ಬೆಂಗಳೂರು,ಡಿ.9- ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಇರುವ ಕಾರಣ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಬದಲಾಯಿಸದೆ ಮುಂದುವರೆಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.
ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಕಟೀಲ್ ಅವರನ್ನು ಬದಲಾಯಿಸಿ ತೆರವಾಗಲಿರುವ ಈ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲು ಚಿಂತನೆ ನಡೆದಿದೆ. ಕಳೆದ 2 ವರ್ಷ 11 ತಿಂಗಳು ಕಾಲ ಪಕ್ಷದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ನಳೀನ್‍ಕುಮಾರ್ ಕಟೀಲ್ ಅವರ ಜಾಗಕ್ಕೆ ಇನ್ನೊಂದು ತಿಂಗಳಿನಲ್ಲಿ ಚುನಾವಣೆ ನಡೆಸಿ ಹೊಸಬರ ನೇಮಕಕ್ಕೆ ಅವಕಾಶ ಕಲ್ಪಿಸಬೇಕಿದೆ. ಆದರೆ ಈ ಪ್ರಕ್ರಿಯೆಗೆ ಬಿಜೆಪಿ ಹೈಕಮಾಂಡ್ ತಾತ್ಕಾಲಿಕ ತಡೆ ನೀಡಿದೆ.
ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ಸದ್ಯಕ್ಕೆ ನಡೆಸದೇ ಹಂಗಾಮಿಯಾಗಿ ಕಟೀಲ್ ಅವರನ್ನೇ ಮುಂದುವರೆಸಲು ನಿರ್ಧರಿಸಿದೆ. ಪಕ್ಷದ ಸಂವಿಧಾನದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಅಥವಾ ಅವಿರೋಧ ಆಯ್ಕೆ ಮಾಡಬೇಕು.
ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ನ್ಯಾಯಾಲಯದ ಮುಂದೆ ಹಾಜರ್
ಆದರೆ ಈಗ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ದಲ್ಲಿ ಮೂರ್ನಾಲ್ಕು ತಿಂಗಳಿನಲ್ಲೇ ಎದುರಾಗಲಿರುವ ಚುನಾವಣೆಯಲ್ಲಿ ಸಂಘಟನಾತ್ಮಕ ಚುಟುವಟಿಕೆಯಲ್ಲಿ ಸಮನ್ವಯತೆ ಕೊರತೆ ಎದುರಾಗಲಿದೆ.
ಇದು ಪಕ್ಷದ ಚುನಾವಣಾ ರಣತಂತ್ರದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಸದ್ಯಕ್ಕೆ ಕಟೀಲ್ ಬದಲಾವಣೆ ಮಾಡದೇ ಅವರನ್ನೇ ಆರು ತಿಂಗಳು ಮುಂದುವರೆಸುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮದಂತೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ 2019ರ ಆ.27ರಂದು ಸಂಸದ ನಳೀನ್ ಕುಮಾರ್ ಕಟೀಲ್ ಹಂಗಾಮಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಬೆಂಗಳೂರು ಸೇರಿದಂತೆ ವಿವಿಧೆಡೆ ಐಟಿ ದಾಳಿ
ಒಂದು ವೇಳೆ ಈಗ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದಲ್ಲಿ ಪದಾಧಿಕಾರಿಗಳ ತಂಡವನ್ನೂ ಬದಲಿಸಬೇಕಾಗಲಿದೆ. ಜಿಲ್ಲಾ ಘಟಕಗಳನ್ನೂ ಪುನರ್ ನೇಮಕ ಮಾಡಬೇಕಾಗಲಿದೆ.
ಸಹಜವಾಗಿಯೇ ಹೊಸ ಅಧ್ಯಕ್ಷರು ಬಂದ ನಂತರ ಹೊಸ ತಂಡವನ್ನು ಕಟ್ಟಲೇಬೇಕಾಗುತ್ತದೆ. ಹಳೆಯ ತಂಡವನ್ನು ಮುನ್ನಡೆಸುವುದು ಹೊಸ ಅಧ್ಯಕ್ಷರಿಗೆ ಸವಾಲಿನ ಕೆಲಸ. ಹಾಗಾಗಿ ಚುನಾವಣಾ ಹೊಸ್ತಿಲಲ್ಲಿ ಹೊಸ ತಂಡ ರಚಿಸಿ ಅಖಾಡಕ್ಕಿಳಿಯುವ ದುಸ್ಸಾಹಸದ ಬದಲು ಇರುವ ತಂಡವನ್ನೇ ಬಲಿಷ್ಠಗೊಳಿಸಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಹೈಕಮಾಂಡ್ ನಾಯಕರು ನಿರ್ಧರಿಸಿದ್ದು, ಈ ಕುರಿತ ಸಂದೇಶವನ್ನೂ ರಾಜ್ಯ ಘಟಕಕ್ಕೆ ರವಾನಿಸಿದ್ದಾರೆ.
ಈಗಾಗಲೇ ಹೈಕಮಾಂಡ್‍ನಿಂದ ಕಟೀಲ್ ಅವಧಿ ವಿಸ್ತರಣೆ ಕುರಿತು ರಾಜ್ಯ ಘಟಕಕ್ಕೆ ಮಾಹಿತಿ ಬಂದಿದ್ದು, ಚುನಾವಣೆವರೆಗೂ ಮುಂದುವರೆಯಲು ಕಟೀಲ್‍ಗೆ ಸೂಚನೆ ನೀಡಲಾಗಿದೆ. ಹೈಕಮಾಂಡ್‍ನಿಂದ ಈ ಸಂದೇಶ ಬರುತ್ತಿದ್ದಂತೆ ಪಕ್ಷದ ಹಿರಿಯ ನಾಯಕ ಹಾಗು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ನಿವಾಸಕ್ಕೆ ಕಟೀಲ್ ದೌಡಾಯಿಸಿದ್ದರು. ಕಳೆದ ವಾರ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ಹೈಕಮಾಂಡ್ ಕಳುಹಿಸಿದ್ದ ಸಂದೇಶದ ಬಗ್ಗೆ ಸಮಾಲೋಚನೆ ನಡೆಸಿದ್ದರು ಎಂದು ತಿಳಿದುಬಂದಿದೆ.
ವೆಬ್ ಸೀರಿಸ್ ಒಪ್ಪಂದಕ್ಕೆ ಸಹಿ : ಐಪಿಎಸ್ ಅಧಿಕಾರಿ ಅಮಾನತು
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದ್ದವು. ಚುನಾವಣಾ ದೃಷ್ಟಿಯಿಂದ ಸಂಘ ಪರಿವಾರ ಒಪ್ಪುವ, ಖಡಕ್ ಹಿಂದುತ್ವವಾದಿಯನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ ಎನ್ನಲಾಗಿತ್ತು.
ಆದರೆ ವಿಧಾನಸಭೆ ಚುನಾವಣೆವರೆಗೂ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಹೈಕಮಾಂಡ್ ಮುಂದೂಡಿಕೆ ಮಾಡಿದ್ದು, ಚುನಾವಣೆ ನಂತರ ಹೊಸ ರಾಜ್ಯಾಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಬಹುದು. ಆದರೆ ಸದ್ಯಕ್ಕೆ ಕಟೀಲ್ ಸ್ಥಾನ ಅಭಾದಿತವಾಗಿದೆ.
Karnataka BJP, president, Nalin Kumar Kateel,