ಬೆಂಗಳೂರು, ಆ.15- ಸ್ವಾತಂತ್ರ್ಯ ಮಹೋತ್ಸವದ 76ನೇ ವರ್ಷಾಚರಣೆಯ ಅಂಗವಾಗಿ ಕಾಂಗ್ರೆಸ್ ನಗರದಲ್ಲಿಂದು ಬೃಹತ್ ಸ್ವತಂತ್ರ್ಯ ನಡಿಗೆಯನ್ನು ಆಯೋಜಿಸಿತ್ತು. ಮಧ್ಯಾಹ್ನ 2 ಗಂಟೆಯಿಂದ ಮೆಜೆಸ್ಟಿಕ್‍ನ ಸಂಗೋಳ್ಳಿ ರಾಯಣ್ಣ ಪ್ರತಿಮೆಯಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ಏಳುವರೆ ಕಿಲೋ ಮೀಟರ್ ದೂರ ಪಾದಯಾತ್ರೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಭಾಗವಹಿಸಿದ್ದರು.
ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಆಯೋಜಿಸಲಾಗಿದ್ದರು, ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಲಾಗಿತ್ತು. ಅದರ ಪ್ರಯುಕ್ತ ಲಕ್ಷಾಂತರ ಮಂದಿ ರ್ಯಾಲಿಯಲ್ಲಿ ಹೆಜ್ಜೆ ಹಾಕಿದರು.
ಆನ್‍ಲೈನ್‍ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದರು. ಬೆಳಗಾವಿ, ಚಾಮರಾಜನಗರ, ಕೋಲಾರ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ದಿಕ್ಕುಗಳಿಂದಲೂ ಪಾದಯಾತ್ರೆಯಲ್ಲಿ ಜನ ಭಾಗವಹಿಸಿದ್ದರು. ಖಾಸಗಿ ವಾಹನಗಳಲ್ಲಿ ಬೆಂಗಳೂರಿಗೆ ಆಗಮಿಸಿದವರು ಅಲ್ಲಲ್ಲೆ ಇಳಿದು ಮೇಟ್ರೋ ಮೂಲಕ ಮೆಜೆಸ್ಟಿಕ್‍ಗೆ ಬರಲು ಮೇಟ್ರೋ ವ್ಯವಸ್ಥೆ ಮಾಡಲಾಗಿತ್ತು.
ಪಾದಯಾತ್ರೆ ಬಳಿಕ ವಾಪಾಸ್ ಹೋಗಲು ಉಚಿತ ಮೇಟ್ರೋ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದವರಿಗೆ ಕ್ಯಾಪ್, ಟಿ-ಶರ್ಟ್ ನೀಡಲಾಗಿದೆ. ಹಾದಿಯುದ್ಧಕ್ಕೂ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಕಾಂಗ್ರೆಸ್‍ನ ಎಲ್ಲಾ ನಾಯಕರು ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರೊಂದಿಗೆ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಫ್ಲೆಕ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು.
ಕಾಂಗ್ರೆಸ್‍ನ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.