ಬೆಂಗಳೂರು, ಜೂ.18- ಇಸ್ರೇಲ್‌ನಲ್ಲಿ ರಾತ್ರಿ ವೇಳೆ ಬಾಂಬ್ ಸ್ಫೋಟಿಸುತ್ತವೆ. ದಾಳಿಯಾಗುವ ಮುನ್ನ ನಮ್ಮ ಮೊಬೈಲ್‌ಗಳಿಗೆ ಸಂದೇಶ ಬರುತ್ತದೆ ಮತ್ತು ಸೈರನ್ ಕೂಡ ಕೇಳುತ್ತದೆ. ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತೇವೆ ಎಂದು ಕನ್ನಡಿಗರು ವಿವರಿಸಿದ್ದಾರೆ.
ಇಸ್ರೇಲ್‌ನ ಟೆಲ್ ಅವಿವ್‌ನಿಂದ ಸ್ವಲ್ಪದೂರದಲ್ಲೇ ಇರುವ ರಿಸಿನೊಲಿಜಿಯೊ ಪ್ರದೇಶದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಹಾಸನದ ಅಂತೋಣಿ ಮೇರಿ ಎಂಬುವರು ವಿಡಿಯೋ ಕಾಲ್ ಮೂಲಕ ತಮ್ಮ ತವರೂರಿನ ಜನರಿಗೆ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಹಾಸನದಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಇಸ್ರೇಲ್‌ನ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ.
ಮಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಸರ್ಕಾರ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆ, ಮೊನ್ನೆ ಸಮಸ್ಯೆಗಳಿದ್ದು, ಇಂದು ಸರಿ ಹೋಗಿದೆ. ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಆಸ್ಪತ್ರೆ, ಮಾಲ್‌ಗಳು, ಔಷಧಿ ಅಂಗಡಿಗಳು ತೆರೆದಿವೆ. ಜನ ಸಹಜವಾಗಿ ಓಡಾಡುತ್ತಿದ್ದಾರೆ ಎಂದರು.
ರಾತ್ರಿ ವೇಳೆ ಇಸ್ರೇಲ್ ದಾಳಿಯಾಗುತ್ತದೆ. ಆ ಸಂದರ್ಭಕ್ಕೆ ನಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ತಕ್ಷಣವೇ ನಾವು ಸುರಕ್ಷಿತ ಸ್ಥಳಗಳಿಗೆ ಅಥವಾ ಬಂಕರ್
ಗಳಿಗೆ ಸೇರಿಕೊಳ್ಳುತ್ತೇವೆ. ಈವರೆಗೂ ಅಂತಹ ಯಾವುದೇ ಅಪಾಯಗಳಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಬಾಂಬ್‌ಗಳು ಸ್ಫೋಟಿಸುವ ಸದ್ದು ಕೇಳಿಸುತ್ತಿರುತ್ತದೆ. ಬಂಕರ್‌ಗಳಿಗೆ ಸೇರಿದ್ದೇವೆ, ಯಾವುದೇ ಅಪಾಯವಾಗಿಲ್ಲ. ಇಲ್ಲಿನ ಜನ ತುಂಬಾ ಒಳ್ಳೆಯವರು. ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಬಂಕರ್‌ಗಳು ಸುಮಾರು 50 ಜನ ಉಳಿಯಬಹುದಾದಂತಹ ವಿಶಾಲವಾದ ಬಂಕರ್‌ಗಳಿರುತ್ತವೆ. ಭೂಮೇಲ್ಮ ಭಾಗದಲ್ಲಿರುವ ಕಟ್ಟಡದಿಂದ ತಳಭಾಗದಲ್ಲಿರುವ ಬಂಕರ್‌ಗೆ ತಲುಪಲು 2 ನಿಮಿಷ ಸಾಕು. ನಾವು ಕೆಲಸ ಮಾಡುವ ಕಡೆಯಲ್ಲಿ ಮೂರು ಬಂಕರ್‌ಗಳಿವೆ. ಸೈರನ್ ಕೇಳುತ್ತಿದ್ದಂತೆ ರೋಗಿಗಳನ್ನು ಕರೆದುಕೊಂಡು ಬಂಕರ್ ಸೇರಿಕೊಳ್ಳುತ್ತೇವೆ ಎಂದರು.
ಬಂಕರ್‌ಗಳನ್ನು ಬಾಂಬ್ ನಿರೋಧಕವಾಗಿ ನಿರ್ಮಿಸಲಾಗಿದೆ. ಬಾಂಬ್ ಅಥವಾ ಸೆಲ್ ಸಿಡಿದರೆ ಬಂಕರ್‌ನಲ್ಲಿರುವವರಿಗೆ ಯಾವುದೇ ಅಪಾಯಗಳಾಗುವುದಿಲ್ಲ.
ಹೊರಭಾಗದಲ್ಲಿದ್ದವರಿಗೆ ತೊಂದರೆಗಳಾಗಬಹುದು. ಕೆಲವು ಕಡೆ ಸಾವು-ನೋವುಗಳಾಗಿವೆ ಎಂದು ವಿವರಿಸಿದ್ದಾರೆ.ಸದ್ಯಕ್ಕೆ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅದು ಶುರುವಾದ ಬಳಿಕ ಬಹಳಷ್ಟು ಮಂದಿ ವಾಪಸ್ ಬರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.