ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ಕಡ್ಡಾಯಕ್ಕೆ ಕಾನೂನು : ಬೊಮ್ಮಾಯಿ

Social Share

ಹಾವೇರಿ,ಜ.6- ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಶೇ.80ರಷ್ಟು ಉದ್ಯೋಗ ಕೊಡುವ ಕಾನೂನನ್ನು ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಆರಂಭವಾದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ತಮ್ಮ 20 ನಿಮಿಷಗಳ ಭಾಷಣದಲ್ಲಿ ಕನ್ನಡ, ಸಾಹಿತ್ಯ, ಸಂಸ್ಕøತಿ, ಭಾಷೆ, ಬೆಳೆದು ಬಂದ ಪರಂಪರೆ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಬೇಕು ಎಂಬುದು ಬಹುದಿನಗಳ ಒತ್ತಾಸೆಯಾಗಿದೆ. ಶೇ.80ರಷ್ಟು ಉದ್ಯೋಗ ಕೊಡುವ ಕಾನೂನನ್ನು ಜಾರಿಗೆ ಮಾಡುತ್ತೇವೆ. ಆದಷ್ಟು ಶೀಘ್ರ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಪ್ರಕಟಿಸಿದರು.

ಕನ್ನಡಕ್ಕೆ ಹತ್ತು ಹಲವಾರು ಸಮಸ್ಯೆಗಳಿವೆ. ಅವುಗಳನ್ನು ನಿವಾರಿಸುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶಗಳಲ್ಲೊಂದು. ಆಡಳಿತ ಹಂತದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಐತಿಹಾಸಿಕ ತೀರ್ಮಾನ ಸರ್ಕಾರ ತೆಗೆದುಕೊಂಡಿದೆ. ಈಗಾಗಲೇ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ಕಾಯ್ದೆಯನ್ನು ಮಂಡನೆ ಮಾಡಲಾಗಿದೆ ಎಂದರು.

ಕಾನೂನು ಆಯೋಗ ಇದಕ್ಕೆ ಅಂತಿಮ ಸ್ವರೂಪ ಕೊಡುತ್ತಿದೆ. ಕೇವಲ ಸರ್ಕಾರದ ಮಟ್ಟದಲ್ಲಿ ಮಾತ್ರ ಚರ್ಚೆಯಾದರೆ ಕಾನೂನಿಗೆ ಹೆಚ್ಚಿನ ಪುಷ್ಠಿ ಬರುವುದಿಲ್ಲ. ಸಾರ್ವಜನಿಕ ವಲಯದಲ್ಲೂ ಚರ್ಚೆಯಾಗಬೇಕಾಗಿದೆ. ವ್ಯಾಪಕ ಚರ್ಚೆಯಾದ ನಂತರ ಇದು ಅನುಷ್ಠಾನವಾಗಲಿದೆ ಎಂದು ಹೇಳಿದರು.

ಕರುನಾಡ ಅಭಿವೃದ್ಧಿ ಜೊತೆಗೆ ಗಡಿನಾಡ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಆ ಭಾಗದ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಬದ್ಧವಾಗಿದೆ ಎಂದು ಸಿಎಂ ಭರವಸೆ ನೀಡಿದರು.

ಶಾಲೆಗಳ ಅಭಿವೃದ್ಧಿ ಜತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಸಹ ನಮ್ಮ ಜತೆಗೆ ಕೊಂಡೊಯ್ಯಬೇಕು. ಮಹರಾಷ್ಟ್ರ ಗಡಿ ಭಾಗದಲ್ಲಿರುವ ಶಾಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಕನ್ನಡ ಭಾಷಾ ಬೆಳವಣಿಗೆಗೆ ನಮ್ಮ ಸರ್ಕಾರ ತೆಗೆದುಕೊಂಡಿರುವ ಬದ್ಧತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಜತೆಗೆ ನಾಡ ಹೊರಗಿರುವ ಕನ್ನಡಿಗರ ರಕ್ಷಣೆಯನ್ನು ನಾವು ಮಾಡುತ್ತೇವೆ. ಸಮ್ಮೇಳನದ ನಿರ್ಣಯಗಳನ್ನು ಸರ್ಕಾರ ಚಾಚು ತಪ್ಪದೆ ಜಾರಿಗೆ ತರುವ ಕೆಲಸ ಮಾಡುತ್ತದೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಅಭಯ ನೀಡಿದರು.

ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ

ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೀರಾವರಿ ಯೋಜನೆಗಳು ನಡೆಯುತ್ತಿವೆ. ಮುಂದಿನ ಒಂದು ದಶಕ ನೀರಾವರಿ ದಶಕ ಎಂದು ಘೋಷಣೆ ಮಾಡಲಾಗುತ್ತದೆ. ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಇದರಿಂದ ಕೃಷಿ ವಲಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಹತ್ತು ಕೃಷಿ ವಲಯಗಳು 365 ದಿನ ಸೂರ್ಯನ ಬೆಳಕಿನಿಂದ ವರ್ಷ ಪೂರ್ತಿ ಒಂದಿಲೊಂದು ಬೆಳೆ ಬೆಳೆಯಲಾಗಯತ್ತಾದೆ. ರೈತನ ಬೆವರು ಹಾಗೂ ಕಾರ್ಮಿಕರ ಶ್ರಮದಿಂದ ಈ ನಾಡು ಕಟ್ಟಲಾಗುತ್ತಿದೆ. ಅವರ ಬದುಕನ್ನು ಹಸನಗೊಳಿಸುವ ಕೆಲಸ ನಮ್ಮ ಸರ್ಕಾರದಿಂದ ಆಗಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನು ತಮ್ಮ ಭಾಷಣದಲ್ಲಿ ಬೊಮ್ಮಾಯಿ ಅವರು ಕನ್ನಡ ಹಾಗೂ ಅದು ಬೆಳೆದು ಬಂದ ಬೆಳವಣಿಗೆ ಕುರಿತು ಸಿಂಹಾವಲೋಕನ ಮಾಡಿದರು. ಜಗತ್ತಿನ ಭಾಷೆಗಳಲ್ಲಿ ಕನ್ನಡ ಅತ್ಯಂತ ಪ್ರಾಚೀನವಾದದ್ದು, ಕಾರಣ ಅತ್ಯಂತ ದೊಡ್ಡ ಚರಿತ್ರೆ ಇರುವುದು ಕನ್ನಡದ ಸಂಸ್ಕøತಿಗೆ. ಕನ್ನಡ ಸಂಸ್ಕøತಿಗೆ ಭಾವ ತುಂಬಿ ಬದುಕು ಕೊಟ್ಡಿದ್ದು ಸಾಹಿತ್ಯ ಕ್ಷೇತ್ರ. ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸಾಹಿತ್ಯ ಸಮ್ಮೇಳನದ ಉದ್ದೇಶ ಎಂದರು.

