ಸದ್ಯದಲ್ಲೇ ರಾಜ್ಯ ಸಂಪುಟಕ್ಕೆ ಸರ್ಜರಿ..?

ಬೆಂಗಳೂರು,ಮಾ.11-ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬಿಜೆಪಿ ಪರ ಬಂದಿರುವುದರಿಂದ ಕರ್ನಾಟಕದಲ್ಲಿ ಸಂಪುಟಕ್ಕೆ ವರಿಷ್ಟರು ಮೇಜರ್ ಸರ್ಜರಿ ನಡೆಸುವುದು ಬಹುತೇಕ ಖಚಿತವಾಗಿದೆ. ಹಾಗಂತ ತಕ್ಷಣದಲ್ಲೇ ಯಾವುದೇ ಪ್ರಮುಖ ಬದಲಾವಣೆಗಳು ಆಗುವುದಿಲ್ಲ. ಪ್ರಸಕ್ತ ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬರುವ ಏಪ್ರಿಲ್ ಮೊದಲ ವಾರದ ಯುಗಾದಿ ಹಬ್ಬದ ಬಳಿಕ ಬಿಜೆಪಿ ವರಿಷ್ಠರು ಕರ್ನಾಟಕ ರಾಜಕಾರಣದ ಕಡೆಗೆ ಗಮನಹರಿಸುವುದು ನಿಶ್ಚಿತವಾಗಿದೆ.

ಪಕ್ಷ ಮತ್ತು ಸರ್ಕಾರ ಎರಡಕ್ಕೂ ಸರ್ಜರಿ ಮಾಡುವ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ. ಆ ಸರ್ಜರಿಯ ರೂಪರೇಷೆ ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆಯಾದ ನಂತರವೇ ಸ್ಪಷ್ಟರೂಪ ಪಡೆದುಕೊಳ್ಳಲಿದೆ. ಕರ್ನಾಟಕ ವಿಧಾನಸಭೆಗೆ ಮುಂದಿನ ಸಾರ್ವತ್ರಿಕ ಚುನಾವಣೆ ಗಮನದಲ್ಲಿ ಇರಿಸಿಕೊಂಡು ಹಲವು ಪ್ರಮುಖ ಬದಲಾವಣೆ ಮಾಡುವುದಕ್ಕೆ ವರಿಷ್ಠರು ಈ ಹಿಂದೆಯೇ ಚಿಂತನೆ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.ಅದೇ ವೇಳೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಎದುರಾಯಿತು.ಈಗ ಫಲಿತಾಂಶ ಬಿಜೆಪಿ ಪರವಾಗಿ ಬಂದಿರುವ ಕಾರಣ ಯಾವ ಸ್ವರೂಪದಲ್ಲಿ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇತ್ತ ಸಚಿವಾಕಾಂಕ್ಷಿಗಳು ಕೂಡಲೇ ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸುತ್ತಲೇ ಇದ್ದಾರೆ. ಅದಕ್ಕೆ ಕಾರಣಗಳೂ ಇದೆ.ಸಚಿವಾಕಾಂಕ್ಷಿ ಶಾಸಕರು ಸಂಪುಟ ಪುನಾರಚನೆಗೆ ಇನ್ನು ಹೆಚ್ಚು ದಿನ ಕಾಯುವುದು ಬೇಡ ಎನ್ನುತ್ತಿದ್ದಾರೆ.

ಈ ವರ್ಷ ಚುನಾವಣಾ ವರ್ಷವಾಗಿರುವ ಕಾರಣ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನಗಳನ್ನು ಇಟ್ಟುಕೊಂಡು, ಕ್ಷೇತ್ರ ಉಳಿಸಿ ಕೊಳ್ಳುವುದು ಕೂಡಾ ಕಷ್ಟವಾಗಬಹುದು ಎನ್ನುವ ಆತಂಕ ಶಾಸಕರನ್ನು ಕಾಡುತ್ತಿದೆ. ಹೀಗಾಗಿ ಕಾಯದೆ, ತಕ್ಷಣ ಸಂಪುಟ ಪುನಾರಚನೆ ಮಾಡಬೇಕೆಂದು ಶಾಸಕರು ಸಿ.ಎಂ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.

ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ: ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿ ಅಸಮಾಧಾನವಿದೆ. ಕೆಲ ಸಚಿವರಿಂದ ಪಕ್ಷದ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಯಾಗುತ್ತಿಲ್ಲ.ಕೆಲ ಸಚಿವರು ಶಾಸಕರ ಕೈಗೆ ಕೂಡ ಸಿಗುತ್ತಿಲ್ಲ ಅಂತಾ ಕೆಲ ಹಾಲಿ ಸಚಿವರ ಬಗ್ಗೆ ಶಾಸಕರು ಆರೋಪ ಮಾಡುತ್ತಿದ್ದಾರೆ.

ಈವರೆಗೆ ಹೆಚ್ಚು ಬಾರಿ ಅಧಿಕಾರ ಅನುಭವಿಸಿದವರು, ಅವಕಾಶ ನೀಡಿದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸದವರು, ಮಹತ್ವದ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸದೆ ವಿವಾದಕ್ಕೆ ಸಿಲುಕಿದವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರು, ಸಮರ್ಥರು, ಅನುಭವಿಗಳು, ಪಕ್ಷ ಹಾಗೂ ಸರಕಾರದ ವರ್ಚಸ್ಸು ಹೆಚ್ಚಿಸುವಂತಹ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ಸಚಿವಾಕಾಂಕ್ಷಿಗಳ ಒತ್ತಾಯ.

ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಆರು ತಿಂಗಳು ಪೂರ್ಣಗೊಳಿಸಿದ ಬೆನ್ನಲ್ಲೇ ಸಂಪುಟ ಸರ್ಜರಿಗೆ ಒತ್ತಡ ಹೆಚ್ಚುತ್ತಿದೆ. ಮುಂದಿನ 15 ದಿನಗಳಲ್ಲಿ ಸಂಪುಟ ಪುನರ್ ರಚನೆಯಾಗದಿದ್ದರೆ ಇನ್ನೂ ಎರಡು ತಿಂಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹಾಗಾಗಿ ಸಚಿವಾಕಾಂಕ್ಷಿಗಳು ತೆರೆಮರೆಯಲ್ಲೇ ಒತ್ತಡ ತಂತ್ರ ಮುಂದುವರಿಸಿದ್ದಾರೆ.

ಅಂದರೆ ಬಿಜೆಪಿ ಸರಕಾರವಿದ್ದ 2006, 2008, 2019ರಲ್ಲಿ ಸಚಿವರಾದವರು ಹಾಗೂ ಎರಡು ಬಾರಿಯಾದರೂ ಸಚಿವರಾದವರನ್ನು ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಅವರ ಅನುಭವ, ಸಂಘಟನಾ ಕೌಶಲ್ಯವನ್ನು ಬಳಸಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂಬುದು ಅವರ ಆಶಯ.

ಇನ್ನೊಂದೆಡೆ ಬಿಜೆಪಿ ಸರಕಾರ ರಚನೆಗೆ ನೆರವಾದರೆಂಬ ಕಾರಣಕ್ಕೆ ಸಚಿವ ಸ್ಥಾನ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಲಾಗದವರನ್ನು ಕೈಬಿಡಬೇಕು. ಪಕ್ಷಕ್ಕೆ ಬಂದು ಎರಡು ವರ್ಷವಾದರೂ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದವರು, ಮುಖಂಡರು, ಕಾರ್ಯಕರ್ತರೊಂದಿಗೆ ಬೆರೆಯದೆ ಅಂತರ ಕಾಯ್ದುಕೊಂಡವರಿಗೆ ಬೇರೆ ಜವಾಬ್ದಾರಿ ನೀಡಬೇಕು ಎಂಬ ಆಗ್ರಹವೂ ಇದೆ.

