ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ, ಕಳವಳಕ್ಕೀಡಾದ ಮೂಲ ಕಾಂಗ್ರೆಸ್ಸಿಗರು

Social Share

ಬೆಂಗಳೂರು, ನ.10- ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ಈ ಬಾರಿ ಡಿಸೆಂಬರ್ ವೇಳೆಗೆ ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಲಿದೆ ಎಂಬ ಮಾಹಿತಿಯ ನಡುವೆ ಟಿಕೆಟ್ ಹಂಚಿಕೆ ವಿಷಯದಲ್ಲಿನ ಗೊಂದಲ ಪಕ್ಷದ ಮೂಲ ನಿವಾಸಿಗಳನ್ನು ಕಳವಳಕ್ಕೀಡು ಮಾಡಿದೆ.

ಆಡಳಿತಾರೂಢ ಬಿಜೆಪಿಯಲ್ಲಿ ಟಿಕೆಟ್ ಸಿಗದವರು ಮೊದಲ ಆದ್ಯತೆಯಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಗೆದ್ದು ಅಧಿಕಾರ ಹಿಡಿಯುವುದೇ ಮುಖ್ಯವಾಗಿದ್ದು, ಗೆಲ್ಲುವ ನಾಯಕರು ವಲಸೆ ಬಂದರೆ ಕಾಂಗ್ರೆಸ್‍ನ ಮೂಲ ನಿವಾಸಿಗಳಿಗೆ ಅನ್ಯಾಯವಾದರೂ ಲೆಕ್ಕಿಸದೆ ಟಿಕೆಟ್ ನೀಡಲು ಸಿದ್ಧರಾಗಿದ್ದಾರೆ.

ಇದು 2023ರ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಲ್ಲಿ ಅನಿಶ್ಚಿತತೆಯನ್ನು ಹುಟ್ಟು ಹಾಕಿದೆ. ಪಕ್ಷದ ನಿಷ್ಠಾವಂತರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿಗೆ, ಡಿ.ಕೆ.ಶಿವಕುಮಾರ್ ಕೆಪಿಸಿಸಿಗೆ ಅಧ್ಯಕ್ಷರಾಗಿರುವ ಹೊರತಾಗಿಯೂ ಮೂಲ ನಿವಾಸಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಲು ವಿಫಲರಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಎಂದಿನಂತೆ ಗೊಂದಲ, ಕಳವಳಗಳು ಮುಂದುವರೆದಿವೆ.

ಟಿಕೆಟ್ ಆಕಾಂಕ್ಷಿ ಎಂದರೆ ಅದು ಸಾಮಾನ್ಯವಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ರ್ಪಧಿಸಬೇಕು ಎಂದರೆ ಸಾಕಷ್ಟನ್ನು ಕಳೆದುಕೊಳ್ಳಬೇಕಾಗುತ್ತದೆ. ಸ್ಥಳೀಯ ನಾಯಕರು ಆಕಾಂಕ್ಷಿಯನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ. ಸಾಕಷ್ಟು ಹಣ, ಸಮಯ, ಶ್ರಮ ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೇಲ್ಲಾ ಕಳೆದುಕೊಂಡವರಿಗೆ ಟಿಕೆಟ್ ಸಿಗದೆ ಕೊನೆ ಕ್ಷಣದಲ್ಲಿ ಬದಲಾವಣೆಯಾದರೆ ಪಕ್ಷ ನಿಷ್ಠೆಯ ಮೇಲಿನ ವಿಶ್ವಾಸವೇ ಕಳೆದು ಹೋಗಿ ಬಿಡುತ್ತದೆ.

ನಾಳೆ ಬೆಂಗಳೂರಲ್ಲಿ ಮೋದಿ ಮೇನಿಯಾ, ಇಲ್ಲಿದೆ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್

ಕಾಂಗ್ರೆಸ್‍ಗೆ ಸಿದ್ಧಾಂತಗಳು ಮುಖ್ಯ. ಅದಕ್ಕಾಗಿ ಪಕ್ಷಕ್ಕೆ ಬರುವವರು ಬರಲಿ, ಅಧಿಕಾರಕ್ಕಾಗಿ ಬರುವವರಿಗೆ ಮಣೆ ಹಾಕುವುದು ಬೇಡ ಎಂದು ಎಲ್ಲಾ ನಾಯಕರು ವೇದಿಕೆಯ ಭಾಷಣದಲ್ಲಿ ಹೇಳುತ್ತಲೇ ಇರುತ್ತಾರೆ. ಆದರೆ, ಅದು ಪಾಲನೆಯಾಗುವುದಿಲ್ಲ. ಕಾಂಗ್ರೆಸ್ ಸಿದ್ಧಾಂತಗಳನ್ನು ಹಳಸಲು ಎಂದು ಬಿಜೆಪಿ ಪರಿಣಾಮಕಾರಿಯಾಗಿ ಬಿಂಬಿಸಿದೆ.

ಅದಕ್ಕಾಗಿಯೇ ಕಳೆದ 2019ರಲ್ಲಿ ಜೆಡಿಎಸ್‍ನ ಮೂವರು, ಕಾಂಗ್ರೆಸ್‍ನ 14 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದ ಹಿಂದೆ ಹೋದರು. ಆ ವೇಳೆ ಸಿದ್ಧಾಂತಗಳು, ನೈತಿಕತೆ ಎಲ್ಲವೂ ಒಣ ಭಾಷಣಗಳಾದವು. ಅದೇ ಬಿಜೆಪಿಯಿಂದ ಒಬ್ಬನೇ ಒಬ್ಬ ಶಾಸಕನನ್ನು ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಸೆಳೆಯಲಾಗಲಿಲ್ಲ.

ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಸೈದ್ಧಾಂತಿಕ ರಾಜಕಾರಣದ ಮೇಲಿನ ನಂಬಿಕೆ. ಈಗಲೂ ಬಿಜೆಪಿಯಲ್ಲಿ ಅವಕಾಶ ವಂಚಿತರು ಬೇಸರವಾದರೂ ತೋರಿಸಿಕೊಳ್ಳದೆ ಪಕ್ಷದಲ್ಲೇ ಉಳಿಯುತ್ತಾರೆ. ಆದರೆ ಕಾಂಗ್ರೆಸ್‍ನಲ್ಲಿ ಬಂಡಾಯದ ಬಾವುಟ ಹಿಡಿದು ಹಾದಿ ಬೀದಿ ರಂಪ ಮಾಡುತ್ತಾರೆ. ಪಕ್ಷಕ್ಕೆ ಸೈದ್ಧಾಂತಿಕ ತಳಹದಿ ಬಲಿಷ್ಠವಾಗಿದ್ದರೆ ಅತಂಹ ಗಲಾಟೆಗಳು ನಡೆಯುತ್ತಿರಲಿಲ್ಲ. ಇದು ವಾಸ್ತವ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-11-2022)

ಇಷ್ಟು ಸೊರಗಿದ ಮೇಲಾದರೂ ಪಕ್ಷದ ನಾಯಕರು ಪಕ್ಷದ ಸಿದ್ಧಾಂತವನ್ನೇ ಆದ್ಯತೆಯನ್ನಾಗಿ ಮಾಡಿಕೊಂಡು ಕಾರ್ಯಕರ್ತರಿಗೆ ಅವಕಾಶಗಳನ್ನು ಮಾಡಿಕೊಡುವ ಮನಸ್ಸು ಮಾಡಬೇಕಿತ್ತು. ಆದರೆ ನಾಯಕರಲ್ಲಿಯೇ ಸೈದ್ಧಾಂತಿಕ ನಿಲುವಿನ ಮೇಲೆ ಅಚಲ ವಿಶ್ವಾಸವಿಲ್ಲದಿದ್ದರಿಂದ ಗೆಲುವ ಮತ್ತು ಅಧಿಕಾರ ಹಿಡಿಯುವುದೇ ಪ್ರಮುಖವಾಗಿದೆ. ಅದಕ್ಕಾಗಿ ಕೊನೆ ಕ್ಷಣದಲ್ಲಿ ಹೊರಗಿನಿಂದ ಬಂದವರು ಗೆಲ್ಲುವ ಅಭ್ಯರ್ಥಿಗಳಾಗಿದ್ದರೆ ಅವರಿಗೆ ಮಣೆ ಹಾಕುತ್ತಾರೆ ಎಂಬ ವದಂತಿಗಳು ಹರಡುತ್ತಿವೆ.

ಇದಕ್ಕೆ ಜೊತೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೋದ ಕಡೆಯಲೆಲ್ಲಾ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವ ಆಶ್ವಾಸನೆ ನೀಡುತ್ತಾ ಬರುತ್ತಿದ್ದಾರೆ. ಇದರಿಂದಾಗಿ ಪ್ರತಿ ಕ್ಷೇತ್ರದಲ್ಲೂ ಮೂರರಿಂದ ನಾಲ್ಕು ಮಂದಿ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಕೆಲವೆಡೆ ಏಳೆಂಟು ಅಭ್ಯರ್ಥಿಗಳು ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರು ಸ್ರ್ಪಧಿಸಲಿದ್ದಾರೆ ಎಂಬ ಖಚಿತತೆ ಇಲ್ಲದಿದ್ದರಿಂದ ಪಕ್ಷ ಸಂಘಟನೆಯೂ ಸೊರಗುತ್ತಿದೆ.

ಪಕ್ಷ ಕೇಡರ್ ಬೇಸ್ ಆಗಿ ಸಂಪೂರ್ಣ ಪರಿವರ್ತನೆಯಾಗದಿರುವುದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಂದಿನ ಚುನಾವಣೆಯ ಅಭ್ಯರ್ಥಿಯ ಖರ್ಚು ವೆಚ್ಚದಲ್ಲೇ ಸಂಘಟನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಹಾಲಿ ಶಾಸಕರನ್ನು ಹೊರತು ಪಡಿಸಿ, ಉಳಿದ ಕಡೆ ಅಭ್ಯರ್ಥಿಗಳು ಆಯ್ಕೆ ಗೊಳ್ಳದ ಕಡೆ ಯಾರು ಖರ್ಚು ಮಾಡಬೇಕು ಎಂಬ ಗೊಂದಲದಿಂದಾಗಿ ಸದಸ್ಯತ್ವ ಅಭಿಯಾನವೇ ಸರಿಯಾಗಿ ನಡೆದಿಲ್ಲ. ಬೂತ್ ಸಮಿತಿಗಳ ರಚನೆಯಾಗಿಲ್ಲ.

ಚುನಾವಣೆ ಸಮೀಪಿಸುತ್ತಿದ್ದರೂ ಕಾಂಗ್ರೆಸ್ ಇನ್ನೂ ಅದ್ಧೂರಿ ಸಮಾವೇಶಗಳು, ಭಾರೀ ಜನಜಾತ್ರೆಗಳಲ್ಲೇ ಕಾಲ ಕಳೆಯುತ್ತಿದೆ. ಯುದ್ಧ ಕಾಲದಲ್ಲಿ ಈ ಸಮಾವೇಶಗಳ್ಯಾವು ಮತ ತಂದುಕೊಡಲು ಕಾರ್ಯಸಾಧುವಲ್ಲ ಎಂಬ ಸತ್ಯವನ್ನು ಪ್ರಭಾವಿ ನಾಯಕರು ಉದ್ದೇಶ ಪೂರ್ವಕವಾಗಿಯೇ ಮರೆಯುತ್ತಿದ್ದಾರೆ. ತಮ್ಮ ನಾಯಕತ್ವದ ಆಡಂಬರ, ಒಡ್ಡೊಲಗಗಳ ವೈಭವೀಕರಣಲ್ಲೇ ಮುಳುಗಿದ್ದಾರೆ.

ಬಿಜೆಪಿ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಬೂತ್ ಪದಾಧಿಕಾರಿಗಳ ಸಮಾವೇಶ ಕರೆದರೆ ಒಂದು ಸಾವಿರಕ್ಕೂ ಹೆಚ್ಚು ಅಸಲಿ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಅದೇ ಕಾಂಗ್ರೆಸ್ ಪಕ್ಷದ ಸಭೆ ಕರೆದರೆ ಅಸಲಿ ಪದಾಧಿಕಾರಿಗಳ ಸಂಖ್ಯೆಗಿಂತ ಹಿಂಬಾಲಕರ ಪ್ರಮಾಣವೇ ಹೆಚ್ಚಾಗಿರಲಿದೆ. ಇಂತಹ ಗೊಂದಲಗಳ ನಡುವೆಯೂ ಪಕ್ಷದ ತಳಪಾಯ ಬಲ ಪಡಿಸುವ ಕೆಲಸಗಳಾಗುತ್ತಿಲ್ಲ. ತಮ್ಮ ಎಂದಿನ ಶೈಲಿಯ ಸಂಘಟನಾ ಸ್ವರೂಪದಲ್ಲೇ ಕೈ ಪಡೆ ಮುನ್ನೆಡೆಯುತ್ತಿದೆ.

ಕನಿಷ್ಠ 150 ಕ್ಷೇತ್ರಗಳಲ್ಲಿ ನಿರ್ದಿಷ್ಠವಾದ ಅಭ್ಯರ್ಥಿಗಳನ್ನು ಗುರುತಿಸಿ ಸ್ಪಷ್ಟ ಜವಾಬ್ದಾರಿ ನೀಡದೆ ಇದ್ದರೆ ಕಳೆದ ವಿಧಾನಸಭೆ ಚುನಾವಣೆಯಂತೆ ಈ ಬಾರಿಯೂ ಪಕ್ಷ ಮುಗ್ಗರಿಸಬೇಕಾಗುತ್ತದೆ ಎಂಬುದು ಹಿರಿಯ ನಾಯಕರ ಚಡಪಡಿಕೆಯಾಗಿದೆ.

Articles You Might Like

Share This Article