ಒಂದು ಭಾಷೆ ನಡೆದು ಬಂದ ಬಗ್ಗೆ ಸಿಂಹಾವಲೋಕನ ಮಾಡಿಕೊಳ್ಳಬೇಕು. ಕನ್ನಡ ಭಾಷೆ ಎಂದಿಗೂ ಬಡವಾಗಿಲ್ಲ. ಸೂರ್ಯ- ಚಂದ್ರ ಇರುವವರೆಗೂ ಕನ್ನಡ ಶ್ರೀಮಂತವಾಗಿರುತ್ತದೆ. ಕನ್ನಡಕ್ಕೆ ಆಪತ್ತು ಎನ್ನುವ ಭಾವನೆ ಇದೆ. ಆದರೆ, ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ಜಗತ್ತಿನಲ್ಲಿ ಹುಟ್ಟಿಲ್ಲ ಎಂದು ಭಾಷಾ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ರನ್ನ, ಪಂಪರಿಂದ ಹಿಡಿದು ಎಂಟು ಮಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಭಾಷೆ ಕನ್ನಡ. ಇಲ್ಲಿ ದೊಡ್ಡ ಸಾಹಿತಿಗಳ ಪಟ್ಟಿ ಇದೆ. ಬೇರೆ ಯಾವುದೇ ಭಾಷೆಗೆ ಇಷ್ಟೊಂದು ಜ್ಞಾನಪೀಠ ಪ್ರಶಸ್ತಿ ಬಂದಿಲ್ಲ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿವೆ. ಇವೆರಡು ನಿರಂತರವಾಗಿ ಕನ್ನಡವನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ತೆಗೆದುಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕ ಭಾಗದ ಹೋರಾಟಗಾರರು, ದಕ್ಷಿಣ ಕರ್ನಾಟಕದ ಕುವೆಂಪು, ಬಸವರಾಜ ಹೊಸಮನಿ, ಗುದ್ಲೆಪ್ಪ ಹಳ್ಳಿಕೇರಿ, ಮೈಲಾರ ಮಾದೇವ ನಂತ ಹೊರಾಟಗಾರರು ಕರ್ನಾಟಕವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರೆಲ್ಲರ ಶ್ರಮದ ಫಲವೇ ಅಖಂಡ ಕರ್ನಾಟಕ ನಿರ್ಮಾಣವಾಯಿತು. ಇದನ್ನು ಉಳಿಸಿಪೋಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕಿವಿಮಾತು ಹೇಳಿದರು.

ಈ ಸಮ್ಮೇಳನದ ಅಧ್ಯಕ್ಷರು ದೊಡ್ಡರಂಗೇಗೌಡರು, ಅವರು ಪರಿಪೂರ್ಣ ಸಾಹಿತಿಗಳು. ಅವರ ಹೆಸರಿನಲ್ಲಿ ಎರಡು ಮಹತ್ವ ಇದೆ. ದೊಡ್ಡ ಹೆಸರು ಮತ್ತು ರಂಗೇಗೌಡರು ಎಲ್ಲ ರಂಗದಲ್ಲೂ ಪ್ರಸಿದ್ದಿ ಪಡೆದವರು. ಪಂಚಾಕ್ಷರಿ ಗವಾಯಿಗಳು, ಹಾನಗಲ್ ಕುಮಾರಸ್ವಾಮಿಗಳು, ವಿಕೃ ಗೋಕಾಕ, ಪಾಟಿಲ್ ಪುಟ್ಟಪ್ಪ, ಚಂಪಾ ನಮ್ಮ ಜಿಲ್ಲಾಯವರು ಎಂದರು.

ಕನ್ನಡಿಗರ ಬದುಕು ಕಟ್ಟಿಕೊಳ್ಳಲು ಈ ವೇದಿಕೆ ಮೂಲಕ ಸಲಹೆಗಳು ಬರಲಿ ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿ. ಕನ್ನಡ ಹೆಮ್ಮರವಾಗಿ ಬೆಳೆಯಬೇಕು. ಈ ಎಲ್ಲ ಉದ್ದೇಶಗಳಿಂದ ಈ ಸಮ್ಮೇಳನ ನಡೆಯುತ್ತಿದೆ. ಸರ್ಕಾರ ಇಲ್ಲಿ ಜಾರಿಯಾಗುವ ನಿರ್ಣಯಗಳನ್ನು ಅನುಷ್ಠಾನ ಮಾಡಲಿದೆ ಎಂದು ಆಶ್ವಾಸನೆ ಕೊಟ್ಟರು.

ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ, ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಸುನಿಲ್ ಕುಮಾರ್, ಅರಬೈಲ್ ಶಿವರಾಮ್ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ನೆಹರೂ ಒಲೇಕಾರ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್, ಸಲೀಂ ಅಹಮದ್, ಎಸ್.ವಿ.ಸಂಕನೂರು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Kannadigas, employment, compulsory, CM Bommai, kannada sahitya sammelana, Haveri,

Articles You Might Like

Share This Article