ಬಿಗ್ ನ್ಯೂಸ್ : ಡಿ.5ರ ಕರ್ನಾಟಕ ಬಂದ್ ಫಿಕ್ಸ್..!

ಬೆಂಗಳೂರು,ನ.20- ಕನ್ನಡಿಗರ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿ ಕೊಡಲು ಬಿಡುವುದಿಲ್ಲ. ನಮ್ಮ ಸಾಮಥ್ರ್ಯವೇನೆಂಬುದನ್ನು ತೋರಿಸುತ್ತೇವೆ. ಡಿಸೆಂಬರ್ 5ರಂದು ಕರೆಕೊಟ್ಟಿರುವ ಅಖಂಡ ಕರ್ನಾಟಕ ಬಂದ್ ಯಶಸ್ವಿಗೊಳಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ರಾಜ್ಯದಲ್ಲಿರುವ ಸಾವಿರಾರು ಕನ್ನಡಪರ ಸಂಘಟನೆಗಳು ಬಂದ್‍ಗೆ ಬೆಂಬಲ ಘೋಷಿಸಿವೆ. ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯಬೇಕು ಎಂಬುದು ಒಕ್ಕೊರಲ ಅಭಿಪ್ರಾಯವಾಗಿದೆ.

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ, ನಿಗಮವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಡಿ.5ರಂದು ಕರೆ ಕೊಟ್ಟಿರುವ ರಾಜ್ಯ ಬಂದ್ ಯಶಸ್ವಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ನಡೆಸಿದ ಮಹತ್ವದ ಸಭೆಯಲ್ಲಿ ಬಂದ್‍ಗೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್‍ಕುಮಾರ್ ಶೆಟ್ಟಿ, ಕನ್ನಡ ಜÁಗೃತಿ ವೇದಿಕೆಯ ಮಂಜುನಾಥ್ ದೇವು, ಗಿರೀಶ್‍ಗೌಡ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ರೈತ ಸಂಘಟನೆಗಳ ನಾಯಕರು, ಸಾಹಿತಿಗಳು, ಕನ್ನಡ ಹೋರಾಟಗಾರರು, ಪ್ರಗತಿಪರರು ಇಂದಿನ ಸಭೆಯಲ್ಲಿ ಪಾಲ್ಗೊಂಡು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ನಿಗಮವನ್ನು ಕೂಡಲೇ ರದ್ದು ಮಾಡಬೇಕು. ಇಲ್ಲದಿದ್ದರೆ ಡಿ.5ರಂದು ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುತ್ತೇವೆ. ಕನ್ನಡ ವಿರೋಧಿ ಧೋರಣೆಯ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.

ಡಿ.5ರ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಗೊಳಿಸುವ ಸಂಬಂಧ ರಾಜ್ಯಾದ್ಯಂತ ಇರುವ ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ನಾಳೆಯಿಂದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ನಡೆಸುವ ಮೂಲಕ ಜಾಗೃತಿ ಮೂಡಿಸಿ ಬಂದ್ ಅನ್ನು ಯಶಸ್ವಿಗೊಳಿಸುವ ಮೂಲಕ ಕನ್ನಡಿಗರ ಸಾಮಥ್ರ್ಯ ಪ್ರದರ್ಶನ ಮಾಡುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಾಳೆ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಾಡಿದ್ದು ರಾಮನಗರದಲ್ಲಿ ಪ್ರತಿಭಟನೆ, 23ರಂದು ಬಳ್ಳಾರಿ, 24ರಂದು ಕೊಪ್ಪಳದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು.

