ವೇದಿಕೆ ಬಿಟ್ಟಿಳಿಯದ ನಾಯಕರು, ತಳಮಟ್ಟದಲ್ಲಿ ಸೊರಗುತ್ತಿರುವ ಕಾಂಗ್ರೆಸ್

Social Share

ಬೆಂಗಳೂರು,ಜ.3- ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ 100 ದಿನಗಳಿಗಿಂತ ಕಡಿಮೆ ಅವಧಿಯಿದೆ. ಆಡಳಿತಾರೂಢ ಬಿಜೆಪಿ ಸಂಘಟನೆ ಮತ್ತು ಪಕ್ಷ ಬಲವರ್ಧನೆಯಲ್ಲಿ ದಾಪುಗಾಲಿಟ್ಟಿದ್ದರೆ, ಕಾಂಗ್ರೆಸ್ ಈವರೆಗೂ ವೇದಿಕೆಯ ಕಾರ್ಯಕ್ರಮಗಳನ್ನು ಬಿಟ್ಟು ಕೆಳಗಿಳಿದೇ ಇಲ್ಲ.

ಮುಖಂಡರ ಪ್ರಭಾವಳಿಯನ್ನು ನೋಡಿಯೇ ಜನ ಮತ ಹಾಕಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತಾರೆ ಎಂಬ ಭ್ರಮೆಯಿಂದ ಪಕ್ಷದ ನಾಯಕರು ಹೊರ ಬಂದಿಲ್ಲ. 130 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಡೆ ತಳಮಟ್ಟದಲ್ಲಿ ದುರ್ಬಲಗೊಳ್ಳುತ್ತಲೇ ಇದೆ. ಕಾರ್ಯಕರ್ತರು ಭ್ರಮ ನಿರಸನಗೊಂಡು ಸಂಘಟನಾತ್ಮಕ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದರೂ ನಾಯಕರು ಮಾತ್ರ ಮುಂದಿನ ಬಾರಿ 150 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಕಾಲದೂಡುತ್ತಿದ್ದಾರೆ.

ಈ ಬಾರಿ ಹಿಂದೆಂದಿಗಿಂತಲೂ ಕಠಿಣ ಸವಾಲುಗಳು ಕಾಂಗ್ರೆಸ್ ಮುಂದಿವೆ. ಈ ಮೊದಲು ಜನತಾದಳ ಒಟ್ಟಾಗಿದ್ದಾಗ ರಾಜ್ಯದಲ್ಲಿ ಈ ಮಟ್ಟಿನ ದುರ್ಬಲತೆಯನ್ನು ಕೈ ಪಡೆ ಅನುಭವಿಸಿತ್ತು. ಅದರ ಹೊರತಾಗಿ ಉಳಿದೆಲ್ಲಾ ಚುನಾವಣೆಗಳಲ್ಲೂ ಪಕ್ಷದ ಮತಗಳಿಕೆಯ ಪ್ರಮಾಣ ಶೇ.35ಕ್ಕಿಂತಲೂ ಹೆಚ್ಚಿನದಾಗಿಯೇ ಇತ್ತು. ಆದರೆ ಇತ್ತೀಚೆ ದಿನಗಳಲ್ಲಿ ತಳಮಟ್ಟದಲ್ಲಿ ಪಕ್ಷ ಕುಸಿಯುತ್ತಿರುವದಷ್ಟೇ ಅಲ್ಲ, ಮತಗಳಿಕೆಯಲ್ಲೂ ಹಿನ್ನೆಡೆ ಅನುಭವಿಸಿದೆ.

ಶ್ರೀ ಸಿದ್ದೇಶ್ವರರ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಬಿಜೆಪಿ ಕೇಂದ್ರ ಮತ್ತು ರಾಜ್ಯ ಎರಡು ಕಡೆಯೂ ಅಕಾರದಲ್ಲಿ ಇರುವುದರಿಂದ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಿದೆ. ಚುನಾವಣೆ ಕಾಲಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಚುನಾವಣಾ ರಣತಂತ್ರಗಾರ ಹಾಗೂ ಗೃಹ ಸಚಿವ ಅಮಿತ್ ಶಾ ನಿರಂತರ ನಿರಂತರ ಪ್ರವಾಸ ಕೈಗೊಳ್ಳಲಾರಂಭಿಸುತ್ತಾರೆ.

