NEP ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ; ಪಠ್ಯಕ್ರಮ ಅಳವಡಿಕೆ ಹೇಗೆ..?

Spread the love

ಬೆಂಗಳೂರು, ಮೇ 17- ಬರುವ ಜೂನ್ ತಿಂಗಳಿನಿಂದಲೇ ಅನ್ವಯವಾಗುವಂತೆ ರಾಜ್ಯಾದ್ಯಂತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಯನ್ನು ಅಳವಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ದೇಶದಲ್ಲೇ ಎನ್‍ಇಪಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

ಈ ಮೊದಲು ಶೈಕ್ಷಣಿಕ ವರ್ಷ ಆರಂಭವಾದ ದಿನದಿಂದಲೇ ಎನ್‍ಇಪಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿತ್ತು. ಇದೀಗ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈಗಾಗಲೇ ಶಾಲೆಗಳು ಆರಂಭವಾದರೂ ಎನ್‍ಇಪಿ-2020 ಜಾರಿಗೆ ಬಂದಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇನ್ನೊಂದು ತಿಂಗಳಲ್ಲಿ ಹೊಸ ಶಿಕ್ಷಣ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ.

ಆದರೆ, ಏಕಾಏಕಿ ಒಟ್ಟಿಗೆ ಎನ್‍ಇಪಿ ಜಾರಿ ಮಾಡುವುದರ ಬದಲು ಹಂತಹಂತವಾಗಿ ಅನುಷ್ಠಾನಕ್ಕೆ ತರಲು ಸರಕಾರ ಯೋಜಿಸಿದೆ. ಮೊದಲ ಹಂತದಲ್ಲಿ ಅಂಗನವಾಡಿ ಶಿಕ್ಷಣ ಕೇಂದ್ರಗಳಲ್ಲಿ ಎನ್‍ಇಪಿ ಚಾಲನೆಗೆ ಬರಲಿದೆ. ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ರ(ಎನ್ ಇಪಿ-2020) ಜಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಇರುವ ಶಿಕ್ಷಣ ವ್ಯವಸ್ಥೆಯನ್ನು ಹಲವು ಸುಧಾರಣೆಗಳ ಮೂಲಕ ನೂತನ ಶಿಕ್ಷಣ ನೀತಿ ಸಂಪೂರ್ಣ ಬದಲಿಸಲಿದೆ, ಇನ್ನು ಮುಂದೆ ಉನ್ನತ ಶಿಕ್ಷಣಕ್ಕೆ ಒಂದೇ ಪ್ರಾಕಾರವಿರುತ್ತದೆ. ಪಿಹೆಚ್ ಡಿಗೆ ಮುನ್ನ ಎಂಫಿಲ್ ಕೋರ್ಸ್ ಗಳಿರುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದಿಷ್ಟ ಶುಲ್ಕ, ಪದವಿ ಕೋರ್ಸ್ ಗಳಿಗೆ 4 ವರ್ಷ ಅಥವಾ ಮೂರು ವರ್ಷ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ, ಡಿಗ್ರಿ ಕೋರ್ಸ್‍ಗಳಲ್ಲಿ ಬಹು ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿರುತ್ತವೆ.

ಇದು ವೃತ್ತಿಪರ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು 2018ರಲ್ಲಿ ಶೇಕಡಾ 26.3ರಿಂದ 2035ರ ವೇಳೆಗೆ ಶೇಕಡಾ 50ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ 3.5 ಕೋಟಿ ಹೊಸ ಸೀಟುಗಳನ್ನು ಸೇರಿಸುವ ಗುರಿಯನ್ನು ಹೊಂದಿದೆ.

ಅಂಕಿ-ಅಂಶಗಳು ಶಾಲೆಯಿಂದ ಹೊರಗುಳಿ ದವರ ಶೇಕಡಾವಾರು ಇಳಿಮುಖವಾಗಿದ್ದರೂ, ದ್ವಿತೀಯ ಮಟ್ಟದಲ್ಲಿ ಅದು ಇನ್ನೂ ಶೇಕಡಾ 17.5ರಷ್ಟಿದೆ. ಇದು ಉನ್ನತ ಶಿಕ್ಷಣದ ಮಟ್ಟದಲ್ಲೂ ಅಧಿಕವಾಗಿದೆ. ಕುಟುಂಬದಲ್ಲಿನ ಆರ್ಥಿಕ ಮತ್ತು ವೈದ್ಯಕೀಯ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಅಧ್ಯಯನದಿಂದ ವಿರಾಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ.

