ಬೆಂಗಳೂರು,ಮಾ.8- ಕರ್ನಾಟಕದ ರಾಜಕೀಯ ಪಕ್ಷಗಳು 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿವೆ. ಅವಧಿಗೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಸ್ವತಃ ಬಿಜೆಪಿಯೇ ಅವಧಿ ಪೂರ್ವ ಚುನಾವಣೆ ನಡೆಸುವ ಉತ್ಸಾಹದಲ್ಲಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡರೆ ರಾಜ್ಯದಲ್ಲಿ ಅವಗೆ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ದೆಹಲಿಯಲ್ಲಿರುವ ಪಕ್ಷದ ನಾಯಕರು ಕರ್ನಾಟಕದಲ್ಲಿ ಅವಗೂ ಮೊದಲೇ ಚುನಾವಣೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಂಚರಾಜ್ಯಗಳ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯ ಪ್ರವಾಸವನ್ನು ಕೈಗೊಳ್ಳಲಿದೆ.
ಈಗಾಗಲೇ ಕಾರ್ಯಕ್ರಮದ ರೂಪುರೇಷೆಗಳು ತಯಾರಾಗುತ್ತಿವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ತಂಡಗಳು ರಾಜ್ಯಪ್ರವಾಸ ನಡೆಸಲಿವೆ.
ಆರಂಭದಲ್ಲಿ ಯಡಿಯೂರಪ್ಪ ಒಬ್ಬರೇ ರಾಜ್ಯ ಪ್ರವಾಸ ನಡೆಸಲು ಮುಂದಾಗಿದ್ದರು. ಆದರೆ ಪಕ್ಷ ಏಕ ವ್ಯಕ್ತಿಯ ಪ್ರವಾಸಕ್ಕೆ ಅವಕಾಶ ನೀಡದೆ ನಾಲ್ಕು ತಂಡಗಳಾಗಿ ಪ್ರವಾಸ ನಡೆಸಲು ನಿರ್ಧಾರ ಮಾಡಿದೆ. ಈ ನಡುವೆ ಭಾನುವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು ಮುಂದಿನ ಕಾರ್ಯತಂತ್ರಗಳು, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮುಂತಾದ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಯಲಿದೆ.
2022ರ ಅಂತ್ಯದಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಜೊತೆಗೆ ಕರ್ನಾಟಕಕ್ಕೆ ಸಹ ಚುನಾವಣೆ ನಡೆಸಿದರೆ ಒಟ್ಟಿಗೆ ಗೆಲುವು ಸಾಧಿಸಬಹುದು ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ. 2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು.
ಈಗಿನ ವಿಧಾನಸಭೆಯ ಅವ ಮೇ 24, 2023ರ ತನಕ ಇದೆ. ಆದರೆ ಗುಜರಾತ್ ರಾಜ್ಯದ ಜೊತೆ 2022ರ ಡಿಸೆಂಬರ್‍ನಲ್ಲೇ ಅಂದರೆ ವಿಧಾನಸಭೆ ಅವ ಪೂರ್ಣಗೊಳ್ಳುವ ಸುಮಾರು 6 ತಿಂಗಳ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಸುವ ಕುರಿತು ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ.
ಪಕ್ಷಗಳ ತಯಾರಿ, ಬಿಬಿಎಂಪಿ ಚುನಾವಣೆ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ಸಹ ಬಾಕಿ ಇದೆ. ಈ ಚುನಾವಣೆಗಳನ್ನು ಮುಗಿಸಿ ವಿಧಾನಸಭೆ ಚುನಾವಣೆಯತ್ತ ಪಕ್ಷಗಳು ಗಮನಹರಿಸಬೇಕಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಿದ್ದರೆ ನಿಗದಿಯಂತೆ 2023ರ ಏಪ್ರಿಲ್, ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.
ಪ್ರತಿಪಕ್ಷ ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅಲ್ಲದೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ರಾಜೀನಾಮೆ ಕೊಡಿಸಿ, ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹಿಜÁಬ್ ಸೇರಿದಂತೆ ವಿವಿಧ ವಿಚಾರಗಳು ರಾಜ್ಯದಲ್ಲಿ ಹಿಂದುತ್ವದ ಅಜೆಂಡಾವನ್ನು ಗಟ್ಟಿಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿಯೇ ಚುನಾವಣೆಗಳನ್ನು ನಡೆಸಿದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ವರಿಷ್ಠ ನಾಯಕರ ಲೆಕ್ಕಾಚಾರವಾಗಿದೆ.
ಯಾವುದೇ ರಾಜ್ಯಗಳ ಚುನಾವಣೆ ನಡೆಯಲಿ ಬಿಜೆಪಿ ಈಗ ಹೊಸ ಮುಖಗಳನ್ನು ಪರಿಚಯಿಸುತ್ತಿದೆ. ಆ ಮೂಲಕ ಭವಿಷ್ಯದಲ್ಲಿ ಪಕ್ಷ ಸಂಘಟನೆ ಯತ್ತ ಗಮನ ಹರಿಸಿದೆ. ಕರ್ನಾಟಕದಲ್ಲಿಯೂ ಚುನಾವಣೆ ನಡೆದರೆ ಸುಮಾರು 50 ಹೊಸ ಮುಖಗಳಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ. ಚುನಾವಣೆಗಾಗಿ ಬಿಜೆಪಿ ಈಗಿನಿಂದಲೇ ತಂತ್ರವನ್ನು ರೂಪಿಸುತ್ತಿದೆ.
ರಾಜ್ಯದ ಆಡಳಿತ ಪಕ್ಷ ಬಿಜೆಪಿ ಮಾತ್ರವಲ್ಲ. ಪ್ರತಿಪಕ್ಷಗಳು ಸಹ ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಇದೇ ಸಂದರ್ಭದಲ್ಲಿ ಆಡಳಿತ ಪಕ್ಷದ ವೈಫಲ್ಯವನ್ನು ಜನರ ಮುಂದೆ ಕೊಂಡೊಯ್ಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಜನಾಕ್ರೋಶ ಯಾತ್ರೆಯನ್ನು ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಎಐಸಿಸಿ ಸೂಚನೆಯಂತೆ ಜನಾಕ್ರೋಶ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಕರಿತಾಗಿ ಚರ್ಚೆ ನಡೆಸಲು ಭಾನುವಾರ ಹಿರಿಯ ಕಾಂಗ್ರೆಸ್ ಮುಖಂಡರು ಸಭೆ ಸೇರಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದೆ.
ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ. ಇಷ್ಟೇ ಅಲ್ಲದೆ ಪಕ್ಷದ ಆಂತರಿಕ ಭಿನ್ನಮತ, ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ತಂತ್ರಗಳನ್ನು ಕಾಂಗ್ರೆಸ್ ರೂಪಿಸಿಕೊಳ್ಳುತ್ತಿದೆ.
ಮತ್ತೊಂದು ಕಡೆ ಜೆಡಿಎಸ್ ಪಕ್ಷ ಶಾಸಕರಿಗೆ, ಪದಾಧಿಕಾರಿಗಳಿಗೆ ಕಾರ್ಯಾಗಾರವನ್ನು ಮಾಡುತ್ತಿದೆ. ಚುನಾವಣೆಗೆ ಒಂದು ವರ್ಷ ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಸಿದ್ಧತೆ ನಡೆಸಿದೆ.
