ಫ್ಯಾಟ್ ಸರ್ಜರಿ ವೇಳೆ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಸಾವು..!

Spread the love

ಬೆಂಗಳೂರು, ಮೇ 17- ಕನ್ನಡ ಕಿರುತೆರೆ ನಟಿ ಚೇತನಾ ರಾಜ್ (21) ನವರಂಗ್ ವೃತ್ತದ ಬಳಿ ಇರುವ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಚೇತನಾ ರಾಜ್ ಫ್ಯಾಟ್ ಸರ್ಜರಿ ಮಾಡಿಸಲು ಹೋಗಿ ತಮ್ಮ ಜೀವಕ್ಕೆ ಕುತ್ತು ತಂದು ಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ನವರಂಗ್ ವೃತದ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಕೊಬ್ಬನ್ನು ಕರಗಿಸಲು ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆ ನಡೆಯುವಾಗಲೇ ನಟಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರು ತುಂಬಿ ಕೂಡಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಶಸ್ತ್ರಚಿಕಿತ್ಸೆಗೆ ಅಗತ್ಯ ಸಲಕರಣೆ ಹಾಗೂ ಪೋಷಕರ ಅನುಮತಿ ಕೇಳದೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಹೊರಟಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚೇತನಾ ಸಾವಿನಿಂದ ಪೋಷಕರ ರೋದನ ಮುಗಿಲುಮುಟ್ಟಿದೆ. ಕಿರುತೆರೆ, ಹಿರಿತೆರೆಯಲ್ಲಿ ಮಿಂಚುತ್ತಿದ್ದ ಮಗಳು ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ಮಗಳ ಸಾವಿಗೆ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರು ಕಾರಣ ಎಂದು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಗಳ ಸಾವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ಚೇತನಾ ರಾಜ್ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು ಹಾಗೂ ಇನ್ನೂ ತೆರೆ ಕಾಣದ ಹವಾಯಾಮಿ ಎಂಬ ಹೊಸ ಸಿನಿಮಾದಲ್ಲೂ ನಟನೆ ಮಾಡಿದ್ದರು.
21 ಹರೆಯದ ಯುವ ನಟಿ ಅಗಲಿದಿರುವುದಕ್ಕೆ ಚಿತ್ರರಂಗ ಮತ್ತು ಕಿರುತೆರೆಯ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments