ಬೆಂಗಳೂರು,ಸೆ.18- ಶೇಕಡಾ 40% ಸರ್ಕಾರಕ್ಕೆ ಸುಸ್ವಾಗತ ಎಂದು ಹೈದರಾಬಾದ್‍ನಲ್ಲಿ ಹಾಕಿದ್ದ ಆಕ್ಷೇಪಾರ್ಹ ಫಲಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿ ಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂತಹ ಘಟನೆಗಳಿಂದ ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತೆಲಂಗಾಣದ ಭ್ರಷ್ಟಾಚಾರವನ್ನು ಕರ್ನಾಟಕದಲ್ಲಿ ಪ್ರಸ್ತಾಪಿಸಿದರೆ ಹೇಗಿರುತ್ತದೆ ಎಂದು ಅವರು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರಿಗೂ ಎಚ್ಚರಿಕೆ ಕೊಟ್ಟರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ಷಡ್ಯಂತ್ರ. ಇಂಥ ಬೆಳವಣಿಗೆಗಳಿಂದ ಕರ್ನಾಟಕ ಮತ್ತು ತೆಲಂಗಾಣ ನಡುವೆ ರಾಜಕೀಯ ಸಂಬಂಧಗಳು ಹಾಳಾಗುತ್ತವೆ ಈ ರೀತಿ ಯಾರೂ ಕೂಡ ಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈದರಾಬಾದ್‍ನಲ್ಲಿ 40% ಕಮೀಷನ್ ಸರ್ಕಾರಕ್ಕೆ ಸುಸ್ವಾಗತ ಎಂದು ಫ್ಲೆಕ್ಸ್ ಬೋರ್ಡ್ ಹಾಕಿದ್ದಾರೆ. ಇದಕ್ಕೆ ಯಾರು ಕೂಡ ಅವಕಾಶ ಕೊಡಬಾರದು. ಒಂದು ರಾಜ್ಯದ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ತೆಲಂಗಾಣದಲ್ಲಿ ಏನು ನಡೆಯುತ್ತದೆ ಎಂದು ನಾವು ಕರ್ನಾಟಕದಲ್ಲಿ ಫ್ಲೆಕ್ಸ್ ಬೋರ್ಡ್ ಹಾಕಿದರೆ ಹೇಗೆ? ಇದರಿಂದ ಎರಡೂ ರಾಜ್ಯಗಳ ನಡುವೆ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪ್ರಕರಣ ಕುರಿತಂತೆ ರಾಜಕೀಯ ಮಾಡುವುದು ಸರಿಯಲ್ಲ. ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಂದಕ್ಕೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಡೆಗೆ ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿದಾಗ 80 ಜನ ಸಾವನ್ನಪ್ಪಿದ್ದರು. ಆಗ ಯಾರೂ ಕೂಡ ಏನನ್ನೂ ಮಾಡಲಿಲ್ಲ. ಉಪದೇಶ ಮಾಡುವುದಕ್ಕೆ ಎಲ್ಲರಿಗೂ ಬರುತ್ತದೆ. ತಾಳ್ಮೆಯಿಂದ ಇರಬೇಕು ಎಂದು ಬೊಮ್ಮಾಯಿ ಮನವಿ ಮಾಡಿದರು.
ಹಿಂದೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕಾಗಿ ಮಸೂದೆ ಜಾರಿ ಮಾಡಲು ಮುಂದಾಗಿತ್ತು. ಇದನ್ನು ವಿರೋಸಿ ವೈದ್ಯರ ಸತತ 5 ದಿನ ಪ್ರತಿಭಟನೆ ನಡೆಸಿದರು. ಆಗ 80 ಜನ ಸತ್ತು ಹೋದರು. ಅದಕ್ಕೆ ಹೊಣೆಗಾರಿಕೆ ಹೊತ್ತು ಯಾರು ರಾಜೀನಾಮೆ ಕೊಟ್ಟಿದ್ದರು? ಪ್ರತಿಯೊಂದರಲ್ಲೂ ರಾಜಕಾರಣ ಮಾಡುವುದು ಕೆಟ್ಟ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಾಂಗ್ರೆಸ್‍ನ ಮಹಾನಾಯಕರ ಹೇಳಿಕೆ ಗಮನಿಸಿದ್ದೇನೆ. ನಾವು 5 ಸಾವಿರ ಕೋಟಿ ರೂ. ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಘೋಷಣೆ ಮಾಡಿದ್ದೇವೆ.
ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುವುದು ಬೇಡ. ರಾಜಕೀಯಕೋಸ್ಕರ ಮಾತನಾಡುವರ ಬಗ್ಗೆ ಮಾತನಾಡದೆ ಇರುವುದೇ ಸೂಕ್ತ ಎಂದು ತಿರುಗೇಟು ನೀಡಿದರು.