ದೆಹಲಿ ಅಂಗಳ ತಲುಪುತ್ತಿರುವ ಕಾಂಗ್ರೆಸ್‍ನ ಒಳ ಬೇಗುದಿಗಳು

Social Share

ಬೆಂಗಳೂರು,ಫೆ.4- ಕಾಂಗ್ರೆಸ್‍ನಲ್ಲಿ ಅಸಮಧಾನ, ಅತೃಪ್ತಿಗಳು ರಾಜ್ಯ ನಾಯಕರ ಕೈ ಮೀರಿ ಹೋಗಿದ್ದು, ದೆಹಲಿಯ ಹೈಕಮಾಂಡ್ ಅಂಗಳಕ್ಕೆ ತಲುಪುತ್ತಿವೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಪಕ್ಷದ ಒಳ ವಲಯದಲ್ಲಿನ ಅಸಮಧಾನಗಳು ಭಾರೀ ಪರಿಣಾಮ ಉಂಟು ಮಾಡುತ್ತಿದ್ದು, ಹಲವು ಸಮೀಕ್ಷೆಗಳಲ್ಲಿ ದೊರೆತ ಸಕಾರಾತ್ಮಕ ಫಲಿತಾಂಶದ ಉಮ್ಮಸ್ಸಿನ ಬಲೂನಿಗೆ ಮುಳ್ಳು ಚುಚ್ಚಿದಂತಾಗಿದೆ. ಕಾಂಗ್ರೆಸ್ ಗೆದ್ದೆ ಬಿಡಲಿದೆ, ತಾವು ಮುಖ್ಯಮಂತ್ರಿಯಾಗಿಯೇ ಬಿಡುವುದಾಗಿ ಉಬ್ಬಿ ಹೋಗಿದ್ದ ಪ್ರಮುಖರಿಗೆ ಪ್ರಭಾವಿಗಳ ಮುನಿಸು ಬಿಸಿ ತುಪ್ಪವಾಗಿದೆ.

ಬಿನ್ನರಾಗ ಹಾಡುತ್ತಿರುವ ಎಲ್ಲಾ ನಾಯಕರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟ ಪ್ರಭಾವಿಗಳಾಗಿದ್ದು, ಹೈಕಮಾಂಡ್ ಮಟ್ಟದಲ್ಲೂ ಆಪ್ತ ನಂಟು ಹೊಂದಿದವರಾಗಿದ್ದಾರೆ. ಹೀಗಾಗಿ ಚುನಾವಣೆಯ ಭರವಸೆಗಳು ಮತ್ತು ಅಭ್ಯರ್ಥಿಗಳ ಆಯ್ಕೆ ಘೋಷಣೆಯಲ್ಲಿ ಏಕಚಕ್ರಾಪತ್ಯ ಪ್ರದರ್ಶಿಸಲು ಮುಂದಾಗಿದ್ದ ಪ್ರಮುಖರಿಗೆ ಮಗ್ಗಲು ಮುಳ್ಳಿನ ಯಾತನೆ ಆರಂಭವಾಗಿದೆ.

ಕಾಂಗ್ರೆಸ್‍ನಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಸೇರಿದಂತೆ ಅನೇಕರು ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಅಸಮಧಾನ ಹೊಂದಿದ್ದಾರೆ.

ಇವರಲ್ಲಿ ಬಹುತೇಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು ವಿಶೇಷ. ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸದೇ ಇದ್ದರೂ ಅವರ ಬೆಂಬಲಿಗರು ಸೃಷ್ಟಿಸಿರುವ ಹಲ್‍ಚಲ್ ಸಾಕಷ್ಟು ಪರಿಣಾಮ ಬೀರಿದೆ.

ಮಗುವಿನ ನಿರೀಕ್ಷೆಯಲ್ಲಿರುವ ದೇಶಿಯ ತೃತೀಯಲಿಂಗಿ ದಂಪತಿಗಳು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರಂಭಿಸಲಾದ ಜಂಟಿ ರಥಯಾತ್ರೆ ರಾಜ್ಯದ 18 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸಂಚರಿಸಿ, ನಿನ್ನೆಯಿಂದ ಎರಡನೇ ಹಂತದಲ್ಲಿ ಪ್ರತ್ಯೇಕ ತಂಡಗಳಾಗಿ ಪ್ರವಾಸ ಆರಂಭಿಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾತ್ರ ತಂಡಗಳು ರಚನೆಯಾಗಿವೆ. ಇದು ಪಕ್ಷದ ಬಹಳಷ್ಟು ಹಿರಿಯ ನಾಯಕರಲ್ಲಿ ಅಸವಧಾನವನ್ನು ಸೃಷ್ಟಿಸಿದೆ.

