ಮರಾಠ ನಿಗಮಕ್ಕೆ ತೀವ್ರ ವಿರೋಧ, ಕರವೇ ಪ್ರತಿಭಟನೆ ನಿರ್ಧಾರ

Spread the love

ಬೆಂಗಳೂರು, ನ.26- ಮರಾಠ ಅಭಿವೃದ್ಧಿ ನಿಗಮ ರಚನೆ ರಾಜಕೀಯ ಪ್ರೇರಿತ, ಸರ್ಕಾರದ ದುಡುಕಿನ ನಿರ್ಧಾರ ಹಾಗೂ ಅಸಾಂವಿಧಾನಿಕ ತೀರ್ಮಾನವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ವಿರೋಸುತ್ತದೆ ಎಂದು ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ವಿರೋಸಿ ಕರ್ನಾಟಕ ಬಂದ್‍ಗೆ ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಕ್ಷಣಾ ವೇದಿಕೆ ರಾಜ್ಯ ಪದಾಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಂದ್‍ಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

ರಾಜ್ಯ ಸರ್ಕಾರ ಇಂತಹ ಸೂಕ್ಷ್ಮ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಕರೆದು ಸೌಹಾರ್ದಯುತವಾಗಿ ಬಗೆಹರಿಸಬಹುದಿತ್ತು. ಆದರೆ, ಮುಖ್ಯಮಂತ್ರಿಗಳಾದಿಯಾಗಿ ಹಲವು ಶಾಸಕರು, ಬಿಜೆಪಿ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡಿ ಕನ್ನಡಿಗರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ಮರಾಠ ಸಮುದಾಯದ ವಿರುದ್ಧವಾಗಲಿ, ಮರಾಠಿ ಭಾಷಿಗರ ವಿರುದ್ಧವಾಗಲಿ ಇಲ್ಲ. ನಮ್ಮ ವಿರೋಧ ಇರುವುದು ಕನ್ನಡ ದ್ರೋಹದ ಚಟುವಟಿಕೆಗಳನ್ನು ಕನ್ನಡ ನೆಲದಲ್ಲಿ ನಡೆಸುವ ಎಂಇಎಸ್ ವಿರುದ್ಧ. ಗಡಿಯಾಚೆಯಿಂದ ಪ್ರಚೋದನೆ ನೀಡಿ ಕನ್ನಡಿಗರಿಗೂ, ಮರಾಠಿಗರಿಗೂ ಜಗಳ ತಂದಿಡುವ ಶಿವಸೇನೆ ಮತ್ತು ಎಂಇಎಸ್ ವಿರುದ್ಧ ಎಂದು ಅವರು ಹೇಳಿದರು.

ಸರ್ಕಾರವೇ ಚುನಾವಣಾ ರಾಜಕೀಯಕ್ಕಾಗಿ ಮರಾಠಿಗರು ಮತ್ತು ಕನ್ನಡಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿಗೆ ಕನ್ನಡಿಗರ ಮತ ಬೇಕಿಲ್ಲ ಎಂಬ ಉದ್ಧಟತನದ ಹೇಳಿಕೆಯನ್ನು ಬಿಜೆಪಿ ಶಾಸಕರು ನೀಡುತ್ತಾರೆ. ಅದನ್ನು ಅವರ ನಾಯಕರು ಸಮರ್ಥಿಸಿಕೊಳ್ಳುತ್ತಾರೆ. ಇದು ಬಿಜೆಪಿ ಪಕ್ಷದ ಅಭಿಪ್ರಾಯವೆಂದು ನಾವು ಭಾವಿಸಬೇಕಿದೆ ಎಂದು ಹೇಳಿದರು.

ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋದರೆ ಕನ್ನಡಿಗರು ಸರಿಯಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಜ್ಯಸರ್ಕಾರ ಅವೈಜ್ಞಾನಿಕವಾಗಿ, ರಾಜಕೀಯ ಪ್ರೇರಿತವಾಗಿ ಜಾತಿಗೊಂದು ಪ್ರಾಕಾರ, ನಿಗಮ-ಮಂಡಳಿ ರಚಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ನಿಗಮ-ಮಂಡಳಿಗಳು ವೈಜ್ಞಾನಿಕ ಆಧಾರವಾಗಬೇಕು. ಕನಿಷ್ಠ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೂಡ ಇಲ್ಲ. ಅನೇಕ ಸಮುದಾಯಗಳು ರಾಜ್ಯದಲ್ಲಿವೆ. ಅಂತಹ ಸಮುದಾಯಗಳಿಗೆ ಶಕ್ತಿ ತುಂಬಲು ನಿಗಮ-ಮಂಡಳಿಗಳನ್ನು ರಚಿಸಬೇಕಾದ ಅಗತ್ಯವಿದೆ ಎಂದು ನಾರಾಯಣಗೌಡ ತಿಳಿಸಿದರು.

ಜಿಎಸ್‍ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಕರ್ನಾಟಕ ರಾಜ್ಯಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗಿದೆ. ಪರಿಹಾರದ ಹಣ ನೀಡುವುದಿಲ್ಲ. ಬೇಕಿದ್ದರೆ ರಿಸರ್ವ್ ಬ್ಯಾಂಕ್‍ನಿಂದ ಸಾಲ ಪಡೆದುಕೊಳ್ಳಿ ಎಂದು ಹೇಳಿ ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆ ಮೇಲೆ ಮಾಡಿದ ದೊಡ್ಡ ಪ್ರಹಾರ.

ಇಂತಹ ಅನ್ಯಾಯದ ಜಿಎಸ್‍ಟಿ ವ್ಯವಸ್ಥೆ ನಮಗೆ ಬೇಕಾಗಿಲ್ಲ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ. ಪದೇ ಪದೇ ಚಳವಳಿ ನಡೆಸಿದರೂ ಕನ್ನಡದ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡುತ್ತಿಲ್ಲ. ಕರ್ನಾಟಕದಲ್ಲಿ ಉತ್ತರ ಭಾರತೀಯರನ್ನು ತುಂಬಲು, ವಲಸೆ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರದ ಇಲಾಖೆ ಉದ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗುವಂತೆ ಕೂಡಲೇ ಕಾನೂನು ಜಾರಿಗೊಳಿಸಬೇಕು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರಂತರ ಚಳವಳಿ ನಡೆಸುತ್ತೇವೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ನೆರೆಯಿಂದ 25 ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ಸಂತ್ರಸ್ತರು ಪ್ರತಿನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಸಚಿವರು, ಸಂಸದರು, ವಿಪಕ್ಷ ನಾಯಕರು ಕೇವಲ ರಾಜಕಾರಣದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರ ಕೇವಲ 577 ಕೋಟಿ ರೂ. ನೀಡಿ ಕೈ ತೊಳೆದುಕೊಂಡಿದೆ ಎಂದು ಆರೋಪಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರವೇ ನಡೆ ಬಿಜಾಪುರದ ಕಡೆ ಎಂದು ನೆರೆ ಸಂತ್ರಸ್ತರ ಪ್ರತಿಭಟನಾ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Facebook Comments