ಲೋಕಾಯುಕ್ತಕ್ಕೆ ಮರುಜೀವ, ಭ್ರಷ್ಟರಿಗೆ ಶಾಕ್, ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ

Social Share

ಬೆಂಗಳೂರು,ಆ.12- ಲೋಕಾಯುಕ್ತಕ್ಕೆ ಪೊಲೀಸ್ ಠಾಣೆಯ ಅಧಿಕಾರ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನುಪಾಲನ ಅವಕಾಶ ನೀಡಿರುವ ಹೈಕೋರ್ಟ್‍ನ ತೀರ್ಪು ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆಯಂತಾಗಿದೆ. ಇದು ಆಡಳಿತ ಪಕ್ಷಕ್ಕಷ್ಟೇ ಅಲ್ಲ ಪ್ರತಿಪಕ್ಷಗಳಿಗೂ ಕೂಡ ಸವಾಲೊಡ್ಡುವ ಪರಿಸ್ಥಿತಿಯಾಗಿದ್ದು, ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಹೋರಾಟ ಮಾಡುವವರು ಈಗ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕಾದ ಸಂದರ್ಭ ಒದಗಿದೆ.

ಆಡಳಿತ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರವನ್ನು ಪೋಷಿಸುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧ ಮಾಡುವ ಬೂಟಾಟಿಕೆ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ಜನರ ಕಣ್ಣಿಗೆ ಮಣ್ಣೆರಚುತ್ತಲೇ ಬಂದಿವೆ. ಭ್ರಷ್ಟಾಚಾರ ಎಂಬುದು ದಿನೇ ದಿನೇ ಬ್ರಹ್ಮ ರಾಕ್ಷಸನಂತೆ ಬೆಳೆದು ಜನ ಸಾಮಾನ್ಯರನ್ನು ಸುಲಿದು ತಿನ್ನುತ್ತಿದೆ.

ಪ್ರಸ್ತುತ ಜಾರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ ಕೆಳಹಂತದ ಅಧಿಕಾರಗಳನ್ನಷ್ಟೇ ಕೇಂದ್ರೀಕರಿಸಿ ಶೋಧ, ಟ್ರ್ಯಾಪ್‍ನಂತಹ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಭ್ರಷ್ಟಾಚಾರ ಕೇವಲ ಕೆಳಮಟ್ಟದಲ್ಲಷ್ಟೇ ಅಲ್ಲ. ವಿಧಾನಸೌಧದ ಮೂರನೆ ಮಹಡಿ ದಾಟಿ ದೆಹಲಿ ವರೆಗೂ ಕಬಂಧ ಬಾಹು ಚಾಚಿದೆ.

ಲೋಕಾಯುಕ್ತ ಮತ್ತು ಎಸಿಬಿ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. ಈ ಹಿಂದೆ ಗಣಿ ಹಗರಣದಲ್ಲಿ ಸಿಕ್ಕಿಬಿದ್ದ ಬಳ್ಳಾರಿಯ ಜನಾರ್ದನರೆಡ್ಡಿ ಅವರಿಗೆ ಜಾಮೀನು ಕೊಡಿಸಲು ಆಂಧ್ರಪ್ರದೇಶದ ನ್ಯಾಯಾೀಧಿಶರಿಗೆ 100 ಕೋಟಿ ಲಂಚ ನೀಡಿದ ಹಗರಣವನ್ನು ಅಲ್ಲಿನ ಎಸಿಬಿ ತನಿಖೆ ನಡೆಸಿ ನ್ಯಾಯಾೀಧಿಶರನ್ನೇ ಬಂಧಿಸಿತ್ತು. ಅದು ದೇಶದ ಗಮನ ಸೆಳೆದಿತ್ತು.