ಬೆಳಗಾವಿ, ಹುಬ್ಬಳ್ಳಿಯಲ್ಲಿ ಕೂಡ ಸಭೆ ನಡೆಸಿ ಪ್ರತಿಭಟನೆ ಯಶಸ್ವಿಗೆ ಬೆಂಬಲ ಕೋರಲಾಗುವುದು. ರಾಜ್ಯದಾದ್ಯಂತ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ರೈತ ಸಂಘಟನೆ, ಲಾರಿ ಮಾಲೀಕರ ಸಂಘ, ಆಟೋ ಚಾಲಕರ ಸಂಘದವರು ಸೇರಿದಂತೆ ನೂರಾರು ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಈಗಾಗಲಾದರು ಸರ್ಕಾರ ತಮ್ಮ ಕ್ರಮದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.

ತಮಿಳರನ್ನು ಓಲೈಕೆ ಮಾಡಲು ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಮಾಡಿ, ಚುನಾವಣೆಗಾಗಿ ಮರಾಠಿಗರನ್ನು ಓಲೈಕೆ ಮಾಡಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ವಿರೋಧಿ ಧೋರಣೆ ಅನುಸರಿಸಿದ್ದಾರೆ. ತೆಲುಗು, ಮಲಯಾಳಿ, ಗುಜರಾತಿ ಹಾಗೂ ಎಲ್ಲಾ ಜನಾಂಗದವರಿಗೂ ನಿಗಮಗಳನ್ನು ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡಿಗರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗುತ್ತೇವೆ ಎಂಬ ಆತಂಕ ಎದುರಾಗಿದೆ ಎಂದರು.

ನವೆಂಬರ್ 30ರವರೆಗೂ ನಾವು ಕಾಯುತ್ತೇವೆ. ಒಂದು ವೇಳೆ ಮುಖ್ಯಮಂತ್ರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಡಿಸೆಂಬರ್ 1ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ. ಗಡಿ ಬಂದ್ ಮಾಡುತ್ತೇವೆ. ಡಿಸೆಂಬರ್ 5ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೆ ಬಂದ್ ಆಚರಿಸಲಾಗುತ್ತದೆ ಎಂದು ಹೇಳಿದರು.

ಈ ಹೋರಾಟದ ಸಾರಥ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ವಹಿಸಬೇಕಿತ್ತು. ಆದರೆ ಅದು ನಿಷ್ಕ್ರಿಯವಾಗಿದೆ. ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ನಡೆಸಿ ಹೋಳಿಗೆ ತಿನ್ನುವುದಕ್ಕಷ್ಟೇ ಸೀಮಿತವಾಗಿದೆ ಎಂದು ಕಿಡಿಕಾರಿದರು. ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ ಈ ವರ್ಷ ಕನ್ನಡ ಕಾಯಕ ವರ್ಷಾಚರಣೆ ಮಾಡುವುದಾಗಿ ಘೋಷಿಸಿದ್ದರು. ಕನ್ನಡದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಆದರೆ ಈಗ ಮರಾಠ ಅಭಿವೃದ್ಧಿ ನಿಗಮವನ್ನು ಜಾರಿಗೆ ತಂದಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ಅನುದಾನ ನೀಡಿದರೆ, ಮರಾಠ ಅಭಿವೃದ್ಧಿ ನಿಗಮಕ್ಕೆ 50ಕೋಟಿ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಕಿಡಿಗೇಡಿಗಳು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಪವಾರ್ ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು ಎಂದು ಉದ್ಧಟತನದ ಹೇಳಿಕೆ ನೀಡುತ್ತಾರೆ.

