ಬೆಂಗಳೂರು, ಜ.27- ನನಗೆ ಸಚಿವ ಸ್ಥಾನ ಬೇಕೇಬೇಕು ಎಂದು ಉಪಸಭಾಧ್ಯಕ್ಷ ಆನಂದ್ ಮಹಾಮನಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡಲೇಬೇಕೆಂದು ಪಕ್ಷದ ನಾಯಕರನ್ನು ಒತ್ತಾಯಿಸಿದ್ದೇನೆ. ಈ ಬಗ್ಗೆ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೂ ಮನವಿ ಮಾಡಿದ್ದೇನೆ ಎಂದು ಹೇಳಿದರು.
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರ ಹಾಗೂ ರಾಜ್ಯದ ಜನರ ಕೆಲಸ ಮಾಡಲು ಅವಕಾಶ ಕೊಡಬೇಕು. ಸಂಪುಟ ವಿಸ್ತರಣೆಯನ್ನಾದರೂ ಮಾಡಲಿ, ಪುನಾರಚನೆಯನ್ನಾದರೂ ಮಾಡಲಿ. ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಅವರು ಹೇಳಿದರು.
ಕೇವಲ ಕ್ಷೇತ್ರದ ಅಭಿವೃದ್ಧಿಗೆಂದು ನಾನು ಸಚಿವ ಸ್ಥಾನ ಕೇಳುತ್ತಿಲ್ಲ. ಕ್ಷೇತ್ರದ ಜತೆಗೆ ರಾಜ್ಯದ ಜನರ ಕೆಲಸ ಮಾಡುತ್ತೇನೆ ಎಂದರು.
ಸಂಪುಟದಿಂದ ಹಿರಿಯರನ್ನು ಕೈಬಿಡುವ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಸಮಂಜಸವೂ ಅಲ್ಲ. ಅದರ ಬಗ್ಗೆ ಹಿರಿಯರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