ಬಿಜೆಪಿ ಅಷ್ಟನ್ನೇ ನಂಬಿಕೊಂಡು ಕುಳಿತಿಲ್ಲ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾರಂಭಿಸಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಭೂತ್ ಮಟ್ಟದ ಸಮಾವೇಶಗಳನ್ನು ನಡೆಸಿ, ರಾಜ್ಯಮಟ್ಟದಲ್ಲೂ ಬೂತ್ ಮಟ್ಟದ ಎರಡು ಮೂರು ಸಮಾವೇಶಗಳನ್ನು ಆಯೋಜನೆ ಮಾಡಿದೆ. ಆ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆ ಉತ್ಸಾಹದಿಂದಲೇ ಪಕ್ಷದ ಶಕ್ತಿ ಏನು ಎಂಬ ಸ್ಪಷ್ಟತೆ ಸಿಗುತ್ತದೆ. ಇತ್ತ ಕಾಂಗ್ರೆಸ್ ಕೂಡ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದೆ. ಆದರೆ ಅವು ನಾಯಕರ ವೈಭವೀಕರಣಕ್ಕೆ ಮಾತ್ರ ಸೀಮಿತವಾಗಿವೆ.

ಈಡೇರದ ಅಧ್ಯಕ್ಷರ ಆಶಯ:
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ವೇಳೆ ಕಾಂಗ್ರೆಸ್ ಪಕ್ಷವನ್ನು ಕೇಡರ್‍ಬೇಸ್ ಪಾರ್ಟಿಯನ್ನಾಗಿ ಪರಿವರ್ತನೆ ಮಾಡುವುದಾಗಿ ಘೋಷಿಸಿದರು. ಬೂತ್‍ಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದೇ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

ಇನ್ನೂ ಮುಂದೆ ವೇದಿಕೆ ಕಾರ್ಯಕ್ರಮಗಳಲ್ಲಿ ನಾಯಕರ ಸಾಲು ಸಾಲು ಕುರ್ಚಿಗಳು ಇರುವುದಿಲ್ಲ. ಒಂದು ಪೋಡಿಯಮ್ ಮಾತ್ರ ಇರಲಿದೆ. ಭಾಷಣ ಮಾಡುವ ನಾಯಕರು ಅಲ್ಲಿ ಹೋಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಉಳಿದಂತೆ ಎಷ್ಟೇ ಪ್ರಭಾವಿ ನಾಯಕರಿದ್ದರೂ ವೇದಿಕೆಯ ಮುಂದಿನ ಸಾಲಿನಲ್ಲಿ ಕಾರ್ಯಕರ್ತರ ಜೊತೆ ಕುಳಿತಿರಬೇಕು ಎಂದು ಘೋಷಿಸಿದರು. ಒಂದಷ್ಟು ಕಾರ್ಯಕ್ರಮಗಳನ್ನು ಅದೇ ರೀತಿ ಆಯೋಜಿಸಿದ್ದರು ಕೂಡ.

ತಮ್ಮ ವೈಯಕ್ತಿಕ ವರ್ಚಸ್ಸು ಎಂದರೆ ಅದು ಪಕ್ಷದ ಬಂಡವಾಳ ಎಂದು ನಂಬಿಕೊಂಡ ಕೆಲವು ನಾಯಕರಿಗೆ ಇದು ಪಥ್ಯವಾಗಲಿಲ್ಲ. ತಮ್ಮ ಬೆಂಬಲಿಗರೊಡಗೂಡಿ ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ವ್ಯಕ್ತಿಗತ ವೈಭವೀಕರಣಕ್ಕೆ ಆದ್ಯತೆ ನೀಡಿದರು. ಪರಿಣಾಮ ಕೆಪಿಸಿಸಿ ಪಕ್ಷದ ಕಾರ್ಯಕ್ರಮಗಳು ಸೋರಗಲಾರಂಭಿಸಿದವು. ಡಿ.ಕೆ.ಶಿವಕುಮಾರ್ ಅವರ ಪ್ರಯೋಗ ಹೆಚ್ಚು ದಿನ ನಡೆಯಲಿಲ್ಲ. ಮತ್ತೆ ವೇದಿಕೆ ಜಗ್ಗುವಷ್ಟು ತೂಕದ ನಾಯಕರು ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಇನ್ನೂ ಕೇಡರ್ ಬೇಸ್ ಆಧಾರಿತವಾಗಿ ಪಕ್ಷ ಸಂಘಟನೆ ಕಟ್ಟುವ ಉದ್ದೇಶವಂತೂ ಕುಟುಂತಾ ಸಾಗುತ್ತಿದೆ. ಕಾರ್ಯಕರ್ತರಿಗಿಂತ ಮುಖಂಡರೇ ಹೆಚ್ಚು ತುಂಬಿರುವ ಕಾಂಗ್ರೆಸ್‍ನಲ್ಲಿ ಸಾಮಾನ್ಯ ಕಾರ್ಯಕರ್ತನ ಮಾತುಗಳು ನಗಣ್ಯ ಎಂಬುದು ಎಲ್ಲರಿಗೂ ತಿಳಿದ ಸತ್ಯ.

