ನಾಳೆಯಿಂದ ರಾಜ್ಯದಾದ್ಯಂತ ಬೊಮ್ಮಾಯಿ, ಬಿಎಸ್ವೈ ಸಂಘಟನಾ ಪ್ರವಾಸ

Social Share

ಬೆಂಗಳೂರು,ಅ.10- ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಆಡಳಿತರೂಢಾ ಬಿಜೆಪಿ, ನಾಳೆಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಂಘಟನಾ ಪ್ರವಾಸ ನಡೆಸುವ ವಿಜಯಿ ಸಂಕಲ್ಪ ಯಾತ್ರೆಯ ಮೂಲಕ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದೆ.

ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೂಡುತ್ತಿದೆ. ಈ ನಿಟ್ಟಿನಲ್ಲಿ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ ಹಾಗೂ ಏಳು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಈ ಮೂಲಕ ಚುನಾವಣೆಗೆ ಬಿಜೆಪಿ ಸಜ್ಜುಗೊಳ್ಳುತ್ತಿದೆ.

ಚುನಾವಣಾ ದೃಷ್ಟಿಯಿಂದ ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ಒಂದು ತಂಡದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಇರಲಿದ್ದಾರೆ. 90 ಕ್ಷೇತ್ರಗಳಲ್ಲಿ ಈ ತಂಡ ಪ್ರವಾಸ ಕೈಗೊಳ್ಳಲಿದೆ. ನಾಳೆಯಿಂದ ಪ್ರವಾಸ ಆರಂಭಗೊಳ್ಳಲಿದ್ದು, ವಾರಕ್ಕೆ ಮೂರು ದಿನಗಳ ಕಾಲ ಪ್ರವಾಸ ನಡೆಯಲಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದ ಎರಡು ತಂಡಗಳು ರಾಜ್ಯ ಪ್ರವಾಸವನ್ನು ಮುಂದುವರಿಸಲಿವೆ. ಒಟ್ಟಾರೆಯಾಗಿ, ಡಿಸೆಂಬರ್ ಅಂತ್ಯದ ವೇಳೆಗೆ 165 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳಲು ಪಕ್ಷದ ನಾಯಕರು ಯೋಜಿಸಿದ್ದಾರೆ.

ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಿದ್ದು, ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಾರೆ. ಪಕ್ಷದ ಪದಾಧಿಕಾರಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ವಿಧಾನಸಭೆ ಕ್ಷೇತ್ರಗಳಿಗೆ ಭೇಟಿ ನೀಡುವುದರೊಂದಿಗೆ, ವಿವಿಧ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಹಲವು ಸಮಾವೇಶಗಳನ್ನು ನಡೆಸುತ್ತಿದೆ. ಪಕ್ಷವು ಅ.30 ರಂದು ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಮತ್ತು ನವೆಂಬರ್‍ನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಎಸ್‍ಟಿ ಸಮಾವೇಶ ಆಯೋಜಿಸಲಿದೆ.

ಡಿಸೆಂಬರ್‍ನಲ್ಲಿ ಮೈಸೂರಿನಲ್ಲಿ ಎಸ್‍ಸಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ ಮತ್ತು ಮಂಗಳೂರಿನಲ್ಲಿ ಯುವಮೋರ್ಚಾ ಸಮಾವೇಶ ನಡೆಸಲಿದೆ. ಕ್ಷೇತ್ರಗಳಲ್ಲಿ ಜಾತಿ ಪ್ರಮುಖರ ಭೇಟಿ, ಮಠ ಹಾಗೂ ಮಂದಿರಗಳ ಭೇಟಿ ಮತ್ತು ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ.

ಏಳು ಬೃಹತ್ ಸಮಾವೇಶ: ಚುನಾವಣಾ ದೃಷ್ಟಿಯಿಂದ ರಾಜ್ಯದಲ್ಲಿ ಏಳು ಕಡೆ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದೆ. ಮೈಸೂರಿನಲ್ಲಿ ಎಸ್‍ಸಿ ಸಮಾವೇಶ, ಕಲಬುರಗಿಯಲ್ಲಿ ಒಬಿಸಿ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬಳ್ಳಾರಿಯಲ್ಲಿ ಎಸ್‍ಟಿ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ ಹಾಗೂ ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.

ಚುನಾವಣೆಯಲ್ಲಿ ಟಿಕೆಟ್ ನೀಡುವ ಸಂದರ್ಭದಲ್ಲಿ ಸಮೀಕ್ಷೆಯ ವರದಿ ಹಾಗೂ ತಳಮಟ್ಟದ ವರದಿ ಆಧರಿಸಿ ಟಿಕೆಟ್ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಕ್ಷೇತ್ರ ಬದಲಾವಣೆ ಮಾಡುವಂತಹ ಯಾವುದೇ ಯೋಜನೆ ವರಿಷ್ಠರಲ್ಲಿ ಇದ್ದಂತಿಲ್ಲ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

Articles You Might Like

Share This Article