ಬಿಜೆಪಿ ಎಚ್ಚರಿಕೆ ಹೆಜ್ಜೆ…

ಬೆಂಗಳೂರು, ಏ.25- ಮಾಜಿ ಸಚಿವ ಹಾಗೂ ಶಾಸಕ ರಮೇಶ್‍ಜಾರಕಿ ಹೊಳಿ ರಾಜೀನಾಮೆ ನೀಡುವುದನ್ನೇ ನೆಚ್ಚಿಕೊಳ್ಳದೆ ಕಾಂಗ್ರೆಸ್ ಅತೃಪ್ತ ಶಾಸಕರ ನಡೆಯ ಮೇಲೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲ ನಡೆಸಲು ಬಿಜೆಪಿ ಮುಂದಾಗಿದೆ.

ಈ ಹಿಂದೆ ಉಂಟಾದ ಮುಜುಗರದಿಂದ ಈ ಬಾರಿ ಅಂತಹದ್ದೇ ಪುನರಾವರ್ತನೆಯಾಗಬಾರದೆಂಬ ಕಾರಣಕ್ಕಾಗಿ ಯಾವುದೇ ರೀತಿಯ ಆತುರದ ತೀರ್ಮಾನ ಕೈಗೊಳ್ಳದೆ ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮುಖಂಡರು ಬಂದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಇಂದು ನಡೆದ ಕೋರ್‍ಕಮಿಟಿ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಕೆಲವು ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆ ಎನ್ನುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಸ್ವಯಂ ಪ್ರೇರಿತವಾಗಿ ಎಷ್ಟು ಮಂದಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ನಡೆಯ ಮೇಲೆ ನಾವು ಮುಂದಿನ ಹೆಜ್ಜೆ ಇಡಬೇಕು. ಬೆರಳೆಣಿಕೆ ಶಾಸಕರನ್ನು ನಂಬಿಕೊಂಡು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಕೈ ಹಾಕಿದರೆ ಮುಜುಗರವಾಗುತ್ತದೆ. ಈ ಬಾರಿ ಎಚ್ಚರಿಕೆ ಹೆಜ್ಜೆ ಇಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೋರ್‍ಕಮಿಟಿ ಸಭೆಯಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿರುವುದು, ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ಶೇಕಡವಾರು ಮತದಾನ, ಮುಂದಿನ ತಿಂಗಳು 19ರಂದು ನಡೆಯಲಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಉಪ ಚುನಾವಣೆಗಿಂತಲೂ ಮುಖ್ಯವಾಗಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕೆಲವೇ ದಿನಗಳಲ್ಲಿ ಕಾಂಗ್ರೆಸ್‍ನ ಅತೃಪ್ತರೆಲ್ಲರೂ ರಾಜೀನಾಮೆ ನೀಡುವುದಾಗಿ ಹೇಳಿರುವ ಬಗ್ಗೆಯೇ ಚರ್ಚೆ ನಡೆದಿದೆ.

ಈ ಹಿಂದೆಯೂ ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಂಡಿದ್ದ ಬಳ್ಳಾರಿಯ ಬಿ.ನಾಗೇಂದ್ರ, ಬೆಳಗಾವಿಯ ಮಹೇಶ್‍ಕುಮಟಳ್ಳಿ, ನಿನ್ನೆಯಷ್ಟೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಕಂಪ್ಲಿಯ ಜೆ.ಗಣೇಶ್, ಹಿರೇಕೆರೂರಿನ ಬಿ.ಸಿ.ಪಾಟೀಲ್ ಸೇರಿದಂತೆ ಕೆಲವು ಅತೃಪ್ತರು ಬಿಜೆಪಿಗೆ ಬರುವುದಾಗಿ ಹೇಳಿದ್ದರು.

