ಬೆಂಗಳೂರು, ಆ.12- ರಾಜ್ಯದಲ್ಲಿ ಮಳೆಯ ಅಬ್ಬರ ತಪ್ಪಿದರೂ ಉಕ್ಕಿ ಹರಿಯುತ್ತಿರುವ ಜಲಾಶಯಗಳಿಂದ ಪ್ರವಾಹದ ಭೀತಿ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವ ಹಾಗೆ ಮಳೆ ಪ್ರಮಾಣ ರಾಜ್ಯದಲ್ಲಿ ತಗ್ಗಿದರೂ ಮಳೆಯ ಅವಾಂತರಗಳು ಮಾತ್ರ ಹೆಚ್ಚಾಗಿವೆ.
ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಮಳೆ ಅಬ್ಬರಕ್ಕೆ ಜಿಲ್ಲೆಯ ಕಡೂರು ತಾಲ್ಲೂಕಿನ ಐತಿಹಾಸಿಕ ಮದಗದ ಕೆರೆ ಏರಿಯಲ್ಲಿ ಭೂ ಕುಸಿತ ಉಂಟಾಗಿದೆ.
ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಕೆರೆಗೆ ಹರಿದುಬರುತ್ತಿದ್ದು, ಏರಿ ಬಿರುಕುಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಹೆಗ್ಗಾರು ಕೂಡಿಗೆಯಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಚಕನೂರು ಗ್ರಾಮದಲ್ಲಿರುವ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದ್ದು, ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಘಟಪ್ರಭ ನದಿ ತುಂಬಿ ಹರಿಯುತ್ತಿರುವುದರಿಂದ ಜಮೀನುಗಳಿಗೆ ನೀರು ನುಗ್ಗಿ ಕಬ್ಬಿನ ಬೆಳೆ ನಾಶವಾಗಿದೆ.
ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರುವುದರಿಂದ ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಉತ್ತರ ಕರ್ನಾಟಕ ಭಾಗದ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ನಿರ್ಜಿ ಗ್ರಾಮದ ಬಳಿಯ ಬ್ಯಾರೇಜ್ ಜಲಾವೃತಗೊಂಡಿದ್ದು, ಮಹಾಲಿಂಗಪುರಂ ಪಟ್ಟಣಕ್ಕೆ ಸಂಪರ್ಕ ಕಡಿತಗೊಂಡಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ತವಗದಗಟ್ಟಿ ಗ್ರಾಮಸ್ಥರು ಕೃಷ್ಣಾ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.
ಕರಾವಳಿ, ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಮಡಿಕೇರಿ, ಚಿಕ್ಕಮಗಳೂರಿನಿಂದ ಮಳೆಯಿಂದ ಹಲವೆಡೆ ಕಾಫಿ ತೋಟಗಳು ಕೊಚ್ಚಿಹೋಗಿವೆ. ಕಲಬುರಗಿ, ಬೀದರ್ನಲ್ಲಿ ವರುಣನ ಅಬ್ಬರ ತಗ್ಗಿದೆ.