ಬೆಂಗಳೂರು,ಆ.8- ರಾಜ್ಯ ರಾಜಕಾರಣದಲ್ಲಿ ಆ.15ರ ನಂತರ ಸ್ವಾತಂತ್ರ್ಯ ದಿನಾಚರಣೆ ಬಳಿಕ ಯಾರೂ ಕೂಡ ಊಹಿಸಲಾಗದ ಬದಲಾವಣೆಯಾಗಲಿದೆ ಎಂಬ ಮಾತುಗಳು ಆಡಳಿತರೂಢ ಬಿಜೆಪಿಯಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಂತೆ ಮಹತ್ವದ ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಬದಲಾವಣೆ ಎಂದರೆ ಕೇವಲ ಸಿಎಂ ಬೊಮ್ಮಾಯಿ ಅವರ ಕುರ್ಚಿಗೆ ಆಪತ್ತು ಎಂದು ಭಾವಿಸಬೇಕಾಗಿಲ್ಲ. ಇದು ಯಾರಿಗೆ ಬೇಕಾದರೂ ಅದೃಷ್ಟ ಕೈ ಕೊಟ್ಟು ಇನ್ಯಾರಿಗೂ ಜಾಕ್‍ಪಾಟ್ ಹೊಡೆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಪಕ್ಷದ ಮೂಲಗಳು.
ಕಳೆದ ವಾರ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಚುನಾವಣಾ ಚಾಣುಕ್ಯ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರು ಸೇರಿದಂತೆ ಕೆಲವು ಪ್ರಮುಖರ ಜೊತೆ ಮಾತುಕತೆ ನಡೆಸಿದ ವೇಳೆ ಬದಲಾವಣೆಯ ಸುಳಿವನ್ನು ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ಕಡೆ ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವುದು, ಮತ್ತೊಂದು ಕಡೆ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆಯಾದ ನಂತರ ಸ್ವಪಕ್ಷೀಯರ ವಿರುದ್ದ ಕಾರ್ಯಕರ್ತರೇ ತಿರುಗಿಬಿದ್ದಿರುವುದು ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಚಿಂತಕ ಚಾವಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ 3 ಸಂಖ್ಯೆಗಳನ್ನು ದಾಟಬೇಕಾದರೆ ಪಕ್ಷದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಬೇಕೆಂದು ಬಿಜೆಪಿಗೆ ಸಲಹೆ ಕೊಟ್ಟಿದೆ.
ಈಗಿರುವ ಸ್ಥಿತಿಗತಿಯಲ್ಲಿ ಚುನಾವಣೆ ಎದುರಿಸಲು ಸಾಧ್ಯವೇ ಇಲ್ಲ. ಕೇವಲ ನರೇಂದ್ರಮೋದಿ ನಾಯಕತ್ವದಲ್ಲಿ ಬಿಜೆಪಿಯನ್ನು ದಡ ಸೇರಿಸಲು ಸಾಧ್ಯವಿಲ್ಲ.
ಉತ್ತರ ಭಾರತದ ರಾಜ್ಯಗಳಂತೆ ಕರ್ನಾಟಕದಲ್ಲಿ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಕೋಮು ದೃಢೀಕರಣ ನಡೆಸುವುದು ಅಷ್ಟು ಸುಲಭವಲ್ಲ. ಆ ಪ್ರಯೋಗ 10 ಜಿಲ್ಲೆಗಳಲ್ಲಿ ಮಾತ್ರ ನಡೆಯಬಹುದು.
224 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ದೃವೀಕರಣದ ಮೇಲೆ ಹೆಚ್ಚೆಂದರೆ 50ರಿಂದ 60 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು. ಕರ್ನಾಟಕದ ಜನತೆ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ಕೊಡುತ್ತಾರೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಮಹತ್ವದ ಬದಲಾವಣೆ ಮಾಡಬೇಕೆಂದು ಆರ್‍ಎಸ್‍ಎಸ್ ಚಿಂತಕರ ಚಾವಡಿ ಕಮಲ ಪಡೆಗೆ ಸಲಹೆ ನೀಡಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಸದ್ಯದ ಸ್ಥಿತಿಯಲ್ಲಿ ಬೊಮ್ಮಾಯಿ ಅವರ ನಾಯಕತ್ವ ಮುಂದುವರೆಯುವ ಬಗ್ಗೆಯೂ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಕೆಲವರು 2023ರ ಚುನಾವಣೆವರೆಗೂ ಅವರೇ ಮುಂದುವರೆಯಬಹುದು ಎಂದು ಹೇಳುತ್ತಿದ್ದಾರೆ. ಆದರೆ ಇದೇ ಪ್ರಶ್ನೆಯನ್ನು ಪಕ್ಷದ ಕೆಲವು ನಾಯಕರಿಗೆ ಆಂತರಿಕವಾಗಿ ಕೇಳಿದರೆ ಮೌನಕ್ಕೆ ಜಾರುತ್ತಾರೆ.
ನಾಯಕತ್ವ ಬದಲಾಯಿಸಿ ಆಕ್ರಮಣಕಾರಿ ನಾಯಕತ್ವ ಹಾಗೂ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವವರನ್ನು ಸಿಎಂ ಸ್ಥಾನದಲ್ಲಿ ಕೂರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಬೊಮ್ಮಾಯಿ ಅವರನ್ನು ಮುಂದುವರೆಸುವುದು ಬಿಡುವುದು ಮೋದಿ ಕೈಯಲ್ಲಿದೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.
ಇನ್ನು ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಸಂಘ ಪರಿವಾರದ ಹಿನ್ನೆಲೆಯುಳ್ಳ ಹಾಗೂ ಆಕ್ರಮಣಕಾರಿ ವ್ಯಕ್ತಿತ್ವ ಇರುವವರನ್ನೇ ಅಧ್ಯಕ್ಷರನ್ನಾಗಿ ನೇಮಿಸುವ ಚಿಂತನೆ ಇದೆ.
ಉಳಿದಂತೆ ಸಂಪುಟದಲ್ಲಿ ಕೆಲವು ಹಿರಿಯರಿಗೆ ಕೋಕ್ ನೀಡಿ ಪಕ್ಷ ನಿಷ್ಠರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಪದೇ ಪದೇ ಅಧಿಕಾರದ ರುಚಿ ಅನುಭವಿಸಿರುವವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜಿಸಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಅಂತಿಮವಾಗಿ ಆ.15ರ ನಂತರ ಈ ಎಲ್ಲ ಬೆಳವಣಿಗೆಗಳಿಗೂ ಚಾಲನೆ ದೊರಕುವ ಸಂಭವವಿದೆ.