ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ‘ಯುಪಿ ಮಾಡೆಲ್’ ಮೊರೆಹೋದ ಬಿಜೆಪಿ

Social Share

ಬೆಂಗಳೂರು, ಸೆ.1- ಶತಾಯ-ಗತಾಯ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿರುವ ಆಡಳಿತರೂಢ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಬಿಜೆಪಿ ಕೇವಲ ನಿರ್ದಿಷ್ಟ ಜಾತಿಯ ಮತಗಳಿಗೆ ಸೀಮಿತವಾಗದೆ ಸಣ್ಣಪುಟ್ಟ ಸಮುದಾಯಗಳನ್ನು ಓಲೈಸಿಕೊಂಡಿತ್ತು. ಇದರ ಪರಿಣಾಮವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಿ ಮಾಡಿ ಕಮಲ ಎರಡನೇ ಬಾರಿಗೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಇದೇ ತಂತ್ರವನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ ನಡೆಸಿದ ಯಶಸ್ವಿ ಪ್ರಯೋಗವನ್ನೇ ಕರ್ನಾಟಕದಲ್ಲೂ ಅಳವಡಿಸುವ ಪ್ರಯತ್ನ ನಡೆದಿರುವುದು ಮೇಲ್ನೋಟಕ್ಕೆ ತೋರುತ್ತಿದೆ.ಇತ್ತೀಚಿನ ಕೆಲ ದಿನಗಳಿಂದ ಬಿಜೆಪಿ ಘೋಷಿಸಿರುವ ಕೆಲ ಯೋಜನೆಗಳು ಸುಳಿವು ನೀಡುತ್ತವೆ. ಹರಿದುಹಂಚಿ ಹೋಗಿರುವ ಒಬಿಸಿ ಸಮುದಾಯಗಳತ್ತ ಬಿಜೆಪಿ ಗಮನ ಹರಿಸಿದೆ.

ಬ್ರಾಹ್ಮಣ ಮತಗಳು ಬಿಜೆಪಿಗೆ ಈಗಲೂ ಗಟ್ಟಿಯೇ. ಲಿಂಗಾಯತರನ್ನು ಯಡಿಯೂರಪ್ಪ ಮೂಲಕ ಬಿಜೆಪಿ ಹೇಗಾದರೂ ಒಲಿಸಿಕೊಳ್ಳುತ್ತದೆ. ಎಡಗೈ ದಲಿತ ಸಮುದಾಯದಲ್ಲಿ ಬೇರೆ ಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಬೆಂಬಲ ಇದೆ. ಈಗ ಬಿಜೆಪಿಗೆ ಸಮಸ್ಯೆಯಾಗಿರುವುದು ಒಬಿಸಿ ಮತ್ತು ಒಕ್ಕಲಿಗರದ್ದು.

ಒಕ್ಕಲಿಗರ ಹೆಚ್ಚಿನ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಹೋಗುತ್ತವೆ. ಈ ಕೊರತೆ ನೀಗಿಸಲು ಬಿಜೆಪಿ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಆ ಪ್ರಬಲ ಸಮುದಾಯವನ್ನು ಇಡಿಯಾಗಿ ಓಲೈಸಲು ಸದ್ಯಕ್ಕೆ ಬಿಜೆಪಿಗೆ ಅಸಾಧ್ಯದ ಮಾತು. ಹೀಗಾಗಿ ಬಿಜೆಪಿಯ ಕಣ್ಣು ಒಬಿಸಿ ಮೇಲೆ ನೆಟ್ಟಿದೆ. ಕರ್ನಾಟಕದಲ್ಲಿ ಒಬಿಸಿ ಗುಂಪಿಗೆ ಅನೇಕ ಸಮುಧಾಯಗಳು ಬರುತ್ತವೆ.

