ಬೆಂಗಳೂರು,ಫೆ.27-ಯುದ್ದಪೀಡಿತ ಉಕ್ರೇನ್‍ನಿಂದ 12 ವಿದ್ಯಾರ್ಥಿಗಳು ರಾಜ್ಯಕ್ಕೆ ಇಂದು ಮರಳಿದ್ದಾರೆ. ಉಕ್ರೇನ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ರಾಜ್ಯದ 12 ಮಂದಿ ವಿದ್ಯಾರ್ಥಿಗಳು ಮುಂಬೈ ಮೂಲಕ ಆಗಮಿಸಿದ್ದಾರೆ.ಮುಂಬೈನಿಂದ ಒಬ್ಬ ವಿದ್ಯಾರ್ಥಿ ಬೆಳಗಾವಿಗೆ ತೆರಳಿದರೆ, 11 ಮಂದಿ ವಿದ್ಯಾರ್ಥಿಗಳು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಕ್ರೇನ್‍ನಿಂದ ಬಂದಂತಹ ವಿದ್ಯಾಥಿಗಳನ್ನು ಕಂದಾಯ ಸಚಿವ ಆರ್.ಅಶೋಕ್ ಹಾಗೂ ನೋಡಲ್ ಅಧಿಕಾರಿ ಮನೋಜ್ ರಾಜನ್ ಸ್ವಾಗತಿಸಿದರು.
ತಾಯ್ನಾಡಿಗೆ ಮರಳಿದ 11 ವಿದ್ಯಾರ್ಥಿಗಳಿಗೂ ಅಶೋಕ್ ಅವರು ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು. ತಂದೆತಾಯಿ, ಬಂಧುಬಾಂಧವರು, ಸ್ನೇಹಿತರು ಸುರಕ್ಷಿತವಾಗಿ ಬಂದಿಳಿದ ವಿದ್ಯಾರ್ಥಿಗಳನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವಿದ್ಯಾರ್ಥಿಗಳಾದ ನಬಿಹಾಸ್ ಹುದಾ, ಸೈಯದಾ ಹಬೀಬಾ, ಪೂಜಾಕುಮಾರಿ ಯಾದವ್, ಸಂಪಂಗಿ ರಾಮರೆಡ್ಡಿ ಮೋನಿಕಾ, ಉದಯ ಕೆ.ವಿ, ಮೊಹಮದ್ ಅಬೀದ್ ಅಲಿ ಶೋಕತ್, ಇಂಚರ ರಾಜ್ ಶಿವರಾಜು, ತುಷಾರ್ ಮಧು, ವಿಜಯಲಕ್ಷ್ಮಿ ಚಕ್ರವರ್ತಿ, ಶ್ರೇಯಾ ಚಂದ್ರಶೇಖರ್, ರಿಯಾ ಕುಮಾರಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಆಮಿಸಿದರು.
ತವರಿಗೆ ಮರಳಿದ ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್‍ನಲ್ಲಿನ ಅನುಭವಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.ಭಯ, ಆತಂಕದ ನಡುವೆ ದಿನ ಕಳೆಯುತ್ತಿದ್ದೆವು. ನಾವು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ. ಅದೇ ರೀತಿ ಅಲ್ಲಿ ನೆಲೆಸಿರುವ ಎಲ್ಲ ಭಾರತೀಯರು ಸುರಕ್ಷಿತವಾಗಿ ಮರಳಬೇಕೆಂಬ ಅಪೇಕ್ಷಯನ್ನು ವ್ಯಕ್ತಪಡಿಸಿದರು.
ಸುರಕ್ಷಿತವಾಗಿ ವಾಪಸ್ ಬಂದ ಸಂತಸವಿದೆ. ಪ್ರತಿನಿತ್ಯವೂ ಪೋಷಕರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದವು. ಯುದ್ದ ನಡೆಯುತ್ತಿರುವ ಉಕ್ರೇನ್‍ನಲ್ಲಿ ಹಲವು ರೀತಿ ಸಮಸ್ಯೆಗಳನ್ನು ಎದುರಿಸಿದ್ದಾಗಿ ಹೇಳಿದರು.
ತಮ್ಮ ಮಕ್ಕಳು ಸುರಕ್ಷಿತವಾಗಿ ಮರಳಿದ್ದಕ್ಕಾಗಿ ತಂದೆತಾಯಿಗಳು ಕೂಡ ಸಂತೋಷ ಪಡುತ್ತಿದ್ದ ದೃಶ್ಯ ಕಂಡುಬಂದಿತು. ಜೊತೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮುಂದಿನ ಭವಿಷ್ಯ ಮತ್ತು ಅಧ್ಯಯನದ ಬಗ್ಗೆ ಕೂಡ ಏನಾಗುತ್ತದೆಯೋ ಎಂಬ ಕಳವಳ ವ್ಯಕ್ತಪಡಿಸಿದರು.
ದೆಹಲಿಗೆ ಆಗಮಿಸಿ ಕರ್ನಾಟಕ ಭವನದಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಅಶೋಕ್ ಅವರು ವಿಡಿಯೋ ಸಂವಾದದ ಮೂಲಕ ಸಂಪರ್ಕಿಸಿ ಯೋಗಾಕ್ಷೇಮವನ್ನು ವಿಚಾರಿಸಿದರು.
