ಬೆಂಗಳೂರು,ಫೆ.18- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಹುನೀರಿಕ್ಷಿತ ಮೊದಲ ಹಾಗೂ 2022-23ನೇ ಸಾಲಿನ ಬಜೆಟ್‍ನ್ನು ಮಾ.8ರಂದು ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಪೂರ್ವಭಾವಿ ಸಿದ್ದತೆಗಳನ್ನು ಕೈಗೊಂಡಿರುವ ಅವರು, ಮಾ.8ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಆಯ-ವ್ಯಯವನ್ನು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಒಂದು ವಾರದಿಂದ ಜಂಟಿ ಅಧಿವೇಶನದ ನಡವೆಯೂ ಹಣಕಾಸು ಖಾತೆಯನ್ನು ಹೊಂದಿರುವ ಬೊಮ್ಮಾಯಿ ಅವರು, ಈಗಾಗಲೇ ಎಲ್ಲಾ ಇಲಾಖೆಗಳ ಬಜೆಟ್ ಪೂರ್ವ ಸಿದ್ದತೆ ಆರಂಭಿಸಿದ್ದು, ವಿವಿಧ ಸಂಘ ಸಂಸ್ಥೆಗಳ ಜೊತೆಯೂ ಬಜೆಟ್ ಪೂರ್ವ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 7 ರಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ಮಾ.8ರಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲು ಮುಂದಾಗಿರುವ ಬೊಮ್ಮಾಯಿ ಈ ಕುರಿತು ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೊತೆಗೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ನಿಯಮಗಳ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
