕ್ಕೆ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಭುವನೇಶ್ವರಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡ ಧ್ವಜದ ಧ್ವಜಾರೋಹಣ ನೆರವೇರಿಸಿದರು.
ಹಾವೇರಿಯ ಹುಕ್ಕೇರಿ ಮಠದಿಂದ ಮೆರವಣಿಗೆ ಆರಂಭವಾಗಿದ್ದು, ನಗರದ ಐತಿಹಾಸಿಕ ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಹಾವೇರಿಯ 23 ಕಲಾ ತಂಡಗಳು ಭಾಗಿಯಾಗಿದ್ದವು. ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 102 ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಸಾಗಿದವು.
ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ
ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಮತ್ತು ಚಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ, ರಣಕಹಳೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ಮಹಿಳಾ ವೀರ ಗಾಸೆ, ಸಂಬಳ ವಾದ್ಯ, ಮೋಜಿನ ಕುಣಿತ, ವೀರಭದ್ರ ಕುಣಿತ ಹೀಗೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು.
ಧ್ವಜರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಶಿವರಾಮ್ ಹೆಬ್ಬಾರ್, ನಾವು ಬಹಳ ಸಂತೋಷದಿಂದ ಇವತ್ತಿನ ಕಾರ್ಯಕ್ರಮದ ಧ್ವಜರೋಹಣ ಮಾಡಿದ್ದೇವೆ.
ಈ ಹಿಂದೆ ಯಾವತ್ತೂ ಆಗದ ರೀತಿಯ ಸಾಹಿತ್ಯ ಸಮ್ಮೇಳನ ಇದಾಗಲಿದೆ. ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ತಪ್ಪು ಸಂದೇಶ ಹೋಗಬಾರದು. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದರು.
ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಸೇರಿದಂತೆ ಪ್ರತಿಯೊಬ್ಬರ ಭಾಷಣಕ್ಕೂ ಸಮಯ ನಿಗದಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸಮಯ ನಿಗದಿ ಸಾಹಿತಿಗಳಿಗೆ ಹೊರತು ರಾಜಕಾರಣಿಗಳಿಗಲ್ಲ. ಸಾಹಿತಿಗಳು ನಿಗದಿ ಮಾಡಿದ ಸಮಯದಲ್ಲಿ ವಿಚಾರ ಮಂಡನೆ ಮಾಡಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ, ಹಾವೇರಿಗೆ ಪವಿತ್ರ ಯೋಗ ಇದೆ. ನೀವು-ನಾವು ಎಲ್ಲರೂ ಸಂಭ್ರಮಿಸುವ ಕ್ಷಣವಿದು. ಇಲ್ಲಿನ ಜನ, ಸಂಸ್ಕøತಿ ನನ್ನ ಮೇಲೆ ಪ್ರಭಾವ ಬೀರಿದೆ. ಸಮ್ಮೇಳನವನ್ನು ಜಾತ್ರೆ ಅಂತ ಹೇಳ್ತಾ ಇದಾರೆ. ಸಾಹಿತಿಗಳ ಸಮ್ಮಿಲನ ಇದು. ನೆಲ ಜಲ ಭಾಷೆ ವಿಚಾರವಾಗಿ ಈ ಸಮ್ಮೇಳನ ಪ್ರಭಾವ ಬೀರಲಿದೆ ಎಂದರು.
kannada, sahitya sammelana, Haveri,