ಪರಮೇಶ್ವರ್ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದು, 2013ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. 2018ರಲ್ಲಿನ ವಿಧಾನಸಭೆ ಚುನಾವಣೆ ಬಳಿಕ ರಚನೆಯಾದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಎರಡು ಮೂರು ಭಾರಿ ಮುಖ್ಯಮಂತ್ರಿ ಸ್ಥಾನ ವಂಚಿತರಾಗಿರುವ ಪರಮೇಶ್ವರ್ ಮುಂದಿನ ದಿನಗಳಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

ಎಂ.ಬಿ.ಪಾಟೀಲ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ತಮ್ಮನ್ನು ತಾವು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡಿದ್ದರು. ಇತ್ತೀಚೆಗೆ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರೂ ಕೂಡ. ಈಗ ಅವರು ಸಿದ್ದರಾಮಯ್ಯ ಅವರ ತಂಡದಲ್ಲಿ ಒಬ್ಬ ಸದಸ್ಯರಾಗಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರೂ ಎಂ.ಬಿ.ಪಾಟೀಲ್‍ಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಬಿ.ಕೆ.ಹರಿಪ್ರಸಾದ್ ತಾವು ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರೂ ಬೇರೆಯವರ ನಾಯಕತ್ವದಲ್ಲಿನ ತಂಡದಲ್ಲಿ ಹತ್ತರಲ್ಲಿ ಒಬ್ಬ ಸದಸ್ಯನಾಗಿರಬೇಕೆ ಎಂದು ಅಸಮಧಾನಗೊಂಡಿದ್ದರು. ಅದಕ್ಕಾಗಿ ನಿನ್ನೆ ಹರಿಪ್ರಸಾದ್ ನೇತೃತ್ವದಲ್ಲೇ ಪ್ರತ್ಯೇಕ ತಂಡ ರಚನೆ ಮಾಡಿ ಕರಾವಳಿ ಧ್ವನಿ ಎಂಬ ಯಾತ್ರೆ ಘೋಷಿಸಲಾಗಿದೆ.

ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‍ನಿಂದ ಒಂದು ಹೆಜ್ಜೆ ಹೊರಗಿಟ್ಟವರಂತೆಯೇ ವರ್ತಿಸುತ್ತಿದ್ದಾರೆ. ರಮೇಶ್ ಕುಮಾರ್, ಮಾಜಿ ಶಾಸಕ ಕೊತ್ತನೂರು ಮಂಜು ಹಾಗೂ ಮತ್ತಿತರರು ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಸಿದರು ಎಂಬ ಅಸಮಧಾನದಿಂದ ಕುದಿಯುತ್ತಿರುವ ಮುನಿಯಪ್ಪ.

ಇತ್ತೀಚೆಗೆ ಕೋಲಾರ ಜಿಲ್ಲಾ ರಾಜಕಾರಣದಲ್ಲಿ ತಮ್ಮ ವಿರೋಧಿ ಬಣಕ್ಕೆ ಸಿದ್ದರಾಮಯ್ಯ ಹೆಚ್ಚು ಬೆಂಬಲ ನೀಡುತ್ತಿದ್ದಾರೆ ಎಂಬ ಅಸಮಧಾನ ಹೊಂದಿದ್ದಾರೆ. ಅವರನ್ನು ಪದೇ ಪದೇ ಸಮಾಧಾನ ಪಡಿಸಿ ಜಿಲ್ಲೆಗೆ ಕರೆದುಕೊಂಡು ಹೋಗಲಾಗುತ್ತಿದೆ.

ಮತ್ತೊಂದೆಡೆ ಎಂ.ಆರ್.ಸೀತಾರಾಮನ್ ಹಲವು ದಿನಗಳಿಂದಲೂ ಕಾಂಗ್ರೆಸ್ ವಿಷಯದಲ್ಲಿ ಅತೃಪ್ತಿ ಹೊಂದಿದ್ದಾರೆ. ಬೆಂಬಲಿಗರ ಸಭೆ ನಡೆಸಿ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದರು. ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಘೋಷಣೆ ಮಾಡಿದ ಬಳಿಕ ಅವರನ್ನು ಆ ಜಿಲ್ಲೆಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೂ ಅವರು ಒಳಗೊಳಗೊಳಗೆ ಅಸಂತೋಷ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ

ಇನ್ನೂ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ, ಎಸ್.ಆರ್.ಪಾಟೀಲ್ ಸೇರಿದಂತೆ ಅನೇಕರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಅಸಮಧಾನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲಿ ಪರಮೇಶ್ವರ್ , ಮುನಿಯಪ್ಪ ಸೇರಿ ಕೆಲ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್‍ಗೂ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Karnataka, Congress, high command, assembly election,

Articles You Might Like

Share This Article