ವಿಧಾನಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ

Social Share

ಬೆಂಗಳೂರು, ಫೆ.18- ವಿವಾದಿತ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಅಹೋರಾತ್ರಿ ಧರಣಿ ನಡೆಸಿರುವ ಕಾಂಗ್ರೆಸ್ ಸದಸ್ಯರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದ್ದರಿಂದ ವಿಧಾನಪರಿಷತ್ ಕಲಾಪ ಅಸ್ತವ್ಯಸ್ತಗೊಂಡಿದ್ದಲ್ಲದೆ, ಯಾವುದೇ ಚರ್ಚೆಗಳು ನಡೆಯದೆ ಸೋಮವಾರಕ್ಕೆ ಮುಂದೂಡಲ್ಪಟ್ಟಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ತಮಗೆ ಜೀವ ಬೆದರಿಕೆ ಇದೆ, ಬಿಜೆಪಿ ನಾಯಕರು ತಮ್ಮ ಶಾಸಕರಿಗೆ ಹರಿಪ್ರಸಾದ್ ವಿರುದ್ಧ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ. ಇದರಿಂದ ತಮಗೆ ಜೀವ ಬೆದರಿಕೆ ಇದೆ. ಆ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂತಾಪ ಸೂಚನೆ ಬಳಿಕ ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಭರವಸೆ ನೀಡಿದರು. ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಮತ್ತೆ ಧರಣಿಗೆ ಮುಂದಾದರು.
ಈಶ್ವರಪ್ಪ ಅವರ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ರಾಷ್ಟ್ರಧ್ವಜದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಪಟ್ಟು ಹಿಡಿದರು.
ಈ ಹಂತದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರು ಹಿಜಾಬ್ ಧರಿಸಿದರೆ ಅತ್ಯಾಚಾರ ಕಡಿಮೆಯಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಮೊದಲು ಅವರನ್ನು ವಜಾ ಮಾಡಿ. ಅವರನ್ನು ಬಂಧಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಡೆದುಕೊಂಡ ರೀತಿಯನ್ನು ಬಿಜೆಪಿ ಸದಸ್ಯರು ಪ್ರಶ್ನಿಸಿ ಕ್ಕಾರ ಕೂಗಿದಾಗ ಕಾಂಗ್ರೆಸ್‍ನ ಸಲೀಂ ಅಹಮ್ಮದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಹೆಸರು ಪ್ರಸ್ತಾಪಿಸಿ ಧಿಕ್ಕಾರ ಕೂಗಿದರು.
ಈ ಸನ್ನಿವೇಶದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ಗಲಾಟೆ, ಗದ್ದಲಗಳು ಜೋರಾದವು.
ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಲ್ಲದೆ ಹಿಂದೂ ವಿರೋಧಿ ಕಾಂಗ್ರೆಸ್‍ಗೆ ಧಿಕ್ಕಾರ ಎಂದರು. ಕಾಂಗ್ರೆಸ್ ಸದಸ್ಯರು ಬಿಜೆಪಿ ಸರ್ಕಾರ ಹಾಗೂ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ರಣರಂಗವಾಯಿತು.
ಪರಿಸ್ಥಿತಿ ಹತೋಟಿಗೆ ಬರಲಿಲ್ಲ. ಈ ನಡುವೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಮತ್ತೆ ಗಲಾಟೆ ಶುರುವಾಯಿತು.
ಆಡಳಿತ ಪಕ್ಷದ ಸದಸ್ಯರೂ ಕೂಡ ಏರಿದ ಧ್ವನಿಯಲ್ಲಿ ವಾಗ್ವಾದಕ್ಕಿಳಿದಾಗ ಸಭಾಪತಿ ಅವರು ಅಸಮಾಧಾನ ವ್ಯಕ್ತಪಡಿಸಿ, ಆಡಳಿತ ಪಕ್ಷದವರೇ ಈ ರೀತಿ ನಡೆದುಕೊಂಡರೆ ಸದನ ನಡೆಸುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ದೇಶದ ಉನ್ನತ ಹುದ್ದೆಯಲ್ಲಿರುವವರು. ಅವರ ಬಗ್ಗೆ ಅನಗತ್ಯವಾಗಿ ಮಾತನಾಡಬಾರದು ಎಂದು ಕಾಂಗ್ರೆಸ್ ಸದಸ್ಯರನ್ನೂ ಕೂಡ ಸಭಾಪತಿ ಅವರು ಗದರಿದರು.
