ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ, ಪ್ರವಾಹ ಭೀತಿ

Social Share

ಬೆಂಗಳೂರು,ಆ.5- ಮಳೆಯ ಅಬ್ಬರ ಮುಂದುವರೆದಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಳೆ ದೊಂದು ವಾರದಲ್ಲಿ ರಾಜ್ಯದ ಒಳನಾಡಿನಲ್ಲಿ ಶೇ.500ರಷ್ಟು ಅಧಿಕ ಮಳೆಯಾಗಿ ದಾಖಲೆ ನಿರ್ಮಿಸಿದೆ. ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿದರೆ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಹಲವು ಅನಾಹುತಗಳನ್ನು ಸೃಷ್ಟಿಸಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಹೊಲಗದ್ದೆಗಳು ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಾವೇರಿ ಕೊಳ್ಳದಲ್ಲಿ ಅಕ ಮಳೆಯಿಂದ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲೂ ಭಾರೀ ಮಳೆಯಾಗಿದ್ದು, ಮೇಲುಕೋಟೆಯ ತಂಗಿ ಕೊಳದ ಗೋಡೆ ಕುಸಿತವಾಗಿರುವ ವರದಿಯಾಗಿದೆ.

ಶಿಂಷಾ ನದಿ ಮೈದುಂಬಿ ಹರಿಯುತ್ತಿದೆ. ಕಣ್ವ ಜಲಾಶಯವು ಭರ್ತಿಯಾಗಿದೆ. ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವರು.

ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಅತಿವೃಷ್ಟಿ ಉಂಟಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಕೊಡಗಿನಲ್ಲಿ ವರುಣನ ರೌದ್ರಾವತಾರ ಮುಂದುವರೆದಿದೆ.ನಿರಂತರ ಮಳೆಯಿಂದಾಗಿ ಜಾನುವಾರುಗಳ ಮೇವಿಗೂ ಅಭಾವ ಸೃಷ್ಟಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತವಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಧಾರಾಕಾರ ಮಳೆಯಿಂದಾಗಿ ಭಾಗಮಂಡಲದಲ್ಲಿ ಕಾವೇರಿ ನದಿ ಬೋರ್ಗರೆಯುತ್ತಿದ್ದರೆ ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿದೆ. ನಾಪೊಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇಂದು ಬೆಳಗ್ಗೆಯೇ ಮಳೆ ಆರಂಭವಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಮೈಸೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು , ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಮತ್ತೆ ಮುಂದುವರೆದಿದ್ದು, ಸುಳ್ಯ ಹಾಗೂ ಕಡಬ ತಾಲ್ಲೂಕುಗಳ ಕಾಳಜಿ ಕೇಂದ್ರಗಳಲ್ಲಿ 58 ಮಂದಿ ಆಶ್ರಯ ಪಡೆದಿದ್ದಾರೆ. ಮಪ್ಪಾಡಿಯ ಗೋಳಿಯಡಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚನೆಯಾಗಿದೆ. ಅಂಬೆಕಲ್ಲು ಎಂಬಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸತತ ಮಳೆಯಾಗುತ್ತಿದ್ದು, ಬಹಳಷ್ಟು ಕಡೆ ಭಾರೀ ಮಳೆಯಾಗಿ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ನಿರಂತರ ಮಳೆಯಿಂದಾಗಿ ಮುಂಗಾರು ಹಂಗಾಮಿನ ಹೂವು, ತರಕಾರಿ, ಹಣ್ಣು ಸೇರಿದಂತೆ ಹಲವು ಬೆಳೆಗಳು ಹಾನಿಗೀಡಾಗಿವೆ.

ಬಹಳಷ್ಟು ಕಡೆ ಮನೆ ಕುಸಿತ ಉಂಟಾಗಿರುವ ವರದಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳೆಲ್ಲ ಮಳೆ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಎರಡು ದಿನ ಮಳೆ ಮುಂದುವರೆಯಲಿದೆ. ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಹಗುರದಿಂದ ಸಾಧಾರಣ ಮಳೆ ಆರಂಭವಾಗಿತ್ತು.

ಕಳೆದ ಒಂದು ವಾರದಲ್ಲಿ ವಾಡಿಕೆಗಿಂತ ಶೇ.500ರಷ್ಟು ಹಾಗೂ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಹವಾಮಾನ ಮುನ್ಸೂಚನೆ ಪ್ರಕಾರ ಮೋಡ ಕವಿದ ವಾತಾವರಣವಿದ್ದು, ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಆ.7ರ ನಂತರ ಮಳೆಯ ಪ್ರಮಾಣ ತಗ್ಗಲಿದ್ದು, ಆ.10ರವರೆಗೂ ಮೋಡ ಕವಿದ ವಾತಾವರಣ ಕಂಡುಬರಲಿದೆ. ಆ.12ರ ನಂತರ ಮಳೆ ಒಂದು ವಾರ ಬಿಡುವು ಕೊಡುವ ಲಕ್ಷಣಗಳು ಗೋಚರಿಸುತ್ತವೆ ಎಂದು ಹೇಳಿದರು.

ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತೆ ಪೂರ್ವ ಪಶ್ಚಿಮಾಭಿಮುಖವಾಗಿ ಟ್ರಪ್ ನಿರ್ಮಾಣವಾಗಿರುವುದರಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಆಗಾಗ್ಗೆ ಮಳೆಯಾಗುತ್ತಿದೆ ಎಂದು ಅವರು ತಿಳಿಸಿದರು.

Articles You Might Like

Share This Article