ದೆಹಲಿಯತ್ತ ಹೊರಟ ಸಚಿವಕಾಂಕ್ಷಿಗಳ ದಂಡು, ಸಿಎಂಗೆ ತಲೆಬಿಸಿ

Social Share

ಬೆಂಗಳೂರು,ಫೆ.3- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಂತೆ ಸೋಮವಾರ ದೆಹಲಿಗೆ ತೆರಳುವುದು ಖಚಿತವಾಗುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ರಾಷ್ಟ್ರ ರಾಜಧಾನಿಗೆ ಹಾರಲು ಸಜ್ಜಾಗಿದ್ದಾರೆ. ಶತಾಯಗತಾಯ ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯಲೇಬೇಕೆಂದು ನಾನಾ ತಂತ್ರಗಳನ್ನು ಬಳಸುತ್ತಿರುವ ಶಾಸಕರು, ಸಿಎಂ ದೆಹಲಿಗೆ ತೆರಳುವ ಮುನ್ನವೇ ವಿಮಾನ ಹತ್ತಲು ಒಂದು ಡಜನ್‍ಗೂ ಅಕ ಶಾಸಕರು ಮುಂದಾಗಿದ್ದಾರೆ.
ಈಗಗಲೇ ಸಾರಿಗೆ ಸಚಿವ ಶ್ರೀರಾಮುಲು ಎರಡು ದಿನಗಳ ಹಿಂದೆಯೇ ನವದೆಹಲಿಗೆ ತೆರಳಿದ್ದು, ನಿನ್ನೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಲಾಖೆಯ ಕೆಲಸ ನಿಮಿತ್ತ ದೆಹಲಿಗೆ ಬಂದಿದ್ದೇನೆ ಎಂದು ಶ್ರೀರಾಮುಲು ಹೇಳುತ್ತಿದ್ದರಾದರೂ, ಕೈತಪ್ಪಿರುವ ಡಿಸಿಎಂ ಪಟ್ಟ ಮತ್ತು ತಮ್ಮ ಪರಮಾಪ್ತ ಗೆಳೆಯ ಜನಾರ್ಧನರೆಡ್ಡಿಯನ್ನು ಪಕ್ಷ ಸೇರ್ಪಡೆ ಕುರಿತಂತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ವರಿಷ್ಟರು ಶ್ರೀರಾಮುಲು ಅವರ ಮನವಿಯನ್ನು ಪುರಸ್ಕರಿಸುವರೇ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ.
ಪ್ರಕರಣವೊಂದರಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಕೂಡ ದೆಹಲಿಗೆ ತೆರಳಲು ಮುಂದಾಗಿದ್ದಾರೆ. ಪ್ರಸ್ತುತ ಗೋವಾದಲ್ಲಿ ಬಿಜೆಪಿ ಪರ ಕನ್ನಡಗ ಮತದಾರರನ್ನು ಓಲೈಸುತ್ತಿರುವ ಅವರು, ಗೋವಾ ಬಿಜೆಪಿ ಉಸ್ತುವಾರಿ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಜತೆ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಭಾನುವಾರದತನಕ ಪ್ರಚಾರ ನಡೆಸಲಿರುವ ರಮೇಶ್ ಜಾರಕಿಹೊಳಿ ಅಂದು ಸಂಜೆ ಪಣಜಿ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಕರೆಯ ಮೇರೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಮವಾರ ಬೆಳಗ್ಗೆ ನವದೆಹಲಿಗೆ ತೆರಳುತ್ತಿದ್ದಾರೆ.
ಇದರ ಬೆನ್ನಲ್ಲೇ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ರಾಜುಗೌಡ ನಾಯಕ್, ತಿಪ್ಪಾರೆಡ್ಡಿ, ರಾಮದಾಸ್, ಸತೀಶ್‍ರೆಡ್ಡಿ, ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ್, ಸೋಮಶೇಖರ್ ರೆಡ್ಡಿ, ಅಪ್ಪುಗೌಡ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್, ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಹಮನಿ ಸೇರಿದಂತೆ 12ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹೊರಡವು ಸಾಧ್ಯತೆ ಇದೆ.
ದೆಹಲಿಗೆ ಬರಬೇಡಿ ಎಂದು ಹೈಕಮಾಂಡ್ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರೂ ಸಂಪುಟಕ್ಕೆ ತೆಗೆದುಕೊಳ್ಳಲು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕುವುದಕ್ಕಾಗಿಯೇ ಶಾಸಕರು ದೆಹಲಿಗೆ ದೌಡಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
# ಸಿಎಂಗೆ ತಲೆ ಬಿಸಿ:
ಪಂಚರಾಜ್ಯ ಚುನಾವಣಾ ಪ್ರಚಾರದ ಕಾವು ದಿನೇ ದಿನೇ ಕಾವೇರುತ್ತಿರುವ ಸಮಯದಲ್ಲಿ ಕ್ಯಾಬಿನೆಟ್ ಗುದ್ದಾಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲೆ ಬಿಸಿ ತಂದಿದೆ. ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಸಿಎಂ ಮುಂದಾದರೂ ಪಕ್ಷದ ಹೈಕಮಾಂಡ್ ನಾಯಕರು ಪಂಚರಾಜ್ಯ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ದೆಹಲಿ ಭೇಟಿ ನೀಡಲು ಸಜ್ಜಾಗಿ ನಿಂತಿರುವ ಸಿಎಂ ಬೊಮ್ಮಾಯಿಗೆ ಭೇಟಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಸಂಪುಟ ವಿಸ್ತರಣೆ ಮಾಡುವುದಿದ್ದರೆ ಈಗಲೇ ಈಗಲೇ ಮಾಡಬೇಕು. ಆ ಮೇಲೆ ಮಾಡಿದರೆ ಪ್ರಯೋಜನ ಆಗಲ್ಲ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಪ್ರಸಕ್ತ ಅವಯ ಸರ್ಕಾರದಲ್ಲಿ ಈ ಬಾರಿ ಸಂಪುಟ ಸರ್ಜರಿ ನಡೆದ್ರೆ ಬಹುಶಃ ಇದೇ ಕೊನೆಯದ್ದು. ಹೀಗಾಗಿ ಕೆಲ ತಿಂಗಳ ಮಟ್ಟಿಗಾದರೂ ಮಂತ್ರಿಯಾಗೋಣ ಎಂದು ಬಿಜೆಪಿಯ ಒಂದು ಡಜನ್ಗೂ ಹೆಚ್ಚು ಶಾಸಕರು ಮಂತ್ರಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದಷ್ಟು ಬೇಗ ಸಂಪುಟ ಸರ್ಜರಿ ಮಾಡಿ ಎಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ.

Articles You Might Like

Share This Article