ಆ ವೇಳೆಯಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಜಾರಿಗೊಳಿಸುವ ಪರಿಣಿತಿ ಮತ್ತು ಅಧಿಕಾರ ಹೊಂದಿಲ್ಲ ಎಂಬ ಅರ್ಥದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಾಗಿ ವಿಶ್ಲೇಷಿಸಿ ದೇಶದ ಹಲವು ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ (ಎಸಿಬಿ)ದಳವನ್ನು ರಾಜ್ಯದಲ್ಲೂ ರಚಿಸಲಾಯಿತು.

ಎಸಿಬಿಗೆ ಮುಖ್ಯಸ್ಥರಾಗಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮುಖ್ಯಮಂತ್ರಿಯವರಿಗೆ ವರದಿ ಮಾಡಿಕೊಳ್ಳಬೇಕು ಎಂಬ ನಿಯಮ ಎಸಿಬಿ ಮಸೂದೆಯಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಬಹಳಷ್ಟು ಹೈಪ್ರೊಫೈಲ್ ಪ್ರಕರಣಗಳು ಸಮರ್ಪಕ ತನಿಖೆಯೇ ಇಲ್ಲದೆ ಮುಚ್ಚಿ ಹೋದವು.

ರಾಜಕಾರಣಿಗಳು, ಪ್ರಭಾವಿಗಳನ್ನು ಮುಟ್ಟಲು ಎಸಿಬಿ ಕೈಯಲ್ಲಿ ಸಾಧ್ಯವಾಗಲಿಲ್ಲ. ಈ ಹಿಂದೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಾಜಿ ಸಚಿವರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಅನೇಕರನ್ನು ಲೋಕಾಯುಕ್ತ ನ್ಯಾಯಾಲಯ ಬಂಧನಕ್ಕೆ ಆದೇಶಿಸಿತ್ತು.

ಲೋಕಾಯುಕ್ತರಾಗಿ ಸಂತೋಷ್ ಹೆಗ್ಡೆ ಅವರ ಗಣಿ ಹಗರಣ ವರದಿ ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡಿತು. ವೆಂಕಟಾಚಲಯ್ಯ ಅವರು ಲೋಕಾಯುಕ್ತಕ್ಕೆ ತಂದು ಕೊಟ್ಟಿದ್ದ ಜನಪರವಾದ ವೈಭವ ಮೆಚ್ಚುಗೆಗೆ ಪಾತ್ರವಾಗಿತ್ತು.
ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಪೊಲೀಸ್ ಠಾಣೆ ಅಧಿಕಾರವನ್ನು ಲೋಕಾಯುಕ್ತದಿಂದ ಕಿತ್ತುಕೊಂಡ ಬಳಿಕ ರಾಜ್ಯದ ಪ್ರಮುಖ ಓಂಬಡ್ಸ್‍ಮನ್ ಸಂಸ್ಥೆ ದುರ್ಬಲವಾಗಿತ್ತು.

ಮೊದಲೇ ಸಮರ್ಪಕ ಅಧಿಕಾರಗಳಿಲ್ಲದ ಹಲ್ಲು ಕಿತ್ತ ಹಾವು ಎಂಬ ಅತೃಪ್ತಿಗೆ ಗುರಿಯಾಗಿದ್ದ ಲೋಕಾಯುಕ್ತ ಪೊಲೀಸ್ ಠಾಣೆ ಅಧಿಕಾರಗಳನ್ನು ಕಿತ್ತುಕೊಂಡ ಬಳಿಕ ಸಂಪೂರ್ಣ ನಿಷ್ಕ್ರಿಯವಾಗಿದೆ. ಆಡಳಿತದಲ್ಲಿನ ದುರ್ನಡತೆ ಮತ್ತು ದುರ್ವವ್ಯವಹಾರಗಳನ್ನಷ್ಟೇ ವಿಚಾರಣೆ ನಡೆಸಲು ಸೀಮಿತವಾಗಿದೆ. ಆದರೆ, ಈ ವಿಷಯದಲ್ಲಿ ದೂರು ನೀಡುವವರೂ ಕೂಡ ನಿರಾಶರಾಗಿ ಹೋಗಿದ್ದಾರೆ.

