ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆ..?!

Social Share


ಬೆಂಗಳೂರು,ಜು.11- ಕರ್ನಾಟಕದಲ್ಲಿ ಅವಧಿಗೂ ಮುನ್ನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ಮೇ ತಿಂಗಳಲ್ಲಿ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆಯೂ ಈ ವರ್ಷದ ಡಿಸೆಂಬರ್‍ನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗುಜರಾತ್ ಚುನಾವಣೆಯೂ ಡಿಸೆಂಬರ್‍ಲ್ಲೇ ನಡೆಯಲಿದ್ದು, ಅದರ ಜೊತೆಯಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಗಿಸುವ ತವಕದಲ್ಲಿ ಬಿಜೆಪಿ ಇದ್ದು, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಬಿಜೆಪಿ ಇಡುತ್ತಿರುವ ಹೆಜ್ಜೆಗಳನ್ನು ಗಮನಿಸಿದರೆ, ಅವಗೆ ಮುನ್ನವೇ ಚುನಾವಣೆಗೆ ಹೋಗುವುದು ನಿಶ್ಚಿತ ಎಂಬುದು ಗೊತ್ತಾಗುತ್ತಿದೆ.

ಹೈದರಾಬಾದ್‍ನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಹಾಗೂ ರಾಜ್ಯಸಭೆಗೆ ದಕ್ಷಿಣ ಭಾರತದ ನಾಲ್ವರು ಗಣ್ಯರ ನಾಮನಿರ್ದೇಶನ ಸೇರಿದಂತೆ ಕೆಲವು ಕಾರ್ಯತಂತ್ರಗಳನ್ನು ಬಿಜೆಪಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆ ಡಿಸೆಂಬರ್‍ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಸುವುದು ಖಚಿತ ಎಂದು ಎನ್ನಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಸದ್ಯಕ್ಕೆ ಕರ್ನಾಟಕದಲ್ಲಿರುವ ಅಧಿಕಾರವನ್ನು ಉಳಿಸಿಕೊಂಡು, ನಂತರ ತೆಲಂಗಾಣವನ್ನು ಟಾರ್ಗೆಟ್ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆಯಾಗಿದೆ.

ಇದಾದ ಮೇಲೆ ಕ್ರಮವಾಗಿ ತಮಿಳುನಾಡು, ಕೇರಳವನ್ನು ಗೆಲ್ಲುವುದು ಅವರ ಉದ್ದೇಶ. ಅಲ್ಲದೆ, ಮೇ ತಿಂಗಳಲ್ಲಿ ಚುನಾವಣೆ ನಡೆಸುವುದಾಗಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸಲಾಗುತ್ತಿತ್ತು. ಈಗ ಅಂಥ ನಿರ್ಧಾರವನ್ನು ಬಿಜೆಪಿ ಪಕ್ಕಕ್ಕಿಟ್ಟು, ಡಿಸೆಂಬರ್‍ವರೆಗೂ ಅವರನ್ನೇ ಮುಂದುವರಿಸುವ ತೀರ್ಮಾನ ಕೈಗೊಂಡಿದೆ.

ಹೀಗಾಗಿ 2023 ರ ಜನವರಿ ವೇಳೆಗೆ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿದೆಯಂತೆ. ರಾಜ್ಯದ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಸಮಯ ಇರುವಾಗಲೇ ಮೂರು ಪಕ್ಷಗಳು ತಯಾರಿ ಆರಂಭಿಸಿವೆ. ಈಗಾಗಲೇ ಬೃಹತ್ ಸಮಾವೇಶ, ಪಕ್ಷದೊಳಗೆ ನಿರಂತರ ಸಭೆಗಳನ್ನು ನಡೆಸುತ್ತಿವೆ.

ಕಾಂಗ್ರೆಸ್, ಬಿಜೆಪಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುತ್ತಿವೆ.ಇನ್ನೊಂದೆಡೆ ಜೆಡಿಎಸ್ ಸಹ ಜಲಧಾರೆ ಯಾತ್ರೆ, ಜನತಾಮಿತ್ರ ಮೂಲಕ ಚುನಾವಣೆ ಪ್ರಚಾರ ನಡೆಸುತ್ತಿದೆ. ಯಾತ್ರೆಯ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯಲಿದೆ ಎಂದು ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಹಾಗಾಗಿ ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠರು ಹೆಚ್ಚು ಒತ್ತು ನೀಡಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕ್ರಿಯರಾಗಿ ರಾಜ್ಯ ಪ್ರವಾಸ ನಡೆಸುವುದರ ಜೊತೆಗೆ ಕೆಲವು ಯೋಜನೆಗಳನ್ನು ಘೋಷಿಸುತ್ತಿದ್ದಾರೆ.

ಇಲಾಖಾವಾರು ಬಜೆಟ್ ಅನುಷ್ಠಾನಗಳ ಸಭೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದಾರೆ. ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಭಾರಿ ವರ್ಗಾವಣೆ ಸಹ ನಡೆಯುತ್ತಿದೆ. ಸಮೀಕ್ಷೆ, ಸಭೆ ಮತ್ತು ಪ್ರವಾಸದ ಬಳಿಕ ರಾಜ್ಯದಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಇದ್ದರೆ ಚುನಾವಣೆಗೆ ಹೋಗಲು ಬಿಜೆಪಿ ತಂತ್ರ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಕಾಂಗ್ರೆಸ್ ಸಹ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂದು ಕಡೆ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಲೇ ಕಾಂಗ್ರೆಸ್ ನಾಯಕರು ಚುನಾವಣೆ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಮಾನಸಿಕವಾಗಿ ಸಿದ್ಧರಾಗಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಆಗಸ್ಟ್ 3 ರಂದು ಸಿದ್ದರಾಮಯ್ಯ-75 ಮಹೋತ್ಸವ ಮಾಡಲಾಗುತ್ತಿದೆ. ಅಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಬಲ ಪ್ರದರ್ಶನಕ್ಕೂ ಕೈ ನಾಯಕರು ತಯಾರಿ ನಡೆಸಿದ್ದಾರೆ.

ಒಟ್ಟಾರೆ 2023ರ ಚುನಾವಣೆ ಮೂರು ಪಕ್ಷಗಳಿಗೂ ದೊಡ್ಡ ಪ್ರತಿಷ್ಠೆಯಾಗಿದೆ. ಮುಂಬರುವ ಚುನಾವಣೆ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಇದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Articles You Might Like

Share This Article