ಶಾಸಕರಿಗೆ ಏಕವಚನದಲ್ಲಿ ನಿಂದನೆ : ಸದನದಲ್ಲಿ ಗದ್ದಲ- ಕೋಲಾಹಲ

Social Share

ಬೆಳಗಾವಿ,ಡಿ.21- ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಶಾಸಕರೊಬ್ಬರನ್ನು ಸಚಿವರಿಬ್ಬರು ಏಕವಚನದಲ್ಲಿ ಗದರಿಸಿದ ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಿದ ಪ್ರಸಂಗ ಜರುಗಿತು.

ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರ ಜೊತೆ ನಡೆಸಿದ ಸಂಧಾನ ವಿಫಲವಾಗಿದ್ದರಿಂದ ಅನಿವಾರ್ಯವಾಗಿ ಸದನವನ್ನು ಮುಂದೂಡಲಾಯಿತು.

ಸದಸ್ಯರ ವಿರುದ್ಧ ಲಘುವಾಗಿ ಮಾತನಾಡಿರುವ ಸಚಿವ ಗೋವಿಂದ ಕಾರಜೋಳ ಅವರು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರೆ, ಸಚಿವರು ಉತ್ತರಿಸುತ್ತಿದ್ದ ವೇಳೆ ಸಭಾಧ್ಯಕ್ಷರ ಅನುಮತಿ ಇಲ್ಲದೆ ಉಪಪ್ರಶ್ನೆ ಕೇಳಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಮೊದಲು ಅಮಾನತುಪಡಿಸಬೇಕೆಂದು ಪಟ್ಟು ಹಿಡಿಯಲಾಯಿತು.

ಹೀಗೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ತಮ್ಮ ತಮ್ಮ ಪ್ರತಿಷ್ಟೆಗೆ ಬಿದ್ದ ಪರಿಣಾಮ ಸದನವನ್ನು ಎರಡು ಬಾರಿ ಮುಂದೂಡಲಾಯಿತು. ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯಗಳನ್ನು ಒದಗಿಸಬೇಕೆಂದು ಶಾಸಕ ಸಿದ್ದು ಸವದಿಯವರು ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿದರು.

ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅನೇಕ ಸದಸ್ಯರು ಇದು ಕೇವಲ ಒಂದು ಕ್ಷೇತ್ರದ ಸಮಸ್ಯೆಯಲ್ಲ. ರಾಜ್ಯದ ಅನೇಕ ಕಡೆ ಸಮಸ್ಯೆಯಿದೆ. ಪರಿಣಾಮ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಗಳಿಲ್ಲ, ಚಾಲಕರಿಲ್ಲ, ಇದರಿಂದ ತೊಂದರೆಯಾಗಿದೆ ಎಂದು ಸರ್ಕಾರದ ಗಮನಸೆಳೆದರು.

ಚೀನಾ ಗಡಿ ಗಲಾಟೆ ಚರ್ಚೆಗೆ ಕಾಂಗ್ರೆಸ್ ಪಟ್ಟು : ಸಂಸತ್ ಭವನದೆದುರು ಪ್ರತಿಭಟನೆ

ಈ ವೇಳೆ ಸಚಿವ ಶ್ರೀರಾಮುಲು ನೀಡಿದ ಉತ್ತರ ತೃಪ್ತಿದಾಯಕವಾಗಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಕೊನೆಗೆ ಸಭಾಧ್ಯಕ್ಷರು ಮತ್ತು ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ ಅವರ ಮನವಿ ಮೇರೆಗೆ, ಸದಸ್ಯರು ತಮ್ಮ ಧರಣಿಯನ್ನು ಹಿಂಪಡೆದು ತಮ್ಮ ತಮ್ಮ ಆಸ್ಥಾನಗಳಿಗೆ ಹಿಂತಿರುಗಿದರು.

