ಎಂಇಎಸ್ ನಿಷೇಸದಿದ್ದರೆ ಕರ್ನಾಟಕ ಬಂದ್ : ವಾಟಾಳ್ ವಾರ್ನಿಂಗ್

ಬೆಂಗಳೂರು,ಡಿ.20- ಸ್ವಾತಂತ್ರ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಮಾಡಿರುವುದಲ್ಲದೆ ನಿರಂತರ ಕಿಡಿಗೇಡಿ ಕೃತ್ಯ ವೆಸುಗುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳದಿದ್ದರೆ ಕರ್ನಾಟಕ ರಾಜ್ಯ ಬಂದ್‍ಗೆ ಕರೆ ಕೊಡುತ್ತೆವೆ ಎಂಬ ಎಚ್ಚರಿಕೆಯನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ನೀಡಿದ್ದಾರೆ.

ಎಂಇಎಸ್ ಉದ್ಘಟ ಧೋರಣೆಯನ್ನು ಖಂಡಿಸಿ ನಗರದಲ್ಲಿಂದು ಎಂಇಎಸ್ ಭೂತದಹ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ವಾಟಾಳ್ ನಾಗರಾಜ್, ಎಂಇಎಸ್ ಸಂಘಟನೆ ನಿಷೇಧ ಮಾಡುವಂತಹ ಧೈರ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರದರ್ಶಿಸಬೇಕು. ಕನ್ನಡ ಧ್ವಜ ಸುಡುವ ಮೂಲಕ ನಾಡದ್ರೋಹ ವೆಸಗಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿ ದೇಶಕ್ಕೆ ಅಪಮಾನ ಮಾಡಲಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‍ಠಾಕ್ರೆ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಸಂಸದರು ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.
ಬುಧವಾರ ಎಲ್ಲಾ ಕನ್ನಡಪರ ಸಂಘಟನೆಗಳು, ದಲಿತರು, ಕಾರ್ಮಿಕರು, ವಕೀಲರು, ಸಾಹಿತಿಗಳ ಸಭೆ ಕರೆದು ಹೋರಾಟದ ಬಗ್ಗೆ ಸಭೆ ನಡೆಸುತ್ತೇವೆ ಎಂದು ಹೇಳಿದರು.

ಸಾ.ರಾ.ಗೋವಿಂದು ಮಾನತಾಡಿ, ಸಂಘಟನೆ ಪಕ್ಷ ಮರೆತು ಎಂಇಎಸ್ ವಿರುದ್ಧ ನಾವೆಲ್ಲ ಒಂದಾಗಬೇಕಾಗಿದೆ. ಎಂಇಎಸ್ ಅವರ ಕಿಡಿಗೇಡಿತನಕ್ಕೆ ಸರ್ಕಾರದ ಹೊಣಗೇಡಿತವೇ ಕಾರಣ. ಮರಾಠ ಅಭಿವೃದ್ಧಿ ಪ್ರಾಕಾರ ರಚನೆ ಮಾಡಿದ್ದೇ ಈವತ್ತಿನ ಪರಿಸ್ಥಿತಿಗೆ ಕಾರಣ. ಎಂಇಎಸ್ ನಿಷೇಧ ಮಾಡಲಿಲ್ಲವೆಂದರೆ ಕರ್ನಾಟಕ ಬಂದ್ ಆಗುತ್ತದೆ.

ಕನ್ನಡ ಬಾವುಟ ಸುಟ್ಟಿರುವ ಬಗ್ಗೆ ಹಲವು ನಟರು ಮಾತನಾಡಿದ್ದಾರೆ. ಆದರೆ, ಹೋರಾಟಕ್ಕೆ ಯಾರೂ ಬರುತ್ತಿಲ್ಲ. ಕರ್ನಾಟಕ ಬಂದ್‍ಗೆ ಕರೆ ಕೊಟ್ಟರೆ ಚಲನಚಿತ್ರ ನಾಯಕರು, ಎಲ್ಲಾ ನಟ-ನಟಿಯರು ಭಾಗವಹಿಸಬೇಕು ಎಂದು ಹೇಳಿದರು.
ಎಂಇಎಸ್ ಅವರ ಹಾಗೆ ನಾವು ಹೇಡಿತನ ಪ್ರದರ್ಶಿಸುವುದಿಲ್ಲ. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತಹ ಗಟ್ಟಿತನವನ್ನು ಸರ್ಕಾರ ಪ್ರದರ್ಶಿಸಬೇಕೆಂದು ಹೇಳಿದರು.