ಗೊಂದಲಕಾರಿಯಾದ ಪ್ರಕ್ರಿಯೆ:
ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಇತ್ತೀಚೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಜಿ ಆಹ್ವಾನಿಸಿದಾಗ ಸಾಮಾನ್ಯ ಕ್ಷೇತ್ರಗಳಿಗೆ 2 ಲಕ್ಷ ಮತ್ತು ಮೀಸಲು ಕ್ಷೇತ್ರಗಳಿಗೆ ತಲಾ ಒಂದು ಲಕ್ಷ ರೂಪಾಯಿ ಠೇವಣಿಯೊಂದಿಗೆ ಅರ್ಜಿಯನ್ನು ವಾಪಾಸ್ ಪಡೆಯಲಾಗಿದೆ. ಹಣದ ಜೊತೆ ಅರ್ಜಿ ಹಾಕಿದವರು. ಟಿಕೆಟ್‍ಗಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಪಕ್ಷ ಸಂಘಟನೆಯನ್ನು ಮರೆತು ನಾಯಕರ ಹಿಂದೆ ಮುಂದೆ ಸುತ್ತುತ್ತಾ ಟಿಕೆಟ್ ಗಿಟ್ಟಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ.

ಈ ನಡುವೆ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಚರ್ಚೆ ನಡೆಸಿ ಪ್ರತಿ ಕ್ಷೇತ್ರಕ್ಕೆ ಮೂವರು ಪ್ರಬಲ ಅಭ್ಯರ್ಥಿಗಳ ಹೆಸರನ್ನು ಜನವರಿ ಒಂದರೊಳಗೆ ಶಿಫಾರಸ್ಸು ಮಾಡುವಂತೆ ಅಧ್ಯಕ್ಷರು ಸೂಚನೆ ನೀಡಿದ್ದರು. ಆದರೆ ಈವರೆಗೂ ಬಹುತೇಕ ಶಿಫಾರಸ್ಸುಗಳು ಪಕ್ಷಕ್ಕೆ ಸಲ್ಲಿಕೆಯಾಗಿಲ್ಲ. ಸಮಯ ವಿಸ್ತರಣೆ ಅನಿವಾರ್ಯವಾಗಿದೆ.

ಒಂದೆಡೆ ಠೇವಣಿಯೊಂದಿಗೆ ಅರ್ಜಿ ಸ್ವೀಕರಿಸಲಾಗಿದೆ, ಮತ್ತೊಂದೆಡೆ ಬ್ಲಾಕ್ ಮಟ್ಟದಲ್ಲಿ ಶಿಫಾರಸ್ಸುಗಳನ್ನು ಪಡೆಯಲಾಗುತ್ತಿದೆ. ಕಾರ್ಯಕರ್ತರನ್ನು ಕೇಳಿ ಟಿಕೆಟ್ ಕೊಡುವುದಾಗಿದ್ದರೆ ಅರ್ಜಿಯೊಂದಿಗೆ ಠೇವಣಿ ಸಂಗ್ರಹಿಸಿದ್ದೇಕೆ ಎಂದು ಆಕಾಂಕ್ಷಿಗಳು ಪ್ರಶ್ನಿಸುತ್ತಿದ್ದಾರೆ. ಮೊದಲೇ ಕ್ಷೇತ್ರ ಮಟ್ಟದಲ್ಲಿ ಸಮಾಲೋಚನೆ ನಡೆಸಿ ವರದಿ ಪಡೆದು ಬಳಿಕ ಪ್ರಬಲ ಆಕಾಂಕ್ಷಿಗಳಿಂದ ಅರ್ಜಿ ಪಡೆಯಬಹುದಿಲ್ಲವೇ ಎಂಬ ಅಸಮಧಾನವೂ ವ್ಯಕ್ತವಾಗುತ್ತಿದೆ.

ಮಹಿಳೆಯರಿಗೆ ದೆಹಲಿ ಸುರಕ್ಷಿತವಲ್ಲ ಎಂಬ ಮತ್ತೊಮ್ಮೆ ಸಾಬೀತು

ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದ ಅರ್ಜಿದಾರರು ಅನ್ಯ ಪಕ್ಷಗಳತ್ತ ಮುಖ ಮಾಡಿ ಕಾಂಗ್ರೆಸ್‍ಗೆ ಠಕ್ಕರ್ ಕೊಡಲು ತಯಾರಿ ನಡೆಸಿದ್ದಾರೆ. ಇದು ಚುನಾವಣೆ ಕಾಲಕ್ಕೆ ಪಕ್ಷಕ್ಕೆ ಭಾರೀ ಹಾನಿ ಮಾಡಲಿದೆ.

