ರಾಜ್ಯದ 10 ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ಹೆಚ್ಚಳ

Social Share

ಬೆಂಗಳೂರು,ಜ.11- ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದ 10 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದರಿಂದ ಈ ಜಿಲ್ಲೆಗಳನ್ನು ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಲಾಗಿದೆ. ಬೆಂಗಳೂರು, ಮಂಡ್ಯ, ಕೊಡಗು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಮೈಸೂರು, ಉಡುಪಿ ಹಾಗೂ ಹಾಸನವನ್ನು ಡೇಂಜರ್ ಜಿಲ್ಲೆಗಳೆಂದು ಪರಿಗಣಿಸಲಾಗಿದೆ.
ಪಾಸಿಟಿವಿಟಿ ದರ ಶೇ.5ರ ಗಡಿ ದಾಟಿದರೆ ಅಪಾಯ ಎಂಬುದು ತಜ್ಞರ ಅಭಿಮತ. ಇದರಂತೆ ರಾಜಧಾನಿ ಬೆಂಗಳೂರು ಪಾಸಿಟಿವಿಟಿ
ದರ ಶೇ.12.79 ರಷ್ಟಿದ್ದು ಪ್ರಥಮ ಸ್ಥಾನದಲ್ಲಿದೆ. ಮಂಡ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.12.56ರಷ್ಟಿದ್ದು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಕೊಡಗು-ಶೇ.8.24, ಬೆಳಗಾವಿ-ಶೇ.8.23, ಬೆಂಗಳೂರು ಗ್ರಾಮಾಂತರ -ಶೆ.8.19, ರಾಮನಗರ-ಶೆ.7.69, ಶಿವಮೊಗ್ಗ-ಶೇ.7.46, ಮೈಸೂರು-ಶೆ.6.72 ಉಡುಪಿ-ಶೇ.5.55 ಹಾಗೂ ಹಾಸನ-ಶೆ.6.44 ರಷ್ಟು ಪಾಸಿಟಿವಿಟಿ ದರ ಹೊಂದಿವೆ.
ರಾಜಧಾನಿಯಲ್ಲಿ ಗಲ್ಲಿ ಗಲ್ಲಿಗೂ ವ್ಯಾಪಿಸಿದ ಕೊರೊನಾ: ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೆ ಇರುವುದರಿಂದ ಮಹಾಮಾರಿ ಗಲ್ಲಿ ಗಲ್ಲಿಗಳಿಗೂ ವ್ಯಾಪಿಸಿರುವ ಆತಂಕ ಎದುರಾಗಿದೆ. ಇಂದು ಒಂದೇ ದಿನದಲ್ಲಿ 10,800 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಸಮುದಾಯಕ್ಕೆ ಸೋಂಕು ಹರಡಿರುವ ಸಾಧ್ಯತೆಗಳಿವೆ.
ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಕಂಟೈನ್‍ಮೆಂಟ್ ಜೋನ್‍ಗಳ ಸಂಖ್ಯೆ 412ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಅತಿ ಹೆಚ್ಚಿನ ಕಂಟೈನ್‍ಮೆಂಟ್‍ಗಳಿರುವುದರಿಂದ ಈ ಎರಡು ಜೋನ್‍ಗಳು ಡೇಂಜರ್ ಜೋನ್‍ಗಳಾಗಿ ಪರಿವರ್ತನೆಗೊಂಡಿವೆ.
ಮಹದೇವಪುರದಲ್ಲಿ 143, ಬೊಮ್ಮನಹಳ್ಳಿಯಲ್ಲಿ ಬರೊಬ್ಬರಿ 100 ಕಂಟೈನ್‍ಮೆಂಟ್ ಜೋನ್‍ಗಳನ್ನು ರಚನೆ ಮಾಡಲಾಗಿದೆ. ಉಳಿದಂತೆ ದಕ್ಷಿಣ ವಲಯ-49, ಪಶ್ಚಿಮ-44, ಪೂರ್ವ-33, ಯಲಹಂಕ-33, ದಾಸರಹಳ್ಳಿ-6 ಹಾಗೂ ಆರ್.ಆರ್.ನಗರದಲ್ಲಿ 4 ಕಂಟೈನ್‍ಮೆಂಟ್ ಜೋನ್‍ಗಳಿವೆ.
ದಿನೇ ದಿನೇ ನಗರದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 49 ಸಾವಿರಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ನಿನ್ನೆ ಇಬ್ಬರು ಬಲಿಯಾಗಿರುವುದರಿಂದ ಕೊರೊನಾ ಮಹಾಮಾರಿ ಮತ್ತೆ ಅಟ್ಟಹಾಸ ಮೆರೆಯುವ ಸಾಧ್ಯತೆಗಳಿವೆ ಎಂದು ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಿಗೂ ಸೋಂಕು: ನಿನ್ನೆ ಪತ್ತೆಯಾದ ಸೋಂಕಿತರ ಪೈಕಿ 9 ವರ್ಷದೊಳಗಿನ 74 ಮಕ್ಕಳಿದ್ದರೆ, 10 ರಿಂದ 19 ವರ್ಷದೊಳಗಿನ 90, 20 ರಿಂದ 29 ವರ್ಷದೊಳಗಿನ 878, 30 ರಿಂದ 39 ವರ್ಷದೊಳಗಿನ 2390, 40 ರಿಂದ 49 ವರ್ಷದೊಳಗಿನ 1465, 50ರಿಂದ 59 ವರ್ಷದೊಳಗಿನ 972, 60 ರಿಂದ 69 ವರ್ಷದೊಳಗಿನ 609 ಹಾಗೂ 70 ವರ್ಷ ಮೇಲ್ಪಟ್ಟ 392 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.

Articles You Might Like

Share This Article