ಆದರೆ, ಯಾವ ಶಾಸಕರು ಕೂಡ ರಾಜೀನಾಮೆ ನೀಡರಲಿಲ್ಲ. ಆ ವೇಳೆಗಾಗಲೇ ಯಡಿಯೂರಪ್ಪ ದೇವದುರ್ಗದ ಐಬಿಯಲ್ಲಿ ಶಾಸಕರೊಬ್ಬರ ಪುತ್ರನ ಜತೆ ನಡೆಸಿದ ಆಡಿಯೋ ಪ್ರಕರಣ ಆಪರೇಷನ್ ಕಮಲಕ್ಕೆ ತಿರುಗು ಬಾಣವಾಗಿತ್ತು.

ಈ ಎಲ್ಲಾ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಅತೃಪ್ತರು ರಾಜೀನಾಮೆ ನೀಡುವವರೆಗೂ ಯಾವುದೇ ರೀತಿಯ ಪ್ರಯತ್ನವನ್ನು ನಡೆಸಬಾರದೆಂಬ ಒಂದು ಸಾಲಿನ ತೀರ್ಮಾನಕ್ಕೆ ಬಂದಿದ್ದಾರೆ.

ಮೇ 23ರಂದು ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದ್ದು, ಒಂದು ವೇಳೆ ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಾಭವಗೊಂಡರೆ ನೇರವಾಗಿ ಸರ್ಕಾರದ ಮೇಲೆ ಫಲಿತಾಂಶ ಪರಿಣಾಮ ಬೀರುತ್ತದೆ.

ಫಲಿತಾಂಶ ಪ್ರಕಟಗೊಂಡ ಮರು ದಿನವೇ ದೋಸ್ತಿ ಸರ್ಕಾರ ಒಂದಂಕಿಗೆ ಇಳಿದರೆ ಅತೃಪ್ತಗೊಂಡ ಶಾಸಕರು ಸರ್ಕಾರದ ವಿರುದ್ಧ ಸಿಡಿದೇಳುವರು. ಕೇಂದ್ರದಲ್ಲಿ ಪುನಃ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರೇ ಪ್ರಧಾನಿಯಾದರೆ, ಅತೃಪ್ತಗೊಂಡು ಸುಮಾರು 10ರಿಂದ 15 ಶಾಸಕರು ರಾಜೀನಾಮೆ ಕೊಡಲಿದ್ದಾರೆ.

ಈ ವೇಳೆ ಪ್ರತಿಪಕ್ಷದವರು ಆಪರೇಷನ್ ಕಮಲ ಎಂದು ಎಷ್ಟೇ ಆರೋಪಿಸಿದರೂ ನೈತಿಕವಾಗಿ ಅವರಿಗೆ ಬೆಂಬಲ ಸಿಗುವುದಿಲ್ಲ. ಆ ವೇಳೆಗೆ ಕಾಂಗ್ರೆಸ್‍ನವರೇ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎನ್ನುವ ಮಟ್ಟಿಗೆ ಬಂದಿರುತ್ತಾರೆ.

ಹಾಗಾಗಿ ನಾವು ಆತುರದ ನಿರ್ಧಾರ ಕೈಗೊಳ್ಳದೆ ಕಾದು ನೋಡುವ ಮೂಲಕ ಕಾರ್ಯತಂತ್ರ ರೂಪಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಯಾವುದೇ ನಾಯಕರು ಆಪರೇಷನ್ ಕಮಲದ ಬಗ್ಗೆಯಾಗಲಿ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುತ್ತೇವೆ ಎಂದು ಮಾಧ್ಯಮ ಹಾಗೂ ಹಾದಿಬೀದಿಯಲ್ಲಿ ಹೇಳಿಕೆ ನೀಡಬಾರದು.

ರಾಜ್ಯಾಧ್ಯಕ್ಷರು, ಪಕ್ಷದ ಪ್ರಮುಖರು ಹಾಗೂ ಪಕ್ಷದ ಅಧಿಕೃತ ವಕ್ತಾರರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಸೂಚನೆ ಕೊಡಲಾಗಿದೆ.