ಅಂತಹ ವಿದ್ಯಾರ್ಥಿಗಳು ಈಗ ಅವರು ಅಧ್ಯಯನ ಮಾಡಿದ ವರ್ಷಗಳ ಪೂರ್ಣಗೊಳಿಸು ವಿಕೆಯ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಅವರ ಕಲಿಕೆಗೆ ಮರಳಲು ಹಾಗೂ ಅವರು ನಿಲ್ಲಿಸಿದ ಸಮಯದಿಂದ ಪ್ರಾರಂಭಿಸಲು ಹೊಸ ಶಿಕ್ಷಣ ನೀತಿಯಲ್ಲಿ ಅವಕಾಶವಿರುತ್ತದೆ. ಅಂಗನವಾಡಿಗಳ ಕಾರ್ಯ ರ್ವಹಣೆಯಲ್ಲಿ ತತ್‍ಕ್ಷಣಕ್ಕೆ ನೀವು ಬದಲಾವಣೆ ಕಾಣುವುದಿಲ್ಲ. ಹಿಂದಿನಂತೆಯೇ ಅದರ ಕಾರ್ಯ ನಿರ್ವಹಣೆ ಇರುತ್ತದೆ. ಜೂನ್ 16ರ ನಂತರ ಬದಲಾಗಬಹುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್‍ಇಪಿ ಪಠ್ಯಕ್ರಮ ಅಳವಡಿಕೆ ಹೇಗೆ?:
ಎನ್‍ಇಟಿ ಪ್ರಕಾರವಾಗಿ ಶಾಲೆಪೂರ್ವ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮ ಇರಲಿದೆ. ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತರು ಈ ಪಠ್ಯಕ್ರಮ ಬೋಧಿಸುತ್ತಾರೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಹಿಂದಿನಂತೆ ಚಟುವಟಿಕೆ ಆಧಾರಿತವಾಗಿ ಕಲಿಕೆ ಮಾಡಲಿದ್ದಾರೆ. ಅಂಗನವಾಡಿಗಳಲ್ಲಿ ಜಾರಿಗೆ ಬರಲಿರುವ ಎನ್‍ಇಪಿ ಆಧಾರಿತ ಪಠ್ಯಕ್ರಮದಲ್ಲಿ ಒಂದನೇ ತರಗತಿ ಸೇರ್ಪಡೆಗೆ ಅಗತ್ಯವಾಗುವ ನಿಟ್ಟಿನಲ್ಲಿ ಕಲಿಕೆಗಳು ಇರುತ್ತವೆ ಎಂದು ಎನ್‍ಇಪಿ ಕಾರ್ಯಪಡೆಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿದ ಒಂದು ಉಪಸಮಿತಿ ಮತ್ತು ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಸೇರಿ ಹೊಸ ಪಠ್ಯಕ್ರಮವನ್ನು ರಚಿಸುವ ಕಾರ್ಯ ಮುಂದುವರಿದಿದೆ. ಅದರೆ, ಈಗ ಅಂಗನವಾಡಿ ಶಾಲೆಗಳಿಗೆ ಕೊಡಲಾಗುತ್ತಿರುವುದು ತಾತ್ಕಾಲಿಕ ಪಠ್ಯಕ್ರಮವಾಗಿರುತ್ತದೆ. ಎನ್‍ಸಿಇಆರ್‍ಟಿಯವರು ಅಕ್ಟೋಬರ್‍ನಲ್ಲಿ ಹೊಸ ಪಠ್ಯಕ್ರಮದ ರೂಪುರೇಷೆ ಪ್ರಕಟಿಸಲಿದ್ದಾರೆ. ಅದನ್ನು ಆಧರಿಸಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತದೆ ಎಂದು ಅಕಾರಿಗಳು ಹೇಳಿದ್ದಾರೆ.

ಇತ್ತ ಎನ್‍ಇಪಿ ಪಠ್ಯಕ್ರಮ ಜಾರಿಗೆ ತರಲಿರುವ ಅಂಗನವಾಡಿ ಕಾರ್ಯಕರ್ತರು ಈಗಲೂ ತರಬೇತಿಯಲ್ಲಿ ನಿರತರಾಗಿದ್ದಾರೆ. ಒಟ್ಟು 20 ಸಾವಿರ ಅಂಗನವಾಡಿ ಶಿಕ್ಷಕರ ಪೈಕಿ ಎಂಟು ಸಾವಿರ ಮಂದಿಗೆ ತರಬೇತಿ ಬಾಕಿ ಇದೆ. ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಮುನ್ನವೇ ಎನ್‍ಇಪಿ ಮಾದರಿಯಲ್ಲಿ ಪಠ್ಯಕ್ರಮ ಅಳವಡಿ ಸಲು ವಿಳಂಬವಾಗಲು ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾರಣ ಎನ್ನಲಾಗಿದೆ.

ಎನ್‍ಇಪಿ ಯೋಜನೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಕೆಳ ಪ್ರಾಥಮಿಕ ಶಾಲೆಗಳ (ಒಂದು ಮತ್ತು ಎರಡನೇ ತರಗತಿ) ಜೊತೆ ವಿಲೀನ ಮಾಡುವ ಪ್ರಸ್ತಾವ ಇದೆ. ಹೀಗಾಗಿ, ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಎನ್‍ಇಪಿ ಅಳವಡಿಕೆಗೆ ಮನಸ್ಸು ಮಾಡಿರಲಿಲ್ಲ. ಅವರನ್ನು ಒಪ್ಪಿಸಿ ತರಬೇತಿ ನೀಡುವ ಕೆಲಸ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Facebook Comments