ಈ ನಡುವೆ ಈಗಾಗಲೇ ಪಕ್ಷದಲ್ಲಿ ನಿಷ್ಠರಾಗಿ ಕೆಲಸ ಮಾಡುತ್ತಿರುವವರನ್ನು ಪರಿಗಣಿಸದೇ ರಾಜ್ಯದ ನಾಯಕರು, ಗೆಲ್ಲುವ ಕುದುರೆಗಳು ಎಂಬ ಕಾರಣಕ್ಕೆ ಅನ್ಯಪಕ್ಷದ ನಾಯಕರನ್ನು ಕಾಂಗ್ರೆಸ್‍ಗೆ ಕರೆ ತರುತ್ತಿದ್ದಾರೆ. ಇದು ಸಹಜವಾಗಿ ಪಕ್ಷ ನಿಷ್ಠರಲ್ಲಿ ಅಸಹನೆ ಮೂಡಿಸಿದೆ.

ಮನೆ ಮನ ತಲುಪದ ಕಾಂಗ್ರೆಸ್:
ಪ್ರಮುಖವಾಗಿ ಕಾಂಗ್ರೆಸ್ ಮನೆ ಮನೆಗೆ ಮತ್ತು ಮನ ಮನಕ್ಕೆ ತಲುಪುವ ಯೋಜನೆಗಳನ್ನು ಹೊಂದಿಲ್ಲ. ಬದಲಾಗಿ ಸಾವಿರಾರು ಜನರನ್ನು ಸಮಾವೇಶಗೊಳಿಸುವ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆಯೇ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಅದಕ್ಕಾಗಿ ಸಾಲು ಸಾಲು ಕಾರ್ಯಕ್ರಮಗಳು, ರ್ಯಾಲಿಗಳನ್ನು ಆಯೋಜಿಸುತ್ತಿದೆ. ಅಲ್ಲಿ ಪ್ರಭಾವಿ ನಾಯಕರು ವೇದಿಕೆಯ ಮೇಲೆ ನಿಂತು ಗಂಟೆಗಟ್ಟಲೇ ಭಾಷಣ ಮಾಡಿದರೆ ಜನ ಪ್ರಭಾವಿತರಾಗಿ ಕಾಂಗ್ರೆಸ್‍ಗೆ ಮತ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ.

ಕಾರ್ಯಕ್ರಮಕ್ಕೆ ಬಂದ ಜನ ಮಾರನೇ ದಿನ ಏನು ನಡೆಯಿತು ಎಂಬುದನ್ನು ಮರೆತು ಹೋಗುವ ಪರಿಸ್ಥಿತಿಯಲ್ಲಿ ಇನ್ನೂ ಹಳೆಯ ಕಾರ್ಯತಂತ್ರಕ್ಕೆ ಕಾಂಗ್ರೆಸ್ ಜೋತು ಬಿದಿರುವುದು ಬಾಲಿಷವಾಗಿದೆ.

ಇಂದಿನಿಂದ ಮತ್ತೆ ಆರಂಭವಾದ ಭಾರತ್ ಜೋಡೋ ಯಾತ್ರೆ

ಚುನಾವಣೆ ದಿನ ಮತಗಟ್ಟೆ ಬಳಿ ಸಹಾಯಪೀಠಕ್ಕಾಗಿ ಟೆಬಲ್ ಹಾಕಲು ಜನರಿಲ್ಲದಷ್ಟು ಕಾಂಗ್ರೆಸ್ ಕೆಲವು ಕಡೆ ದುರ್ಬಲವಾಗಿದೆ. ಬಿಜೆಪಿ ಪ್ರತಿ ಮತಗಟ್ಟೆ 20ಕ್ಕಿಂತ ಹೆಚ್ಚಿನ ಕಾರ್ಯಕರ್ತರನ್ನು ನೇಮಿಸಿ ಸಂಘಟನೆ ಚುರುಕುಗೊಳಿಸಿದರೆ, ಕಾಂಗ್ರೆಸ್ ಶೇ.60ರಷ್ಟು ಬೂತ್‍ಗಳಲ್ಲಿ ಪೂರ್ಣ ಪ್ರಮಾಣದ ಸಮಿತಿಗಳನ್ನೇ ಹೊಂದಿಲ್ಲ. ಎಲ್ಲರೂ ನಾಯಕರೇ ಎಂಬ ದೋರಣೆಯಿಂದಾಗಿ ಪಕ್ಷ ಸೊರಗಲಾರಂಭಿಸಿದೆ ಎಂಬ ಹಳಹಳಿಕೆ ಕಾರ್ಯಕರ್ತರದ್ದಾಗಿದೆ.

Articles You Might Like

Share This Article