ಗಡಿ ವಿವಾದ: ಏಕಪಕ್ಷೀಯ ನಿರ್ಧಾರ ಬೇಡ ಕೇಂದ್ರಕ್ಕೆ ಸಂಸದರ ನಿಯೋಗ ಆಗ್ರಹ

Social Share

ಬೆಂಗಳೂರು,ಡಿ.12- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ವಿವಾದಲ್ಲಿ ತಕ್ಷಣವೇ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದೆಂದು ಬಿಜೆಪಿ ಒತ್ತಾಯಿಸಲಿದೆ.

ಇಂದು ಸಂಜೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲಿರುವ ರಾಜ್ಯ ಸಂಸದರ ನಿಯೋಗ, ವಿವಾದ ಸುಪ್ರೀಂಕೋರ್ಟ್‍ನಲ್ಲಿ ಇರುವ ಕಾರಣ ಅಲ್ಲಿಯವರೆಗೂ ತಟಸ್ಥ ನೀತಿ ಅನುಸರಿಸಬೇಕೆಂದು ಮನವಿ ಮಾಡಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಸಂಸದರಾದ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಬಿ.ವೈ.ರಾಘವೇಂದ್ರ, ರಮೇಶ್ ಜಿಗಜಿಣಗಿ, ವಿ.ಶ್ರೀನಿವಾಸ್ ಪ್ರಸಾದ್, ಮಂಗಳ ಅಂಗಡಿ, ಶಿವಕುಮಾರ್ ಉದಾಸೀ ಸೇರಿದಂತೆ ಎಲ್ಲ ಸಂಸದರು ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯದ ನಿಲುವನ್ನು ತಿಳಿಸಲಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರ ಜೊತೆ ಅಮಿತ್ ಷಾ ಗಡಿ ವಿವಾದ ಕುರಿತಂತೆ ಚರ್ಚೆ ನಡೆಸುವ ಮುನ್ನವೇ ಸಂಸದರು ಸಂಸದರ ನಿಯೋಗ ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಕಳೆದ ವಾರ ಸಂಸದೆ ಸುಪ್ರೀಂ ಸುಳೆ ನೇತೃತ್ವದ ಎನ್‍ಸಿಪಿ ನಿಯೋಗವು ತಕ್ಷಣವೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕದ ಗಡಿಯಲ್ಲಿ ಮರಾಠಿ ಭಾಷೆ ಮಾತನಾಡುವವರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದ್ದರು.

ಬಿಜೆಪಿ ಚುನಾವಣ ರಣತಂತ್ರ: ಮೋದಿ ರ‍್ಯಾಲಿಗಳಿಗೆ ಸಿದ್ಧತೆ

ಇದಕ್ಕೆ ಪ್ರತಿಯಾಗಿ ರಾಜ್ಯದ ಸಂಸದರು ಅಮಿತ್ ಷಾ ಅವರನ್ನು ಭೇಟಿಯಾಗಿ ಕರ್ನಾಟಕ ಸರ್ಕಾರ ಗಡಿ ವಿವಾದ ಪರಿಹರಿಸಲು ತೆಗೆದುಕೊಂಡಿರುವ ಕ್ರಮಗಳು, ಗಡಿಯಲ್ಲಿ ಎಂಇಎಸ್, ಶಿವಸೇನೆ, ಎನ್‍ಸಿಪಿ ಸೇರಿದಂತೆ ಕೆಲವು ಸಂಘಟನೆಗಳ ಮುಖಂಡರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೇಲೆ ಪುಂಡಾಟಿಕೆ, ಬಸ್‍ಗಳ ಮೇಲೆ ಹಲ್ಲೆ, ಮಸಿ ಬಳಿಯುವುದು, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮತ್ತಿತರ ಕಡೆ ನಡೆಸುತ್ತಿರುವ ಪುಂಡಾಟಿಕೆಗಳ ಬಗ್ಗೆ ಗೃಹ ಸಚಿವರ ಗಮನ ಸೆಳೆಯಲಿದ್ದಾರೆ.

ಕರ್ನಾಟಕ ಸರ್ಕಾರ ಗಡಿ ವಿವಾದವನ್ನು ಎಂದೂ ಕೆಣಕುತ್ತಿಲ್ಲ. ಮರಾಠಿ ಮಾತನಾಡುವವರ ಮೇಲೆ ಭಾಷಾ ವಿವಾದ ಇಟ್ಟುಕೊಂಡು ಹಲ್ಲೆ ನಡೆಸುತ್ತಿಲ್ಲ. ಮರಾಠಿಗರು ಮತ್ತು ಕನ್ನಡಿಗರು ಸೌಹಾರ್ದಯುತವಾಗಿ ಅಣ್ಣತಮ್ಮಂದಿರಂತೆ ಜೀವನ ನಡೆಸುತ್ತಿದ್ದಾರೆ.

