ಡಿ.5ರ ಕರ್ನಾಟಕ ಬಂದ್‍ಗೆ ಕರವೇ ಯುವ ಘಟಕ ಬೆಂಬಲ

ಬೆಂಗಳೂರು, ನ.29- ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಬೆಂಬಲ ವ್ಯಕ್ತಪಡಿಸಿದೆ.ನಗರದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್‍ಗೌಡ ಅವರು ಡಿ.5ರಂದು ಬಂದ್‍ಗೆ ಪೂರ್ಣ ಬೆಂಬಲ ನೀಡುತ್ತೇವೆ. ನಗರದ ಜನತೆ ಕೂಡ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಉಳಿದವರು ಬಂಧುಗಳಂತಿರಬೇಕು. ಭಾಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಎಂಇಎಸ್, ಶಿವಸೇನೆ, ಎನ್‍ಸಿಪಿ ಪಕ್ಷಗಳು ಬೆಳಗಾವಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಇದು ನಿಲ್ಲಬೇಕು ಎಂದು ಹೇಳಿದರು.

ಕರ್ನಾಟಕದ ಕನ್ನಡ, ಮರಾಠಿಗರು ಯಾವುದೇ ಬೇಡಿಕೆ ಸರ್ಕಾರಕ್ಕೆ ಇಟ್ಟಿರಲಿಲ್ಲ. ವೋಟ್ ರಾಜಕಾರಣಕ್ಕಾಗಿ ಯಡಿಯೂರಪ್ಪನವರ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಕಾರ ರಚಿಸಿ 50 ಕೋಟಿ ರೂ. ನೀಡಿರುವುದು ನಮ್ಮ ನಾಡಿಗೆ, ಕನ್ನಡ ಭಾಷೆಗೆ, ಕನ್ನಡಿಗರಿಗೆ ಮಾಡಿರುವ ದ್ರೋಹ ಎಂದರು.

ಕನ್ನಡ ಚಳವಳಿಗಾರರು ಕರೆದಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆಯ ಯುವಘಟಕ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಶಾಂತಿಯುತವಾಗಿ ಬಂದ್ ಆಗುವ ಮೂಲಕ ಕರ್ನಾಟಕ ದೇಶಕ್ಕೆ ಮಾದರಿಯಾಗುತ್ತದೆ. ಕನ್ನಡಿಗರಿಗೆ, ಕನ್ನಡ ಭಾಷೆಗೆ ಧಕ್ಕೆಯಾದಾಗ ಕರ್ನಾಟಕ ರಕ್ಷಣಾ ವೇದಿಕೆ ಎಂಥದ್ದೇ ಸನ್ನಿವೇಶವನ್ನು ಎದುರಿಸುತ್ತದೆ.

ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡು ಮರಾಠಿ ಅಭಿವೃದ್ಧಿ ಪ್ರಾಕಾರವನ್ನು ರದ್ದು ಪಡಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಕಾರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಟಿ.ಎ.ಧರ್ಮರಾಜ್ ಗೌಡರು ಬಹಿರಂಗಸಭೆಯಲ್ಲಿ ಒತ್ತಾಯಿಸಿದರು.ಕರ್ನಾಟಕ ಬಂದ್‍ಗೆ ನಾಡಿನ ಜನ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಬಹಿರಂಗ ಸಭೆಯಲ್ಲಿ ಕರವೇ ಮುಖಂಡರಾದ ಅಶ್ವಿನಿ, ನೇ.ಭ.ರಾಮಲಿಂಗಶೆಟ್ಟಿ, ಗೋಮೂರ್ತಿ ಯಾದವ್, ಜಗದೀಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಬಂದ್‍ಗೆ ಬೆಂಬಲಿಸುವಂತೆ ಜನತೆಗೆ ಕರೆ ನೀಡಿದರು.

Sri Raghav

Admin