ಅಮೇರಿಕಾದಲ್ಲಿ ಕರ್ನಾಟಕ ರೈತರ ಪಟಾಪಟಿ ಚಡ್ಡಿ ಹವಾ..!

ಬೆಂಗಳೂರು, ಜು.9- ದೇವೇಗೌಡರು ಪ್ರಧಾನಿಯಾಗುತ್ತಿದ್ದಂತೆ ದೇಶದೆಲ್ಲೆಡೆ ರಾಗಿಮುದ್ದೆಯದ್ದೇ ಮಾತು. ಇದೀಗ ರೈತರ ಪಟಾಪಟಿ ಚಡ್ಡಿ ದೂರದ ಅಮೆರಿಕದಲ್ಲೂ ಸದ್ದು ಮಾಡಿದೆ.

ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅದರಲ್ಲೂ ಅಪ್ಪಟ ಕನ್ನಡಿಗರು ತಾವು ನೆಲೆಸಿರುವ ದೇಶದಲ್ಲೇ ತಮ್ಮ ಮೂಲ ಕಸುಬಾದ ಕೃಷಿಯನ್ನು ಮುಂದುವರಿಸಿಕೊಂಡು ನಾವೆಲ್ಲಿದ್ದರೂ ಮಣ್ಣಿನ ಮಕ್ಕಳೇ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಶಾಂತರಾಜ್ ಕೆ., ಶ್ಯಾಮ್ ಆರ್., ಶಶಿ, ಶರತ್, ರಮೇಶ್‍ಗೌಡ, ಸಾಯಿಗೌಡ, ಸಂಜೀವ, ಅಮರನಾಥ್‍ಗೌಡ, ರಾಜು, ರಮೇಶ್‍ಗೌಡ, ಶೇಷಾದ್ರಿ, ಹರೀಶ್, ಶ್ರೀಕಾಂತ್, ಬಸವರಾಜು, ನಾಗೇಶ್, ಮಹದೇವಸ್ವಾಮಿ, ರವಿ ಕೊಳ್ಳೇಗಾಲ, ಮಧು ಆರ್., ಮಾದೇಶ್, ಜಯಗೌಡ ಮತ್ತಿತರರು ಉದ್ಯೋಗ ಅರಸಿ ದೂರದ ಅಮೆರಿಕಕ್ಕೆ ತೆರಳಿ ಐಟಿ-ಬಿಟಿ ಉದ್ಯೋಗಿಗಳಾಗಿ ಜೀವನ ಕಂಡುಕೊಂಡಿದ್ದಾರೆ.

ಐಟಿ-ಬಿಟಿಯಿಂದ ಕೈ ತುಂಬ ಸಂಬಳ ಪಡೆದು ನೆಮ್ಮದಿ ಜೀವನ ಸಾಗಿಸುತ್ತಿರುವ ಇವರಿಗೆಲ್ಲ ತಮ್ಮ ಮೂಲ ಕೃಷಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವು ವಾಸಿಸುತ್ತಿರುವ ದೇಶದಲ್ಲೇ ಜಮೀನು ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮೆರಿಕದಲ್ಲಿರುವ ಕನ್ನಡಿಗರು ಕೃಷಿಯನ್ನು ಮರೆತಿಲ್ಲ ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಅಮೆರಿಕದಲ್ಲಿ ಕೃಷಿ ಬಗ್ಗೆ ಕಾಳಜಿ ಇರುವಂತಹ ಕಾರ್ಯಕ್ರಮ ರೂಪಿಸಿ ಎಲ್ಲರೂ ಭಾರತೀಯ ರೈತರಂತೆ ಪಟಾಪಟಿ ಚಡ್ಡಿ, ಅಂಗಿ ತೊಟ್ಟು ಗಮನ ಸೆಳೆದರು.

ಮಗ ಕೆಟ್ಟು ಪಟ್ಣ ಸೇರ್ಕೊಂಡ ಇನ್ನು ಉಳುಮೆ ಮಾಡೋರ್ಯಾರು ಎನ್ನುವುದು ನಮ್ಮ ರೈತಾಪಿ ಜನರ ಅಳಲಾಗಿತ್ತು. ಊರಲ್ಲಿ ಸ್ವಂತ ಜಮೀನು ಹೊಂದಿದ್ದರೂ ಇಂದಿನ ಯುವ ಪೀಳಿಗೆ ಆಧುನಿಕತೆಯ ಭರಾಟೆಯಲ್ಲಿ ಕೃಷಿ ಮಾಡುವುದನ್ನು ಬಿಟ್ಟು ಪಟ್ಟಣ ಸೇರ್ಕೊಂಡು ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬೇ ಕೃಷಿ. ವಿದ್ಯಾವಂತರು ತಮ್ಮ ಮೂಲ ಕೃಷಿಯನ್ನು ಮರೆಯುತ್ತಿರುವುದರಿಂದ ಭವಿಷ್ಯದಲ್ಲಿ ಉಳುಮೆಗೆ ಬೆಲೆ ಇರುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ವಿದ್ಯಾವಂತರು ಆಧುನಿಕ ಜಂಜಡದಿಂದ ಬೇಸತ್ತು ಮತ್ತೆ ಹಳ್ಳಿಗೆ ತೆರಳಿ ಕೃಷಿ ಮಾಡುವತ್ತ ಗಮನ ಹರಿಸುತ್ತಿರುವುದು ಸ್ವಾಗತಾರ್ಹ.

ಇನ್ನು ದೂರದ ಅಮೆರಿಕದಲ್ಲಿದ್ದರೂ ತಮ್ಮದು ಕೃಷಿ ಕುಟುಂಬ ಎಂಬುದನ್ನು ಮರೆಯದ ಐಟಿ-ಬಿಟಿ ಮಂದಿ ತಾವಿರುವ ಜಾಗದಲ್ಲೇ ಕೃಷಿ ಮಾಡಿ ಗಮನ ಸೆಳೆದಿರುವುದು ಭಾರತದಲ್ಲಿರುವ ಸಾವಿರಾರು ವಿದ್ಯಾವಂತರಿಗೆ ಮಾರ್ಗದರ್ಶನವಾದರೆ ಅದೇ ಭವಿಷ್ಯದಲ್ಲಿ ಸುಭದ್ರ ಭಾರತಕ್ಕೆ ಬುನಾದಿಯಾಗಲಿದೆ.

Sri Raghav

Admin