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ಸಂಘಟನೆಗಳು ಪದೇ ಪದೇ ಇದನ್ನು ಕೆಣಕುತ್ತಲೇ ಇವೆ. ಮಹಾರಾಷ್ಟ್ರ ಸರ್ಕಾರ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಲಿದ್ದಾರೆ.

ರಾಜ್ಯ ಜಿಎಸ್‍ಟಿ ಸಂಗ್ರಹ ಕುಸಿತ

ಈಗಾಗಲೇ ಗಡಿ ವಿವಾದ ಕುರಿತಂತೆ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ನಿಲುವನ್ನು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಚುನಾವಣೆ ಬಂದಾಗಲೆಲ್ಲ ಮಹಾರಾಷ್ಟ್ರದವರು ಕರ್ನಾಟಕದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಅನೇಕ ಬಾರಿ ನ್ಯಾಯಾಲಯದಲ್ಲಿ ಅವರಿಗೆ ಹಿನ್ನಡೆಯಾಗಿದೆ. ಪ್ರಸ್ತುತ ನ್ಯಾಯಾಲಯದ ಮೆಟ್ಟಿಲೇರಿರುವುದು ಮಹಾರಾಷ್ಟ್ರ ಸರ್ಕಾರ. ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ಯಥಾಸ್ಥಿತಿ ಮುಂದುವರೆಸಲು ನಿರ್ದೇಶನ ನೀಡಬೇಕೆಂದು ನಿಯೋಗವು ಮನವಿ ಮಾಡಲಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವಿಷಯದಲ್ಲಿ ಅತ್ಯಂತ ಜಾಣ್ಮೆ ಪ್ರದರ್ಶಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಂಡಿದ್ದು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಜೊತೆಯೂ ಮಾತುಕತೆ ನಡೆಸಿದ್ದಾರೆ.

ಗಡಿಯಲ್ಲಿ ಸಣ್ಣ ವಿವಾದವೂ ಕೂಡ ಉಂಟಾಗದಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ ಮಹಾರಾಷ್ಟ್ರ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಆತುರದ ನಿರ್ಧಾರ ತೆಗೆದುಕೊಂಡರೆ ಅದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ನಿಯೋಗ ಮನವಿ ಮಾಡಿಕೊಳ್ಳಲಿದೆ.

ಮಹಾರಾಷ್ಟ್ರ ತಗಾದೆಗೆ ಆಕ್ಷೇಪ: ಎನ್‍ಸಿಪಿ, ಕಾಂಗ್ರೆಸ್, ಠಾಕ್ರೆ ಬಣದ ಶಿವಸೇನೆ, ಮಹಾವಿಕಾಸ ಅಘಾಡಿ ಮೈತ್ರಿ ಕೂಟದ ಸಂಸದರು ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂಸಾಚಾರ ಸಾಧ್ಯತೆ ಇದೆ. ಹಾಗಾಗಿ ಮಧ್ಯಪ್ರವೇಶ ಮಾಡಬೇಕು ಎಂದು ಅಮಿತ್ ಶಾ ಅವರಿಗೆ ಸಲ್ಲಿಸಿದ್ದ ಮನವಿ ಕುರಿತು ಮಾತುಕತೆ ನಡೆಯಲಿದೆ.

ಮುಂದುವರೆದ ಮಳೆಯ ಅಬ್ಬರ ಜನಜೀವನ ತತ್ತರ..

ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಯ ಮರಾಠಿ ಭಾಷಿಕ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಕರಾರು ಎತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಲಿದ್ದಾರೆ.

ಇತ್ತೀಚಿನ ಕೆಲ ದಿನಗಳಿಂದ ಮಹಾರಾಷ್ಟ್ರ ಸರ್ಕಾರವೇ ಅನಗತ್ಯ ಗಡಿ ವಿವಾದದ ಕಿಚ್ಚು ಹೊತ್ತಿಸಿದೆ. ಗಡಿ ಭಾಗದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್ ಗಳ ಮೇಲೆ ಕಲ್ಲು ತೂರಾಟದಂತಹ ಚಟುವಟಿಕೆ ನಡೆಯುತ್ತಿವೆ. ಇದರಿಂದ ಉಭಯ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಲಿದೆ.

ಕಾನೂನು ಮೊರೆ ಹೋದ ನಂತರ ವಿವಾದವನ್ನು ಅಲ್ಲಿಯೇ ಪರಿಹರಿಸಿಕೊಳ್ಳಲು ಎಲ್ಲ ಅವಕಾಶವಿದ್ದರೂ ಬಹಿರಂಗ ಹೇಳಿಕೆ ಮೂಲಕ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎನ್ನುವುದನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ದಾಖಲೆ ಸಹಿತ ವಿವರಿಸಲು ನಿಯೋಗ ಸಿದ್ಧತೆ ಮಾಡಿಕೊಂಡಿದೆ.

Karnataka, BJP MPs, meet, Amit Shah, border dispute,

Articles You Might Like

Share This Article