ಬೆಂಗಳೂರು,ಮಾ.7- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‍ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪ್ರಭಾವಕ್ಕಿಂತ ಆರ್‌ಎಸ್‌ಎಸ್ ಪ್ರಭಾವವೇ ಹೆಚ್ಚಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಟೀಕಿಸಿದರು. 2022-23ನೇ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೊಮ್ಮಾಯಿ ಅವರು ಒಳ್ಳೆಯ ಸ್ನೇಹಿತರು. ಬಜೆಟ್ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹಗೆಡೆ ಕಾಗೇರಿ ಮಾತನಾಡಿ, ಸಿಎಂ ಒಳ್ಳೆಯ ಸ್ನೇಹಿತರು ಎಂದು ಹೇಳಿ ಈಗ ಬೇಸರವಾಗಿದೆ ಎನ್ನುತ್ತೀರಿ ಎಂದಾಗ ಸಿದ್ದರಾಮಯ್ಯ ಮಾನತಾಡಿ, ಸ್ನೇಹವೇ ಬೇರೆ, ರಾಜಕೀಯವೇ ಬೇರೆ. ನೀವು ಆರ್‍ಎಸ್‍ಎಸ್ ಹಿನ್ನೆಲೆಯುಳ್ಳವರು. ನಾನು ಬೇರೆ ಹಿನ್ನೆಲೆಯವನು.
ಮನುಷ್ಯತ್ವ ಮುಖ್ಯ. ನೀವು ನನ್ನನ್ನು, ನಾನು ನಿಮ್ಮನ್ನು ಗೌರವಿಸುವುದು ಬೇರೆ. ಆದರೆ, ಇಲ್ಲಿ ರಾಜಕೀಯವಾಗಿ ಮಾತನಾಡಬೇಕಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾದಿ ಬಿಟ್ಟು ಬೇರೆ ಹಾದಿಯಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುತ್ತಾರೆ. ಅಂದುಕೊಂಡಿದ್ದೆ ಎಂದಾಗ, ಕಂದಾಯ ಸಚಿವ ಆರ್.ಅಶೋಕ್, ನಮಗಿಂತ ಹೆಚ್ಚು ಮುಖ್ಯಮಂತ್ರಿ ಬೊಮ್ಮಾಯಿ ಅವರು ಆರ್‍ಎಸ್‍ಎಸ್ ಆಗಿದ್ದಾರೆ. ಅದು ರಾಜಕೀಯ ಸಂಸ್ಥೆಯಲ್ಲ. ಸಂಸ್ಕಾರ ಕೊಡುವ ಸಂಸ್ಥೆ. ಜನತಾದಳದಿಂದ ಬಂದವರು ನೀವು ಮುಖ್ಯಮಂತ್ರಿಯಾಗಿರಲಿಲ್ಲವೇ ? ಹಾಗೆಯೇ ಬೊಮ್ಮಾಯಿ ಅವರಿಗೂ ಅವಕಾಶ ಸಿಕ್ಕಿದೆ ಎಂದರು.
ತಮಗಿಂತಲೂ ಒಂದು ಹೆಜ್ಜೆ ಮುಂದೆ ಬಿಜೆಪಿ ಪಾಲನೆ ಮಾಡುತ್ತಾರೆ ಎಂದು ಶ್ಲಾಘಿಸಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ರಾಮಲಿಂಗಾರೆಡ್ಡಿ, ಬಿಜೆಪಿ ಮೂಲದವರು 7 ಮಂದಿ ಮಾತ್ರ ಸಚಿವರಾಗಿದ್ದಾರೆ. ಉಳಿದವರೆಲ್ಲ ಬೇರೆ ಕಡೆಯಿಂದ ಬಂದವರೇ ಎಂದು ಟೀಕಿಸಿದರು.
ಇದಕ್ಕೂ ಮುನ್ನ ಸಚಿವರಾದ ಅಶೋಕ್ ಹಾಗೂ ಮುನಿರತ್ನ ಅವರನ್ನು ಉದ್ದೇಶಿಸಿ ಸಚಿವರು ಹೀಗೆ ಓಡಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಬಜೆಟ್ ಮಂಡಿಸುವಾಗ ನಾವು ಕೇಳಿದ್ದೇವೆ. ಈಗ ಬಜೆಟ್ ಮೇಲೆ ಮಾತನಾಡುವಾಗ ಓಡಾಡಿದರೆ ಹೇಗೆ ಎಂದರು. ಅಷ್ಟರಲ್ಲಿ ಅಶೋಕ್ ಅವರು, ನಾನು ನೀರು ಕುಡಿಯಲು ಹೋಗುತ್ತಿದ್ದೆ. ನೀವು ಬೇಡ ಎಂದರೆ ಕೂರುತ್ತೇನೆ ಎಂದು ವಾಪಸ್ ಬಂದು ಕುಳಿತರು.
ಆ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ನೀರು ಇಲ್ಲ, ಮತ್ತೊಂದು ಇಲ್ಲ. ನೀವು ಹೇಳಿದ ಮೇಲೆ ಅವರು ಬಂದು ಕುಳಿತಿದ್ದಾರೆ. ಎದ್ದು ಹೊರಟಿದ್ದರು. ಅಲ್ಲಿಗೆ ನೀರು ತರಿಸಿಕೊಳ್ಳಬಹುದಲ್ಲವೇ ಎಂದರು. ಆಗ ಅಶೋಕ್ ಅವರಿಗೆ ನೀರು ತಂದುಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. ಸಭಾಧ್ಯಕ್ಷರು ಅಶೋಕ್ ಅವರನ್ನು ಯಡಿಯೂರಪ್ಪ ಅವರೆ ವಾಪಸು ಕಳುಹಿಸಿದರು ಎಂದು ಸ್ವಾರಸ್ಯಕರ ಚರ್ಚೆಗೆ ತೆರೆ ಎಳೆದರು.
