ಮೈಸೂರು,ಸೆ.3- ಕೋವಿಡ್ ಕುರಿತಂತೆ ವಿಚಾರಣೆ ನಡೆಸಿ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯನ್ನು ಇದೇ ಗುರುವಾರ ನಡೆ ಯುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ ನಿವಾಸದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನಿನ್ನೂ ವರದಿಯನ್ನು ನೋಡಿಲ್ಲ. ಗುರುವಾರದ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸುತ್ತೇವೆ. ಏನು ಶಿಫಾರಸ್ಸು ಮಾಡಿದ್ದಾರೆ ಎಂದು ನೋಡಿ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ವರದಿಯ ಬಗ್ಗೆ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿರುವುದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿಯವರು ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು. ನಾನೇ ಇನ್ನೂ ವರದಿ ನೋಡಿಲ್ಲ ಎಂದು ತಿಳಿಸಿದರು.
ಸುಧಾಕರ್ ಚಡಪಡಿಸುತ್ತಿರುವುದೇಕೆ?, ಸುಧಾಕರ್ ವರದಿ ನೋಡಿದ್ದಾರೆಯೇ?, ತಪ್ಪು ಮಾಡಿರುವ ಮನೋಭಾವದಿಂದಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸುಳ್ಳು ವರದಿ ಪಡೆದಿದ್ದೇವೆ ಎಂದು ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ?, ಸುಧಾಕರ್ ಮನಸ್ಥಿತಿ ಅರ್ಥವಾಗುತ್ತಿದೆ. ತಪ್ಪು ಮಾಡಿರುವ ಪಾಪಪ್ರಜ್ಞೆ ಕಾಡುತ್ತಿರಬಹುದು. ವರದಿ ಬಹಿರಂಗಗೊಂಡು ಅದರಲ್ಲಿನ ಮಾಹಿತಿಗಳು ತಿಳಿಯದ ಹೊರತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಈ ಹಿಂದೆ ನಾವು ಸಾಕಷ್ಟು ಆರೋಪಗಳನ್ನು ಮಾಡಿದ್ದೇವೆ. ಆದರೆ ವಿಚಾರಣಾ ಆಯೋಗದ ವರದಿ ಬಂದಿರುವುದರಿಂದ ಖಚಿತ ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದಿಲ್ಲ. ಗುರುವಾರ ಸಚಿವ ಸಂಪುಟದ ಬಳಿಕ ಸೂಕ್ತ ಮಾಹಿತಿ ನೀಡಲಾಗುತ್ತದೆ ಎಂದರು.
ಮುಡಾ ಪ್ರಕರಣದಲ್ಲಿ ನಿವೇಶನ ಹಂಚಿಕೆಯ ಅವ್ಯವಹಾರಗಳ ಕುರಿತು ವಿಚಾರಣೆಗೆ ನ್ಯಾಯಮೂರ್ತಿಯವರ ಆಯೋಗ ರಚನೆ ಮಾಡಲಾಗಿದೆ. ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರನ್ನು ನಾನು ಅಮಾನತು ಮಾಡಿಲ್ಲ. ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿರಬಹುದು. ಮತ್ತೊಬ್ಬ ಆಯುಕ್ತರಾಗಿದ್ದ ನಟೇಶ್ ಅವರ ಮೇಲೆ ಯಾವ ಆರೋಪ ಇದೆ ಗೊತ್ತಿಲ್ಲ. ವಿಚಾರಣಾ ಆಯೋಗ ವರದಿ ನೀಡಿದ ಬಳಿಕ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದಿನೇಶ್ ಅವರ ಅಮಾನತಿನ ಬಗ್ಗೆ ಪದೇಪದೇ ಪ್ರಶ್ನೆಗಳು ಎದುರಾದಾಗ ನಾನು ಅಮಾನತು ಆದೇಶವನ್ನು ನೋಡಿಲ್ಲ ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದರು.ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿತ್ತು. ಅದಕ್ಕೆ ರಾಜ ಮನೆತನದ ಪ್ರಮೋದಾದೇವಿಯವರು ತಡೆಯಾಜ್ಞೆ ತೆಗೆದುಕೊಂಡಿದ್ದರು. ಅದು ತೆರವಾಗಿದೆ. ಹೀಗಾಗಿ ಪ್ರಾಧಿಕಾರ ರಚನೆ ಬಳಿಕ ಮೊದಲ ಸಭೆಯನ್ನು ಬೆಟ್ಟದ ಮೇಲೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದೆಯೂ ದೇವಸ್ಥಾನದ ಆಡಳಿತ ಮಂಡಳಿ ಅಸ್ತಿತ್ವದಲ್ಲಿತ್ತು. ಅದಕ್ಕೆ ಸರ್ಕಾರವೇ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸುತ್ತಿತ್ತು. ದೇವಸ್ಥಾನ ಸರ್ಕಾರದ ಅಧೀನದಲ್ಲೇ ಇತ್ತು ಎಂದು ಹೇಳಿದರು.
ನ್ಯಾಯಾಲಯದ ತೀರ್ಮಾನದ ಪ್ರಕಾರ ನಾವು ನಡೆದುಕೊಳ್ಳುತ್ತಿದ್ದೇವೆ. ಸಂಸದರು ಹೇಳಿದಂತೆ ಕೇಳಲಾಗುವುದಿಲ್ಲ. ನಾನು ನ್ಯಾಯಾಲಯದ ನಿರ್ದೇಶನದ ಪ್ರಕಾರ ನಡೆದುಕೊಳ್ಳುತ್ತಿದ್ದೇನೆ ಎಂದರು.ಅಂಗನವಾಡಿ ಕಾರ್ಯಕರ್ತರಿಗೆ ಸಕಾಲಕ್ಕೆ ವೇತನ ಪಾವತಿಸಲಾಗಿದೆ. ಎಲ್ಲಿಯಾದರೂ ಹಣ ಬಿಡುಗಡೆಯಾಗದೇ ಬಾಕಿ ಉಳಿದಿದ್ದರೆ ಅದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಮೇಲೆ ದೇವರ ದರ್ಶನ ಪಡೆಯುತ್ತೇನೆ. ನಾನು ಯಾವುದೇ ಆತಂಕದಲ್ಲಿಲ್ಲ. ವಿರೋಧಪಕ್ಷದಲ್ಲಿದ್ದವರು ಸುಳ್ಳು ಹೇಳಿದ್ದಾರೆ. ಅದು ರುಜುವಾತಾಗದೇ ಇದ್ದರೆ ಕಷ್ಟ ಎಂಬ ಆತಂಕ ಅವರಿಗಿದೆ. ನಾನು ಯಾವತ್ತೂ ಸುಳ್ಳು ಹೇಳಿಲ್ಲ, ತಪ್ಪು ಮಾಡಿಲ್ಲ. ನಾನೇಕೆ ಆತಂಕ ಪಡಲಿ ಎಂದರು.
ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ಟರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಹಿರಿಯ ಕಾಂಗ್ರೆಸಿಗ ಆರ್.ವಿ.ದೇಶಪಾಂಡೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಅವಕಾಶ ನೀಡುವುದು ಶಾಸಕರು ಹಾಗೂ ಹೈಕಮಾಂಡ್. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ತಾವು ಬದ್ಧ ಎಂದು ಹೇಳಿದರು.