ಸುಮಾರು 200 ಜಾತಿಗಳು ಒಬಿಸಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾದವು ವಾಲ್ಮೀಕಿ, ಕುರುಬ, ತಿಗಳ, ಈಡಿಗ, ಉಪ್ಪಾರ ಇತ್ಯಾದಿ ಸಮುದಾಯಗಳು. ಒಬಿಸಿ ಸಮುದಾಯಗಳು ರಾಜ್ಯದಲ್ಲಿ ಶೇ.30ಕ್ಕಿಂತ ಹೆಚ್ಚಿವೆ. ಒಕ್ಕಲಿಗ, ಲಿಂಗಾಯತ ಸಮುದಾಯಗಳಂತೆ ಒಬಿಸಿಯಲ್ಲಿ ಐಕ್ಯತೆ ಕಡಿಮೆ. ಒಬಿಸಿ ಎನ್ನುವುದು ಜಾತಿಯ ವರ್ಗೀಕರಣವಾಗಿ ಮಾತ್ರ ಉಳಿದಿದೆ. ಹೀಗಾಗಿ, ಯಾವ ಪಕ್ಷಕ್ಕೂ ಅದು ಮತ ಬ್ಯಾಂಕ್ ಆಗಿ ಪರಿಗಣಿತವಾಗಿಲ್ಲ.

ಒಬಿಸಿಯಲ್ಲಿ ಕುರುಬ ಸಮುದಾಯ ಮಾತ್ರ ರಾಜಕೀಯವಾಗಿ ನಿರ್ಧಾರಿತ ಸ್ಥಿತಿಯಲ್ಲಿದ್ದಾರೆ. ಒಕ್ಕಲಿಗರಿಗೆ ದೇವೇಗೌಡರು ಡೀಫಾಲ್ಟ್ ನಾಯಕರಾಗಿರುವಂತೆ ಕುರುಬರಿಗೆ ಸಿದ್ದರಾಮಯ್ಯರೇ ಮೇರು. ಒಬಿಸಿಯಲ್ಲಿ ಕುರುಬರ ಸಂಖ್ಯೆ ಶೇ. 8ಕ್ಕಿಂತ ಹೆಚ್ಚು ಇದೆ. ಇವರನ್ನು ಬಿಟ್ಟು ಇತರ ನೂರಕ್ಕೂ ಹೆಚ್ಚು ಒಬಿಸಿ ಸಮುದಾಯಗಳನ್ನು ಓಲೈಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ಗೆ ನಿಷ್ಠವಾಗಿಲ್ಲದ ಒಬಿಸಿ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಗಟ್ಟಿ ಮಾಡಿಕೊಳ್ಳುವುದು ಬಿಜೆಪಿಯ ಗುರಿ.

ಇದರ ಜೊತೆಗೆ ಪ್ರತೀ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಪ್ರಾದೇಶಿಕವಾರು ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದಾಗಿ ಸರಕಾರ ಹೇಳಿದೆ. ಏಮ್ಸ್ ಆಸ್ಪತ್ರೆಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿರುವುದಾಗಿ ಸಿಎಂ ಹೇಳಿದ್ದಾರೆ. ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೆ ವಿದ್ಯಾಸಿರಿ, ಕ್ರೀಡಾಪಟುಗಳಿಗೆ ಶೇ. 2 ಉದ್ಯೋಗ ಮೀಸಲಾತಿ, ಸಂಗೊಳ್ಳಿ ರಾಯಣ್ಣ ಮಿಲಿಟರಿ ಶಾಲೆ ಇತ್ಯಾದಿ ಹತ್ತು ಹಲವು ಯೋಜನೆಗಳನ್ನು ಸರಕಾರ ಹಾಕಿಕೊಂಡಿದೆ.

ನೀವು ರಾಜಕೀಯಕ್ಕೆ ಬಂದು ಸಮುದಾಯದ ಏಳಿಗೆ ಮಾಡಬೇಕೆಂದಿಲ್ಲ. ನಿಮ್ಮ ಸಮುದಾಯವನ್ನು ಬಲಪಡಿಸುವ ಜನರಿಗೆ ನೀವು ಬೆಂಬಲ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಸಮಾನ ಪಾತ್ರ ಇದೆ, ಸಮಾನ ಅವಕಾಶಗಳಿವೆ. ಸರ್ವ ಸಮುದಾಯಗಳ ಏಳ್ಗೆಗಾಗಿ ಯಾಕೆ ಪ್ರಯತ್ನಗಳಾಗಿಲ್ಲ ಎಂದು ಯೋಚಿಸುವ ಸಮಯ ಬಂದಿದೆ ಎಂದು ನಾಲ್ಕೈದು ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

Articles You Might Like

Share This Article