ಬಳಿಕ ಸಭಾಧ್ಯಕ್ಷರು ಶಾಸಕ ದೊಡ್ಡನಗೌಡ ಪಾಟೀಲ್ ಅವರಿಗೆ ಪ್ರಶ್ನೆ ಕೇಳುವಂತೆ ಸೂಚನೆ ನೀಡಿದರು. ದೊಡ್ಡನಗೌಡ ಪಾಟೀಲ್ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಪ್ರಶ್ನೆ ಕೇಳುತ್ತಿದ್ದಾಗ ಕುಣಿಗಲ್‍ನ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದರು.

ಇದರಿಂದ ಕೆರಳಿದ ಸಚಿವ ಮಾಧುಸ್ವಾಮಿ, ಏಯ್ ನಿಂದೇನೋ ಸ್ಪೆಷಲ್, ಹೋಗ್ ಆಚೆ ಎಂದು ಗದರಿಸಿದರು. ಈ ಹಂತದಲ್ಲಿ ರಂಗನಾಥ್ ಪರವಾಗಿ ಹುಣಸೂರು ಶಾಸಕ ಎಚ್.ಸಿ. ಮಂಜುನಾಥ್ ಅವರು ಕೂಡ ಪ್ರತಿಭಟನೆ ನಡೆಸಲು ಮುಂದಾದರು.

ಆಗ ಸಚಿವ ಕಾರಜೋಳ ಅವರು ನಿನಗೆ ಕಾಮೆನ್‍ಸೆನ್ಸ್ ಇದೆಯಾ, ಎಲ್ಲರೂ ಪ್ರತಿಭಟನೆ ಕೈಬಿಟ್ಟಾಗ ನೀನೇನು ಪ್ರತಿಭಟಿಸುವುದು, ಪ್ರಶ್ನೋತ್ತರ ಅವಧಿಯಲ್ಲಿ ಈ ರೀತಿ ಮಾಡುವುದು ಸರಿಯೇ? ಎಲ್ಲದಕ್ಕೂ ಇತಿಮಿತಿ ಇರುತ್ತದೆ. ಎಲ್ಲ ಸದಸ್ಯರು ಹೊರ ಹೋಗಿರುವಾಗ ನಿನೇಕೆ ಇಲ್ಲಿ ನಿಂತಿದ್ದೀಯ? ಮೊದಲು ಇವರನ್ನು ಅಮಾನತುಪಡಿಸಿ ಸದನದಿಂದ ಆಚೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಕಾರಜೋಳ, ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆದುಕೊಳ್ಳುವ ರೀತಿ ಇದೇನಾ. ನಾನು ನೋಡುತ್ತಲೇ ಇದ್ದೇನೆ. ಎಲ್ಲರೂ ಪ್ರತಿಭಟನೆ ಕೈಬಿಟ್ಟಿರುವಾಗ ನಿಮ್ಮದೇನು ವಿಶೇಷ? ಅವರದೇನು ಸ್ಪೆಷಲ್? ಸದನದ ನಿಯಮಾವಳಿ ಗೊತ್ತಿಲ್ಲವೇ? ಹೊರಹೋಗಿ ಆಚೆ ಎಂದು ಗದರಿಸಿದರು.

ಈ ವೇಳೆ ಸದನಕ್ಕೆ ಆಗಮಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜವಾಬ್ದಾರಿಯುತ ಸಚಿವರಾಗಿ ನೀವು ನಡೆದುಕೊಳ್ಳುವ ರೀತಿ ಸರಿಯೇ? ಗೂಂಡಾಗಿರಿ, ಪಾಳೆಗಾರಿಕೆ ನಡೆಯುವುದಿಲ್ಲ. ಸದಸ್ಯರು ಪ್ರತಿಭಟನೆ ನಡೆಸುವುದು ಅವರ ಹಕ್ಕು. ಸದಸ್ಯರೊಬ್ಬರಿಗೆ ಗದರಿಸುವುದು ನಿಯಮಕ್ಕೆ ವಿರುದ್ಧವಾದುದು ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಸದಸ್ಯರು ಕೇಳಿದ ಪ್ರಶ್ನೆಗೆ ಸರ್ಕಾರ ಸಮರ್ಪಕ ಉತ್ತರ ನೀಡಬೇಕು. ಅವರು ನೀಡಿದ ಉತ್ತರ ತೃಪ್ತಿದಾಯಕವಾಗಿಲ್ಲ ಎಂದರೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಅದು ನಿಯಮಾವಳಿಯಲ್ಲೇ ಇದೆ. ಪ್ರತಿಯೊಬ್ಬ ಸದಸ್ಯರಿಗೆ ಈ ಸದನ ಕೊಟ್ಟಿರುವುದು ಅವರ ಹಕ್ಕು.

