ಬೆಂಗಳೂರು,ಜು.26- ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಹಾಗೂ ಕರ್ತವ್ಯದ ಅವಧಿಯಲ್ಲಿ ಕಾರ್ಯ ನಿಷ್ಠೆ ತೋರಲು ಈಗಾಗಲೇ ಸಾಕಷ್ಟು ಸುತ್ತೋಲೆಗಳಲ್ಲಿ ಸೂಚನೆ ನೀಡಿದ್ದರೂ, ಸರ್ಕಾರಿ ನೌಕರರು/ಅಧಿಕಾರಿಗಳಲ್ಲಿ ಸಮಯ ಪ್ರಜ್ಞಾ ಮತ್ತು ಕಾರ್ಯ ನಿಷ್ಠೆಯ ಕೊರತೆ ಎದ್ದು ಕಾಣುತ್ತಿದೆ.
ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರುವಂತೆ ಸೂಚಿಸಲಾಗಿದ್ದು, ಅನೇಕ ಮಂದಿ ಕಚೇರಿಗೆ ತಡವಾಗಿ ಬರುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಇದು ಕೆಲಸದಲ್ಲಿನ ಬದ್ದತೆ ಕೊರತೆ ತೋರಿಸುತ್ತದೆ. ನೌಕರರು ಬೆಳಗ್ಗೆ 10 ಗಂಟೆಗೂ ಮುನ್ನ ಕಚೇರಿಗೆ ಬರಬೇಕು, ಕಚೇರಿ ಅವಧಿ ಮುಗಿಯುವವರೆಗೂ ತಮ್ಮ ಕುರ್ಚಿಗಳಲ್ಲಿ ಕುಳಿತಿರಬೇಕು. ಅನುಮತಿ ಪಡೆದ ನಂತರವೇ ಅವರು ಹೊರಹೋಗಬಹುದೆಂದು ಆದೇಶದಲ್ಲಿ ಹೇಳಲಾಗಿದೆ.
ಒಂದು ವೇಳೆ ನೌಕರರು ತಡವಾಗಿ ಬಂದರೆ ಅಥವಾ ಕಚೇರಿ ವೇಳೆಯಲ್ಲಿ ತಮ್ಮ ಕುರ್ಚಿಯಲ್ಲಿ ಕುಳಿತಿರದಿದ್ದರೆ, ಉನ್ನತ ಅಧಿಕಾರಿಗಳು ಕಾರಣಗಳೊಂದಿಗೆ ತಿಳಿಸಬೇಕು. ಅಂತಹ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಂದಿತಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಆದೇಶ ಪತ್ರಸಾರ್ವಜನಿಕರು ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಯಲ್ಲಿ ತಮ್ಮ ಕಾರ್ಯಗಳಿಗೆ ಬೆಳಗ್ಗೆ ನಿಗದಿತ ಅವಧಿಯಲ್ಲಿ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡಿದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ ಕಚೇರಿಗೆ ಹಾಜರಾಗಿಲ್ಲದೇ ಇರುವ ಕಾರಣ ಸಾಮಾನ್ಯ ಜನರು ಬವಣೆ ಪಡುವಂತಾಗಿದೆ.
ನಿಗದಿತ ಕಾಲಾವಗಿಂತ ವಿಳಂಬವಾಗಿ ಹಾಜರಾಗುವ ಹಾಗೂ ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದಲ್ಲಿ ನಮೂದಿಸಿ, ಮೇಲಧಿಕಾರಿಗಳ ಅನುಮತಿ ಪಡೆದಿಲ್ಲದ ನೌಕರರು, ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತು ಕ್ರಮ ಜರುಗಿಸತಕ್ಕದ್ದು ಎಂದು ಮುಖ್ಯ ಕಾರ್ಯದರ್ಶಿ ಅವರು ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.