ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮ ಆಯ್ಕೆ ಖಚಿತ

Spread the love

ಬೆಂಗಳೂರು,ಮೇ 13- ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ, ಹಾಲಿ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರೂ ಆಗಿರುವ ವಂದಿತಾ ಶರ್ಮ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಅಧಿಕಾರ ಅವಧಿ ಈ ತಿಂಗಳ 31ಕ್ಕೆ ಅಂತ್ಯಗೊಳ್ಳಲಿದೆ. ತೆರವಾಗಲಿರುವ ಸ್ಥಾನಕ್ಕೆ ವಂದಿತಾ ಶರ್ಮ ಅವರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ಮುಖ್ಯ ಕಾರ್ಯದರ್ಶಿ ನೇಮಕ ಮಾಡುವ ಅಧಿಕಾರವು ಮುಖ್ಯಮಂತ್ರಿಗೆ ಇರುತ್ತದೆ. ಸೇವಾ ಹಿರಿತನ ಆಧಾರದ ಮೇಲೆ ವಂದಿತಾ ಶರ್ಮ ಅವರನ್ನು ನೇಮಿಸಲು ಸ್ವತಃ ಸಿಎಂ ಬೊಮ್ಮಾಯಿ ಅವರೇ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ವಂದಿತಾ ಶರ್ಮ ಮುಖ್ಯ ಕಾರ್ಯದರ್ಶಿಯಾದರೆ ಅವರು 2023 ನವೆಂಬರ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ 9 ಹಿರಿಯ ಐಎಎಸ್ ಅಧಿಕಾರಿಗಳ ಹೆಸರು ಕೇಳಿಬಂದಿದೆ.

ವಂದಿತಾ ಶರ್ಮ ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್ ಗೋಯಲ್, ಹಣಕಾಸು ಇಲಾಖೆ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್, ಮಂಜುಳಾ, ಅಜಯ್ ಶೇಠ್ ಮತ್ತಿತರ ಹೆಸರುಗಳು ಕೇಳಿಬಂದಿವೆ. ಸೇವಾ ಹಿರಿತನವನ್ನು ಕಡೆಗಣಿಸಿ ನೇಮಿಸಿದರೆ ಅವಕಾಶ ವಂಚಿತರು ನ್ಯಾಯಾಲಯದ ಮೊರೆ ಹೋಗಬಹುದು ಎಂಬ ಆತಂಕವೂ ಇದೆ. ಜೊತೆಗೆ ವಂದಿತಾ ಶರ್ಮ ಅವರ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಆಡಳಿತ ಅನುಭವ ಇರುವುದರಿಂದ ಅವರನ್ನೇ ನೇಮಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಮೂಲತಃ ಆಂಧ್ರಪ್ರದೇಶದವರಾದ ವಂದಿತಾ ಶರ್ಮ ಹಾಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿರುವ ಐಎಸ್‍ಎನ್ ಪ್ರಸಾದ್ ಅವರ ಪತ್ನಿಯೂ ಹೌದು.

Facebook Comments