ಬಹಳಷ್ಟು ಸಚಿವರು ಪಕ್ಷದ ಶಾಸಕರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಕಾರ್ಯಕ್ರಮ, ಅನುದಾನ, ವರ್ಗಾವಣೆ ಸೇರಿದಂತೆ ಯಾವ ಮನವಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಪಕ್ಷದ ಸರಕಾರವಿದ್ದಾಗಲೂ ಕೆಲಸ ಕಾರ್ಯಗಳಾಗದಿದ್ದರೆ ಮುಂದಿನ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ತಲುಪುವುದು ಸವಾಲಾಗಲಿದೆ. ಹಾಗಾಗಿ ಕೂಡಲೇ ಸಂಪುಟ ಸರ್ಜರಿಯಾಗಬೇಕು ಎಂಬಹುದು ಬಹಳಷ್ಟು ಶಾಸಕರ ಆಗ್ರಹವಾಗಿದೆ.

ಇನ್ನು ಅಗತ್ಯ ಬಿದ್ದರೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಚರ್ಚೆ ನಡೆಸಲು ಕೂಡ ಕೆಲ ಬಿಜೆಪಿ ಶಾಸಕರು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಹಾಲಿ ಸಚಿವರ ಕೆಲವರ ಕಾರ್ಯವೈಖರಿಯ ಬಗ್ಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ, ಆಡಳಿತ ಪಕ್ಷ ಬಿಜೆಪಿಯಲ್ಲಿ ಬದಲಾವಣೆಯ ಸರ್ಕಸ್ ಗೆ ಚಾಲನೆ ಸಿಕ್ಕಿದೆ. ಹಳೇ ಹುಲಿಗಳು ಸೇರಿದಂತೆ ಶಾಸಕರ ಮಧ್ಯೆ ಪೈಪೆÇೀಟಿ ಶುರುವಾಗಿದ್ದು, ಮುಂದೆ ಏನೆಲ್ಲಾ ಹೈಡ್ರಾಮಾ, ಲಾಬಿ ರಾಜಕೀಯ ನಡೆಯುತ್ತೋ ಕಾದು ನೋಡಬೇಕಿದೆ.

ವಿಜಯೇಂದ್ರ ಸೇರ್ಪಡೆ ಬೇಡಿಕೆ: ಈ ನಡುವೆ, ಸಂಪುಟಕ್ಕೆ ಹೊಸಬರು, ಪ್ರಭಾವಿಗಳ ಸೇರ್ಪಡೆ ಆಗಬೇಕು ಎಂಬ ಬೇಡಿಕೆಯಲ್ಲಿ ಬಿ.ವೈ. ವಿಜಯೇಂದ್ರ ಅವರ ಹೆಸರೂ ಸೇರಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಪಂಚಮಸಾಲಿ ಕೋಟಾದಲ್ಲಿ ಒಬ್ಬರನ್ನು ಬಿಟ್ಟು ಯತ್ನಾಳ್ ಅವರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಇದೆ ಎನ್ನಲಾಗಿದೆ.

ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯರು?
ಬಸನಗೌಡ ಪಾಟೀಲ್ ಯತ್ನಾಳ್
ರೇಣುಕಾಚಾರ್ಯ
ಪಿ.ರಾಜೀವ್
ಪೂರ್ಣಿಮಾ ಶ್ರೀನಿವಾಸ್
ತಿಪ್ಪಾರೆಡ್ಡಿ
ಸತೀಶ್ ರೆಡ್ಡಿ
ಎಸ.ಎ.ರಾಮಾದಾಸ್
ರಾಜುಗೌಡ ನಾಯಕ್
ಬಿ.ವೈವಿಜೇಯೇಂದ್ತ
ಅರವಿಂದ ಬೆಲ್ಲದ್
ಎನ್.ರವಿಕುಮಾರ್
ಎಂ.ಪಿ.ಕುಮಾರಸ್ವಾಮಿ