ಮೇಲ್ಮನೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ, ಸುದೀರ್ಘ ಚರ್ಚೆ

Social Share

ಬೆಂಗಳೂರು, ಸೆ.15- ವಿಧಾನಸಭೆಯಲ್ಲಿ ಈಗಾಗಲೇ ಅಂಗೀಕಾರಗೊಂಡಿರುವ ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನ ಪರಿಷತ್ನಲ್ಲಿಂದು ಮಂಡಿಸಿದಾಗ ಕಾಯ್ದೆಯ ಮೇಲೆ ಸುದೀರ್ಘ ಚರ್ಚೆ ನಡೆಯಿತು.
ಪ್ರಶ್ನೋತ್ತರ ಮತ್ತು ಶೂನ್ಯ ವೇಳೆಯ ಬಳಿಕ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಮಂಡನೆಗೆ ಅವಕಾಶ ಕಲ್ಪಿಸಿದರು.

ಸಚಿವ ಅರಗ ಜ್ಞಾನೇಂದ್ರ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಮಂಡಿಸಿ, ಇದು ಮಹತ್ವದ ಕಾಯ್ದೆ, ಪರಿಸ್ಥಿತಿ ಎಲ್ಲರಿಗೂ ಅರಿವಿದೆ. 2013ರಲ್ಲಿ ಕಾಂಗ್ರೆಸ್ ಸರ್ಕಾರವು ಈ ಕಾಯ್ದೆ ಕುರಿತು ಚಿಂತನೆ ನಡೆಸಿದೆ. ಸಂವಿಧಾನದ ವಿಧಿ25ರ ಪ್ರಕಾರ ಎಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆ ಹಾಗೂ ಧರ್ಮದಲ್ಲಿ ಬದುಕುವ ಹಕ್ಕಿದೆ.

ಆದರೆ ಇತ್ತೀಚೆಗೆ ಸಾಮೂಹಿಕ, ಬಲವಂತದ ಹಾಗೂ ಆಮಿಷದ ಮತಾಂತರ ನಡೆಯುತ್ತಿದೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಶಾಸಕರ ತಾಯಿಯೇ ಮತಾಂತರವಾಗಿದ್ದಾರೆ ಎಂದು ಹೇಳಿದರು. ಯಾರ ಧಾರ್ಮಿಕ ಸ್ವಾತಂತ್ರ್ಯವನ್ನು ಈ ಕಾಯ್ದೆ ಕಸಿಯುವುದಿಲ್ಲ. ಬಲ ಪ್ರಯೋಗ, ದುರ್ಮಾರ್ಗದಲ್ಲಿ ಮತಾಂತರ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಮತಾಂತರಕ್ಕೆ ಅಡ್ಡಿ ಇಲ್ಲ. ಆದರೆ ಆಮಿಷ, ಬಲವಂತವಾಗಿ ಅದು ನಡೆಯಬಾರದು ಎಂಬ ಕಾರಣಕ್ಕೆ ವಿಧೇಯಕ ರೂಪಿಸಲಾಗಿದೆ.

ತಾಂತರಗೊಳ್ಳುವವರು ಸ್ವಇಚ್ಚೆಯಿಂದ ಧರ್ಮ ಬದಲಾವಣೆ ಮಾಡುತ್ತಿದ್ದೇನೆ ಎಂದು ಘೋಷಿಸಬೇಕು. ಮತಾಂತರ ಮಾಡುವವರು ಯಾರನ್ನು ಮತಾಂತರ ಮಾಡುತ್ತಿದ್ದೇವೆ ಎಂದು ಪ್ರಕಟಿಸಬೇಕು. ಅದನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಲಿದ್ದಾರೆ. ಮತಾಂತರಗೊಂಡವರು ಹುಟ್ಟಿನಿಂದ ಜಾತಿಯ ಕಾರಣಕ್ಕೆ ಪಡೆಯುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ.

ಈ ಮೊದಲಿನ ಪರಿಸ್ಥಿತಿಯಲ್ಲಿ ಮತಾಂತರಗೊಂಡಿದ್ದರೂ ಹಲವರು ಜಾತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದರು. ಇನ್ನೊಂದೆಡೆ ಮತಾಂತರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಇದರಿಂದ ವಿಶೇಷವಾಗಿ ಹಾಲಿ ಇರುವ ದಲಿತರಿಗೆ ಸೌಲಭ್ಯಗಳು ವಂಚನೆಯಾಗುತ್ತಿದ್ದವು. ರಾಜ್ಯ ಸರ್ಕಾರ ರೂಪಿಸಿರುವ ಕಾಯ್ದೆ ಇದಕ್ಕೆಲ್ಲಾ ಕಡಿವಾಣ ಹಾಕಲಿದೆ ಎಂದರು.

ವಿಧೇಯಕದ ಮೇಲೆ ಚರ್ಚೆ ಆರಂಭಿಸಿದ ಬೋಜೆಗೌಡರು, ಸಂವಿಧಾನದಲ್ಲಿ ಹಲವು ಬಾರಿ ತಿದ್ದುಪಡಿಗಳಾಗಿವೆ. ಈ ವಿಧೇಯಕ ಕುರಿತು ಸಮಗ್ರವಾಗಿ ಚರ್ಚೆಯಾಗಬೇಕಿದೆ ಎಂದರು. ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಂವಿಧಾನದ ಕಲಂ25ರ ಮೂಲ ಆಶಯಗಳನ್ನು ವಿವರಿಸಿದರು. ಸಂವಿಧಾನ ಮತ್ತು ನ್ಯಾಯಾಲಯಗಳ ತೀರ್ಪಿನ ಅನುಸಾರ ಈ ವಿಧೇಯಕ ತಂದಿರುವುದು ನಿಯಮ ಬಾಹಿರ.

ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ಮೂರನೇ ಎರಡರ ಸಂಖ್ಯಾಬಲದಲ್ಲಿ ಸಂಸತ್ನಲ್ಲಿ ವಿಧೇಯಕ ಅಂಗೀಕಾರವಾಗಬೇಕು. ಇಲ್ಲಿ ಸಂಖ್ಯಾಬಲವಿದೆ ಎಂದು ಬಿಜೆಪಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುತ್ತಾರೆ. ಆದರೆ ನ್ಯಾಯಾಲಯ ಕಾಯ್ದೆಯನ್ನು ಯಾವ ರೀತಿ ಪರಿಗಣಿಸಲಿದೆ ಎಂದು ಕಾದು ನೋಡಬೇಕು ಎಂದರು.

ಮತಾಂತರದಿಂದ ಕ್ರೈಸ್ತರ ಜನಸಂಖ್ಯೆ ಏನು ಹೆಚ್ಚಾಗಿಲ್ಲ. ಬದಲಾಗಿ ಮತಾಂತರದ ಹೆಸರಿನಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ಸಚಿವರು ಉತ್ತರ ನೀಡಬೇಕು. ಶಾಸಕರ ತಾಯಿ ಯಾವ ಕಾರಣಕ್ಕೆ ಮತಾಂತರ ಆಗಿದ್ದೇನೆ ಎಂದು ಹೇಳಿದ್ದಾರೆ ಅದನ್ನು ಹೇಳಿ ಎಂದರು.

ಮತಾಂತರ ತಡೆಯಲು ಈಗ ಕಾಯ್ದೆ ರೂಪಿಸಲಾಗಿದೆ. ಇನ್ನೂ ಮುಂದೆ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸಂವಿಧಾನದ 25ರ ಅನುಸಾರ ಬಲವಂತದ ಮತಾಂತರ ತಡೆಯಲು ಅವಕಾಶ ಇದೆ ಎಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿದರು. ನಾವು ರೂಪಿಸಿರುವ ಮಸೂದೆ ಸಂವಿಧಾನದ 25ನೇ ಕಲಂ ಅನ್ನು ಸಂರಕ್ಷಣೆ ಮಾಡುವುದಾಗಿದೆ.

ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಅದರ ಹಿಂದೆಯೂ ಮತಾಂತರ ನಡೆಯುತ್ತಿದೆ. ಅದನ್ನು ತಡೆಯಬೇಕಿದೆ. ಅದಕ್ಕಾಗಿ ಪ್ರತ್ಯೇಕ ಕಾನೂನು ಅಗತ್ಯ ಇದೆ ಎಂದರು. ಹರಿಪ್ರಸಾದ್, ಅಸ್ಸಿಮಾನಂದ ಹತ್ಯೆ ಪ್ರಕರಣ ನಡೆದಾಗ ಒಂದು ಲಕ್ಷ ಕ್ರಿಶ್ಚಿಯನ್ರು ನಾಪತ್ತೆಯಾದರು ಎಂದಾಗ, ಮುಖ್ಯಮಂತ್ರಿಯವರು ಧರ್ಮ ಯುದ್ಧಗಳಿಗೆ ದೊಡ್ಡ ಇತಿಹಾಸವೇ ಇದೆ. ಹಿಂದೆ ಕ್ರಿಶ್ಚಿಯನ್ ಚರ್ಚ್ಗಳು ಆಳುತ್ತಿದ್ದವು. ಪ್ರಜಾಪ್ರಭುತ್ವದಲ್ಲಿ ಅವುಗಳ ಹಿಡಿತ ತಪ್ಪಿಹೋಗಿದೆ ಎಂದರು.

ಲೋಹಿಯಾ ಸಮಾಜದ ಅಂಕು-ಡೋಂಕುಗಳನ್ನು ತಿದ್ದಲು ಯತ್ನಿಸಿದರು ಎಂದು ಮುಖ್ಯಮಂತ್ರಿ ಹೇಳಿದಾಗ, ನೀವು ಆ ಭಾಗದಲ್ಲಿ ಕುಳಿತು ಲೋಹಿಯಾ ವಿಚಾರ ಹೇಳಲಾಗುವುದಿಲ್ಲ. ನಮ್ಮ ಕಡೆ ಬರಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು. ಲೋಹಿಯಾರನ್ನು ನೀವು ಖರೀದಿ ಮಾಡಿದ್ದೀರಾ ಎಂದು ಮುಖ್ಯಮಂತ್ರಿ ಪ್ರತ್ಯುತ್ತರಿಸಿದರು.

ಲೋಹಿಯಾ ಧರ್ಮ ಕುರಿತು ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿದರು. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿಇದೆ. ಇದನ್ನು ತಡೆಯಬೇಕಿದೆ. ಮತಾಂತರ ಮಾಡಲಿ, ಆದರೆ ಅದನ್ನು ಕಾನೂನು ಬದ್ಧವಾಗಿ ನಡೆಸಲಿ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

Articles You Might Like

Share This Article