ನಿನ್ನೆ ಹೈಕೋರ್ಟ್ ನೀಡಿರುವ ತೀರ್ಪು ಇಂಚಿಂಚೂ ಗಮನ ಸೆಳೆಯುತ್ತಿದೆ. ಲೋಕಾಯುಕ್ತ ರಚನೆಯ ಮಾದರಿ, ಕಾಲ ಕಾಲಕ್ಕೆ ಪಡೆದುಕೊಂಡಿರುವ ಅಧಿಕಾರಗಳು ಮತ್ತು ಅಲ್ಲಿನ ಪರಿಣಿತಿಯ ತಂಡಗಳ ಬಗ್ಗೆ ಹೈಕೋರ್ಟ್ ಸಮಗ್ರವಾದ ವಿಶ್ಲೇಷಣೆ ಮಾಡಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಅಧಿಕಾರ ಮತ್ತು ಪರಿಣಿತಿ ಲೋಕಾಯುಕ್ತ ಸಂಸ್ಥೆಗೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಲೋಕಾಯುಕ್ತರನ್ನು ನೇಮಿಸುವಾಗಲೂ ಇರುವ ಸಾಂವಿಧಾನಿಕ ಬದ್ಧತೆಗಳನ್ನು ಪ್ರಶಂಸಿಸಿದೆ. ಆದರೆ, ರಾಜಕೀಯ ಹೊರತಾಗಿ ದಕ್ಷ, ಪ್ರಾಮಾಣಿಕ ಲೋಕಾಯುಕ್ತರನ್ನು ನೇಮಿಸುವ ಅಗತ್ಯವನ್ನು ಪ್ರತಿಪಾದಿಸಿದೆ.

ಈ ಹಿಂದೆ ಭಾಸ್ಕರ್ ರಾವ್ ಅವರು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಸಂಸ್ಥೆಗೆ ಕಳಂಕ ಅಂಟಿದ್ದು, ಅದನ್ನೇ ನೆಪ ಮಾಡಿಕೊಂಡು ಸಿದ್ದರಾಮಯ್ಯ ಸರ್ಕಾರ ಪೊಲೀಸ್ ಠಾಣೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಜಾರಿ ಅಧಿಕಾರವನ್ನು ಲೋಕಾಯುಕ್ತದಿಂದ ಕಿತ್ತುಕೊಂಡಿತ್ತು.

ಈಗ ಹೈಕೋರ್ಟ್ ಆದೇಶ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಿದೆ. ಶೇ.40ರಷ್ಟು ಕಮಿಷನ್ ದಂಧೆ, ಪಿಎಸ್‍ಐ ಹಗರಣ, ನೇಮಾತಿಯಲ್ಲಿ ಭ್ರಷ್ಟಾಚಾರದಂತಹ ಹೈಪ್ರೊಫೈಲ್‍ನಂತಹ ಪ್ರಕರಣಗಳಲ್ಲಿ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂಬ ಆರೋಪಗಳಿವೆ.

ಈ ಹಂತದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವುದು ಎಲ್ಲರ ಬದ್ಧತೆಯೇ ಆಗಿದ್ದರೆ, ರಾಜಕೀಯ ಪಕ್ಷಗಳು ದೂಸ್ರಾ ಮಾತನಾಡದೆ ಲೋಕಾಯುಕ್ತವನ್ನು ಪುನರುಜ್ಜೀವನಗೊಳಿಸುವ ಮೂಲಕ ಅದಕ್ಕೆ ಸಂಪೂರ್ಣ ಅಧಿಕಾರ ನೀಡುವ ಅಗತ್ಯವಿದೆ. ಈ ಮೂಲಕ ಜನ ಸಾಮಾನ್ಯರ ಅಭಿಪ್ರಾಯ ಮತ್ತು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ.

Articles You Might Like

Share This Article