ಗಡಿ ವಿವಾದ ಸುಪ್ರೀಂಕೋರ್ಟ್‍ನಲ್ಲಿದ್ದರೂ ಇಂತಹ ಹೇಳಿಕೆಗಳನ್ನು ನೀಡಿ ಕನ್ನಡಿಗರನ್ನು ಕೆರಳಿಸುವ ಮರಾಠಿಗರಿಗೆ ಅಭಿವೃದ್ಧಿ ನಿಗಮ ಮಾಡಿದರೆ ಮತ್ತಷ್ಟು ಪರಿಸ್ಥಿತಿ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬೆಳಗಾವಿ, ಬಸವಕಲ್ಯಾಣ ಉಪ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮರಾಠ ಅಭಿವೃದ್ಧಿ ನಿಗಮ ಮಾಡಲಾಗಿದೆ. ರಾಜಕೀಯ ಕಾರಣಕ್ಕಾಗಿ ಕನ್ನಡದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇದಕ್ಕೆ ಎಲ್ಲರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಕನ್ನಡದ ಪರ ಹೋರಾಟ ಮಾಡಿದರೆ ಮುಖ್ಯಮಂತ್ರಿಗಳು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ. ಆದರೆ ಈವರೆಗೆ ಯಾವೊಬ್ಬ ಮುಖ್ಯಮಂತ್ರಿಯೂ ಇಂತಹ ಹೇಳಿಕೆ ನೀಡಿಲ್ಲ. ಪ್ರತಿಭಟನೆ ಶಾಂತಿಯುತವಾಗಿರಲಿ ಎಂದಷ್ಟೇ ಹೇಳುತ್ತಿದ್ದರು. ರಾಜ್ಯೋತ್ಸವದಂದು ಮರಾಠಿಗರು ಕರಾಳ ದಿನಾಚರಣೆ ಆಚರಿಸಿದ್ದಾರೆ. ಅವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದರು.

ಗೋಕಾಕ್ ಚಳವಳಿಯ ನೆನಪಿನಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ನಮ್ಮನ್ನು ಸನ್ಮಾನಿಸಿದ್ದರು. ಈಗ ಮರಾಠ ಅಭಿವೃದ್ಧಿ ನಿಗಮ ರಚನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದ ಅವರು ನಮಗೆ ಯಾವುದೇ ಅಧಿಕಾರದ ಆಸೆಯಿಲ್ಲ. ನಾಡಿನ ಹಿತರಕ್ಷಣೆಗಾಗಿ ನಾವು ಹೋರಾಟಕ್ಕೆ ಸದಾ ಸಿದ್ದ. ನೀವು ಬೇಕಾದರೆ ಜೈಲಿಗೆ ಹಾಕಿ ಎಂದು ಸವಾಲೆಸೆದರು.

ಮುಖ್ಯಮಂತ್ರಿಗಳು, ಸಾಹಿತಿ, ಚಿಂತಕರು ಯಾರೊಬ್ಬರ ಅಭಿಪ್ರಾಯವನ್ನು ಕೇಳದೆ ಕೇವಲ ಒಂದು ಚುನಾವಣೆ ಗೆಲುವಿಗೆ ಇಂತಹ ನಿರ್ಧಾರ ಕೈಗೊಂಡಿರುವುದು ಕನ್ನಡ ವಿರೋಧಿತನ ಎಂದು ಹೇಳಿದರು. ನಮ್ಮಲ್ಲಿ ಯಾವುದೇ ಒಡಕಿಲ್ಲ. ನಾರಾಯಣ ಗೌಡರು, ಜಯಕರ್ನಾಟಕ ಸಂಘಟನೆ ಎಲ್ಲರೂ ಬಂದ್ ಬೆಂಬಲಿಸಿದ್ದಾರೆ. ಕನ್ನಡಿಗರು ಸ್ವಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ ಮರಾಠ ಅಭಿವೃದ್ಧಿ ನಿಗಮವನ್ನು ಕೇಳಿದವರು ಯಾರು? ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ಕೇಳಿದರೆ 2 ಕೋಟಿ ಕೊಡುವ ಸರ್ಕಾರ ಮರಾಠರ ಅಭಿವೃದ್ಧಿಗೆ 50 ಕೋಟಿ ನೀಡಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಕತೆ ಏನಾಯಿತು ಎಂಬುದು ಗೊತ್ತಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕ ಬಂದ್‍ಗೆ ಬೆಂಬಲ ನೀಡುವುದಾಗಿ ರೈತ ಸಂಘದ ಮುಖಂಡರು ತಿಳಿಸಿದರು.