ಈ ನಡುವೆ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ ಜೋರಾಯಿತು. ಇದರಿಂದಾಗಿ ಸಭಾಪತಿ ಹೊರಟ್ಟಿ 10 ನಿಮಿಷ ಕಲಾಪವನ್ನು ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಅವರು ಪ್ರಧಾನಿಯವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಸದನದಲ್ಲಿ ಕ್ಕಾರ ಕೂಗುವುದು ಸರಿಯಲ್ಲ. ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡ ಸಲೀಂ ಅಹಮ್ಮದ್ ಅವರನ್ನು ಸದನದಿಂದ ಹೊರ ಹಾಕಿ ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ಸದಸ್ಯರು ಡಿ.ಕೆ.ಶಿವಕುಮಾರ್ ಅವರ ಹೆಸರು ತೆಗೆದುಕೊಳ್ಳದೇ ಇದ್ದರೆ ನಾವು ಪ್ರಧಾನಿ ಅವರ ಹೆಸರು ಬಳಕೆ ಮಾಡುತ್ತಿರಲಿಲ್ಲ. ವಿವಾದ ಶುರು ಮಾಡಿದ್ದೇ ಬಿಜೆಪಿಯವರು. ನಮ್ಮ ಆಗ್ರಹ ಏನಿದ್ದರೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿ ರಾಷ್ಟ್ರದ್ರೋಹ ಮಾಡಿರುವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದಷ್ಟೇ.ಸಚಿವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಕಾಶ್‍ರಾಥೋಡ್, ಸಲೀಂ ಅಹಮ್ಮದ್ ಮತ್ತಿತರ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಈ ಹಂತದಲ್ಲಿ ಎದ್ದು ನಿಂತ ಸಭಾಪತಿಯವರು ಸುಗಮ ಕಲಾಪ ನಡೆಯಬೇಕು. ಜನಪರ ಸಮಸ್ಯೆ ಚರ್ಚೆಯಾಗಬೇಕು ಎಂಬ ಒತ್ತಾಸೆಯಿಂದ ತಾವು ಸಾಕಷ್ಟು ಪ್ರಯತ್ನ ಮಾಡಿದರೂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ತಮ್ಮ ಹಠ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಲ್ಲದೆ, ಪ್ರಶ್ನೋತ್ತರ ಚುಕ್ಕೆ ಗುರುತಿನ ಪ್ರಶ್ನೆಗಳನ್ನು, ಉತ್ತರವನ್ನು ಸದನದಲ್ಲಿ ಮಂಡಿಸುವುದಾಗಿ ಹೇಳಿದರು.
ಸದನದಲ್ಲಿ ಇಲ್ಲದೇ ಇರುವ ಸದಸ್ಯರ ಹೆಸರುಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ಅದು ಆಡಳಿತ ಅಥವಾ ಪ್ರತಿಪಕ್ಷವಾಗಲಿ, ಹಾಗಾಗಿ ಸದನದಲ್ಲಿ ಇಲ್ಲದವರ ಹೆಸರು ಪ್ರಸ್ತಾಪಿಸುವ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕುವುದಾಗಿ ರೂಲಿಂಗ್ ನೀಡಿದರು.
ಈ ನಡುವೆ ಸಭಾಪತಿಯವರ ಮನವಿ ಮೇರೆಗೆ ಧರಣಿ ಹಿಂಪಡೆದು ಸ್ವ ಸ್ಥಾನಕ್ಕೆ ಮರಳಿದ ಕಾಂಗ್ರೆಸ್ ಸದಸ್ಯರು, ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ನಾವು ಪ್ರತಿಭಟನೆ ಕೈ ಬಿಡುತ್ತೇವೆ. ಇಲ್ಲವಾದರೆ ಮತ್ತೆ ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ಹೇಳಿದರು.
ಈ ಹಂತದಲ್ಲಿ ಸರ್ಕಾರದ ವತಿಯಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗದೇ ಇದ್ದುದ್ದರಿಂದ ಕಾಂಗ್ರೆಸ್ ಸದಸ್ಯರು ಮತ್ತೆ ಭಿತ್ತಿ ಪತ್ರ ಹಿಡಿದು ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಮತ್ತೆ ಧರಣಿ ಆರಂಭಿಸಿದರು. ಮತ್ತೆ ಗಲಾಟೆ, ಗದ್ದಲ ಹೆಚ್ಚಾದಾಗ ಅಸಮಾಧಾನ ತೋಡಿಕೊಂಡು ಸಭಾಪತಿಯವರು ಬಹಳ ನೋವಿನಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡುತ್ತಿರುವುದಾಗಿ ಹೇಳಿದರು.

Articles You Might Like

Share This Article