ಹೊರಗೆ ಹೋಗಿ ಎನ್ನಲು ನೀವ್ಯಾರು ನಿಮ್ಮ ಮನೆಗೆ ಬಂದಿದ್ದಾರೆಯೇ? ಮೊದಲು ಗೌರವದಿಂದ ಮಾತನಾಡಿ ಎಂದು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಈ ವೇಳೆ ಕಾಂಗ್ರೆಸ್‍ನ ಎಲ್ಲ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿದರು. ಶಾಲಾ ಮಕ್ಕಳಿಗೆ ಬಸ್‍ಗಳನ್ನು ಒದಗಿಸಲು ಯೋಗ್ಯತೆ ಇಲ್ಲದ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ. ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪ, ಟೀಕೆ, ಪ್ರತಿ ಟೀಕೆಗಳು ವ್ಯಕ್ತವಾಗಿ ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಕೇಳದಂತಾಯಿತು.

ಪುನಃ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಗೋವಿಂದ ಕಾರಜೋಳ, ಇಂತಹ ಪಾಳೆಗಾರಿಕೆಗೆ ನಾನು ಹೆದರುವುದಿಲ್ಲ. ಇವರನ್ನೆಲ್ಲಾ ನಾನು ಕೂಡ ನೋಡಿಕೊಂಡು ಬಂದಿದ್ದೇನೆ. ಇಲ್ಲಿ ವಿಧಾನಸಭೆಗೆ ಸುಮ್ಮನೆ ಆಯ್ಕೆಯಾಗಿ ಬಂದಿಲ್ಲ. ಪಾಳೆಗಾರಿಕೆ, ಗಲಾಟೆ, ಗದ್ದಲಕ್ಕೆ ನಾನು ಹೆದರುವ ಮನುಷ್ಯನಲ್ಲ. ಇವೆಲ್ಲ ನನ್ನ ಬಳಿ ಬೇಡ ಎಂದು ತಿರುಗೇಟು ನೀಡಿದರು.

ಈ ಹಂತದಲ್ಲೂ ಮತ್ತೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ಕೋಲಾಹಲ, ಗಲಾಟೆ ಉಂಟಾಯಿತು. ಸಭಾಧ್ಯಕ್ಷರು ಧರಣಿ ನಿರತ ಸದಸ್ಯರಿಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ವಿಯಿಲ್ಲದೆ ಸದನವನ್ನು ಮುಂದೂಡಿದರು.

3ನೇ ಬಾರಿಗೆ ಸಭಾಪತಿಯಾಗಿ ಹೊಸ ದಾಖಲೆ ಬರೆದ ಹೊರಟ್ಟಿ

ಪುನಃ ಸದನ ಸೇರಿದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಸಂಧಾನ ನಡೆಸಲು ಪ್ರಯತ್ನಿಸಿದರು.

ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ನಾನು ಇತ್ತೀಚೆಗೆ ವರುಣಾ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿಯೂ ಕೂಡ ಶಾಲಾ ಮಕ್ಕಳಿಗೆ ಬಸ್‍ಗಳಿಲ್ಲದೆ ತೊಂದರೆಯಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಎಲ್ಲ ಕಡೆಯೂ ಇದೇ ಸಮಸ್ಯೆ ಇದೆ. ನಮ್ಮ ಶಾಸಕರಾದ ರಂಗನಾಥ್ ಅವರು ಕುಣಿಗಲ್‍ನಲ್ಲೂ ಬಸ್ ಕೊರತೆ ಇದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ಜವಾಬ್ದಾರಿಯುತ ಸಚಿವರು ಸಹನೆಯಿಂದ ವರ್ತಿಸಬೇಕು. ಏಕವಚನದಲ್ಲಿ ಹೋಗೊ ಆಚೆ ಎಂದು ಗದರಿಸುವುದು ಯಾವ ಸಂಸ್ಕøತಿಯನ್ನು ತೋರಿಸುತ್ತದೆ? ಅದರಲ್ಲೂ ಹಿರಿಯ ಸಚಿವರು ಇತರರಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಮೊದಲು ಅವರು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪುನಃ ಸದನ ಸೇರಿದಾಗ ಗದ್ದಲದ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಆಗ ಕಾಂಗ್ರೆಸ್ ಸದಸ್ಯರು ಸಚಿವರು ಕ್ಷಮಾಪಣೆ ಕೇಳಲೇಬೇಕೆಂದು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ಹಂತದಲ್ಲೂ ಪುನಃ ಕೋಲಾಹಲ ಉಂಟಾಯಿತು.

ಈ ವೇಳೆ ಸದನದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವರು ಉತ್ತರ ಕೊಟ್ಟ ಮೇಲೂ ಈ ರೀತಿ ಧರಣಿ ನಡೆಸುವುದು ಸರಿಯಲ್ಲ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಪ್ರತಿಪಕ್ಷಕ್ಕೂ ಅಷ್ಟೇ ಜವಾಬ್ದಾರಿ ಇರುತ್ತದೆ. ಇದನ್ನು ಯಾರೂ ಪ್ರತಿಷ್ಟೆಯಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಸಚಿವರು ಯಾವುದೇ ಒಬ್ಬ ಸದಸ್ಯರನ್ನು ಗದರಿಸುವ ಅಗೌರಿಸುವ ದುರದ್ದೇಶವಿರುವುದಿಲ್ಲ. ಮಾತಿನ ಭರದಲ್ಲಿ ಆ ರೀತಿ ಹೇಳಿರಬಹುದು ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, ಗೋವಿಂದ ಕಾರಜೋಳ ಅವರು ಹಿರಿಯ ಸಚಿವರು, ರಂಗನಾಥ್ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಇಂದು ಸಚಿವರು ವೀರಾವೇಷವಾಗಿ ಸದಸ್ಯರನ್ನು ಅಗೌರವದಿಂದ ಕಂಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಲಿ ನಾನು ಸದನ ನಡೆಯಲು ಬಿಡುವುದಿಲ್ಲ ಎಂದು ಗುಡುಗಿದರು.

ಪುನಃ ಮಾಧುಸ್ವಾಮಿಯವರು, ಗೋವಿಂದ ಕಾರಜೋಳ ಕ್ಷಮೆ ಕೇಳುವ ಮೊದಲು ಅಂಜಲಿ ಲಿಂಬಾಳ್ಕರ್ ಅವರನ್ನು ಅಮಾನತಪಡಿಸಬೇಕು. ಅವರ ವಿರುದ್ಧ ನಾನು ನಿರ್ಣಯ ಮಂಡಿಸುತ್ತೇನೆ ಎನ್ನುತ್ತಿದ್ದಂತೆ ಸದನದಲ್ಲಿ ಗದ್ದಲ ಉಂಟಾಗುತ್ತಿದ್ದಂತೆ ಸದನವನ್ನು ಮುಂದೂಡಲಾಯಿತು.

Karnataka, Assembly, adjourned, BJP, Congress,

Articles You Might Like

Share This Article