ಮತ್ತೆ ವರುಣನ ಅಬ್ಬರ, ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತ

Social Share

ಬೆಂಗಳೂರು,ಜು.31- ಕಳೆದ ಕೆಲವು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣನ ಆರ್ಭಟ ರಾಜ್ಯದಲ್ಲಿ ಮತ್ತೆ ಮುಂದುವರೆದಿದೆ. ನಿನ್ನೆ ರಾಜಧಾನಿ ಬೆಂಗಳೂರು, ಕಲಬುರಗಿ, ತುಮಕೂರು ಸೇರಿದಂತೆ ವಿವಿಧೆಡೆ ಸುರಿದ ಭಾರೀ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ.

ತುಮಕೂರಿನಲ್ಲಿ ಮಳೆಯ ಆರ್ಭಟಕ್ಕೆ ಉಂಟಾದ ವಿದ್ಯುತ್ ಅವಘಡದಿಂದ ವೃದ್ಧನೊಬ್ಬ ಸಾವನ್ನಪ್ಪಿದರೆ, ಕಲಬುರಗಿಯಲ್ಲಿ ತುಂಬಿ ಹರಿಯುತ್ತಿದ್ದ ಮಹಿಳೆಯೊಬ್ಬಳು ಕೊಚ್ಚಿ ಹೋಗಿದ್ದಾರೆ. ಸಿಲಿಕಾನ್‍ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ರಸ್ತೆಗಳೆಲ್ಲ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ಇಲ್ಲಿನ ನಿವಾಸಿಗಳು ರಾತ್ರಿಯೆಲ್ಲ ಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಉತ್ತರ ಕರ್ನಾಟಕ ಭಾಗದ ಹಲವೆಡೆ ಭಾರೀ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು, ಮಡಿಕೇರಿ, ಕರಾವಳಿ ಪ್ರದೇಶದಲ್ಲಿ ಅಬ್ಬರದ ಮಳೆ ಸುರಿದು ಅವಾಂತರಗಳಿಗೆ ಕಾರಣವಾಗಿತ್ತು. ಈಗ ಮತ್ತೆ ಮಳೆಯ ಆರ್ಭಟ ಜೋರಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಗಾಳಿಯಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಒಳನಾಡಿನಲ್ಲಿ ಮಳೆಯಾಗುತ್ತಿದೆ.

ರಾಜಧಾನಿ ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೆಲವೆಡೆ ಮರಗಳು ಉರುಳಿಬಿದ್ದಿವೆ.
ಕೋಲಾರ, ತುಮಕೂರು, ರಾಮನಗರ, ಬೆಳಗಾವಿನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ವಿಜಯಪುರ, ಮಂಡ್ಯ, ಚಾಮರಾಜನಗರ, ಕಲಬುರಗಿ, ದಕ್ಷಿಣಕನ್ನಡ, ಶಿವಮೊಗ್ಗ, ಕೊಡುಗು ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಕೆಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಂಭವವಿದೆ.

ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಜೂನ್‍ನಿಂದ ಜುಲೈ 30ರ ನಡುವಿನ ಅವಯಲ್ಲಿ 529 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.14ರಷ್ಟು ಹೆಚ್ಚು ಮಳೆ ರಾಜ್ಯದಲ್ಲಿ ಆಗಿದೆ. ಈ ಅವಯಲ್ಲಿ 463 ಮಿ.ಮೀ ವಾಡಿಕೆ ಮಳೆಯ ಪ್ರಮಾಣ.

ಜುಲೈನಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ, ಮಳೆ, ಪ್ರವಾಹ, ಅತಿವೃಷ್ಟಿ ಉಂಟಾಗಿತ್ತು. ರಾಜ್ಯದಲ್ಲಿ 263 ಮಿ.ಮೀ ವಾಡಿಕೆ ಮಳೆಯಾಗಿದ್ದು, 373 ಮಿ.ಮೀನಷ್ಟು ಮಳೆಯಾಗಿದೆ.

ಒಟ್ಟಾರೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆ ಜುಲೈನಲ್ಲಿ ಆಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.67ರಷ್ಟು, ಉತ್ತರ ಒಳನಾಡಿನಲ್ಲಿ ಶೇ.60, ಮಲೆನಾಡಿನಲ್ಲಿ ಶೇ.40 ಹಾಗೂ ಕರಾವಳಿ ಭಾಗದಲ್ಲಿ ಶೇ.29ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾದ ವರದಿಯಾಗಿದೆ.

Articles You Might Like

Share This Article