ಜನಸಾಮಾನ್ಯರಿಗೆ ತೊಂದರೆ ಕೊಟ್ಟು ಬಂದ್ ಮಾಡುವುದು ಸರಿಯಲ್ಲ: ಸಿಎಂ ಬೊಮ್ಮಾಯಿ

Spread the love

ಬೆಂಗಳೂರು, ಡಿ.30- ರಾಜ್ಯದಲ್ಲಿ ಎಂಇಎಸ್‍ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಕೈಬಿಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ಮುಖಂಡರಿಗೆ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊರೊನಾ ಹೊಡೆತದಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಚಟುವಟಿಕೆಗಳು ಈಗತಾನೆ ಸುಧಾರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬಂದ್ ಮಾಡುವುದು ಯಾರಿಗೂ ಒಳ್ಳೆಯದಲ್ಲ ಎಂದು ಹೇಳಿದರು.
ನಾನು ಈಗಲೂ ಕೂಡ ಕನ್ನಡಪರ ಸಂಘಟನೆಗಳಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಯಾವುದೇ ಕಾರಣಕ್ಕೂ ನಾಳೆ ಬಂದ್ ಮಾಡಬೇಡಿ. ನಿಮ್ಮ ಜತೆ ನಾನು ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಕನ್ನಡ ಚಳವಳಿ ಪಕ್ಷದ ಹಿರಿಯ ಮುಖಂಡ ವಾಟಾಳ್ ನಾಗರಾಜ್ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರ ಬದ್ಧತೆ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಜನಸಾಮಾನ್ಯರಿಗೆ ತೊಂದರೆ ಕೊಟ್ಟು ಬಂದ್ ಮಾಡುವುದು ಸರಿಯಲ್ಲ. ತಕ್ಷಣವೇ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಕರವೇ ಮುಖಂಡ ಪ್ರವೀಣ್‍ಶೆಟ್ಟಿ ಬಂದು ನನ್ನನ್ನು ಭೇಟಿ ಮಾಡಿ ಬಂದ್‍ಗೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ನಾನು ಎಲ್ಲ ಮುಖಂಡರಿಗೂ ಮನವಿ ಮಾಡುವುದೆಂದರೆ ದಯವಿಟ್ಟು ಬಂದ್ ನಡೆಸಬೇಡಿ ಎಂದು ಪುನರುಚ್ಚರಿಸಿದರು.

ಇಂದು ಸಭೆ: ನಾನು ಅಧಿಕಾರ ವಹಿಸಿಕೊಂಡ ನಂತರ ಇಂದು ವಿಧಾನಸೌಧದಲ್ಲಿ ಸಿಇಒಗಳ ಸಭೆ ನಡೆಸುತ್ತೇನೆ. ನಾಳೆ ಡಿಸಿಗಳ ಜತೆ ಪ್ರತ್ಯೇಕ ಸಭೆ ಕರೆಯಲಾಗಿದೆ. ಸಿಇಒಗಳ ವ್ಯಾಪ್ತಿಗೆ ಬರುವಂತಹ ಆಡಳಿತಾತ್ಮಕ ನಿರ್ಧಾರಗಳು ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ. ನಾಳೆ ಡಿಸಿಗಳ ಜತೆಯೂ ಸಭೆ ನಡೆಯಲಿದೆ ಎಂದರು. ನಮ್ಮ ಸರ್ಕಾರ ಯಾವೆಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಅವು ಎಷ್ಟರ ಮಟ್ಟಿಗೆ ಜಾರಿಯಾಗಿವೆ, ಜನರಿಗೆ ಇವು ತಲುಪಿವೆಯೇ ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಇದು ನಿಖರತೆಯ ಆಧಾರದ ಮೇಲೆ ನಡೆಯುವ ಸಭೆ ಎಂದು ಹೇಳಿದರು.

ನಾಳೆ ಡಿಸಿಗಳ ಸಭೆಯಲ್ಲೂ ಆಡಳಿತಾತ್ಮಕ ಯೋಜನೆಗಳಿಗೆ ಸಭೆ ನಡೆಸಲಿದ್ದೇನೆ. ಇದು ಮಹತ್ವದ ಘಟ್ಟವಾಗಿದೆ. ಮೂರು ತಿಂಗಳಲ್ಲಿ ಎಷ್ಟರ ಮಟ್ಟಿಗೆ ಮುಟ್ಟುತ್ತೇವೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದೇನೆ. ಮುಂದಿನ ವರ್ಷಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಈ ಸಭೆಯಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಜೆಟ್‍ನಲ್ಲಿ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ನಮಗೆ ಅನುಕೂಲವಾಗಲಿದೆ. ಈಗಿರುವ ಕಾರ್ಯಕ್ರಮಕ್ಕೆ ಚುರುಕು ಮುಟ್ಟಿಸುವುದು ಮತ್ತು ಹೊಸ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆ ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

Facebook Comments