ಬೆಂಗಳೂರು, ಫೆ.18- ಹೈಕೋರ್ಟ್ ಆದೇಶ ಪಾಲಿಸಿ ಸಮವಸ್ತ್ರ ಸಂಹಿತೆಯನ್ನು ಅನುಸರಿಸಿ ಶಾಲಾ-ಕಾಲೇಜುಗಳು ನಡೆಯುವಂತೆ ಅನುವು ಮಾಡಿಕೊಡಿ ಎಂದು ಪೊಲೀಸರು, ಜಿಲ್ಲಾಡಳಿತ, ಕಾಲೇಜು ಆಡಳಿತ ಮಂಡಳಿ ಸಾಕಷ್ಟು ಮನವಿ ಮಾಡಿದರೂ ಹಿಜಾಬ್‍ಗಾಗಿ ಪಟ್ಟುಬಿಡದ ವಿದ್ಯಾರ್ಥಿಗಳು ಇಂದೂ ಕೂಡ ವಿವಿಧೆಡೆ ಪ್ರತಿಭಟನೆ ನಡೆಸಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ವಿಚಾರಣೆ ಕೂಡ ನಡೆಯುತ್ತಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲದಿದ್ದರೂ ವಿದ್ಯಾರ್ಥಿಗಳು ಪ್ರತಿನಿತ್ಯ ಹಿಜಾಬ್ ಧರಿಸಿ ಬರುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಕೆಲವು ಕಡೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಿ ಎಂದು ಧರಣಿ, ಪ್ರತಿಭಟನೆಗಳು ನಡೆದವು.
ಹಲವೆಡೆ ತರಗತಿಗಳಿಗೆ ಗೈರು ಹಾಜರಾದರು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಹಲವೆಡೆ ದೂರು ಕೂಡ ದಾಖಲಿಸಲಾಗಿದೆ. ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಕಾಲೇಜುಗಳ ಬಳಿ ಇಂದು ಹಿಜಾಬ್ ಧರಿಸಿ ಆಗಮಿಸಿದ್ದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಅವಕಾಶ ನೀಡಬೇಕೆಂದು ಪಟ್ಟುಹಿಡಿದರು.
ಹೈಕೋರ್ಟ್‍ನ ಮಧ್ಯಂತರ ಆದೇಶವನ್ನು ನಾವು ಪಾಲನೆ ಮಾಡಬೇಕಾಗಿದೆ. ಹಿಜಾಬ್ ತೆಗೆದು ತರಗತಿಗೆ ತೆರಳಿ. ಇಲ್ಲದಿದ್ದರೆ ನಿಮ್ಮ ಮೇಲೆ ದೂರು ದಾಖಲಿಸಬೇಕಾಗುತ್ತದೆ ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಇದಾವುದನ್ನೂ ಪರಿಗಣಿಸದೆ ಹಲವೆಡೆ ವಿದ್ಯಾರ್ಥಿನಿಯರು ಕಾಲೇಜುಗಳ ಮುಂದೆ ಹಿಜಾಬ್‍ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ತುಮಕೂರಿನ ಇಂಪೀರಿಯಲ್ ಕಾಲೇಜು ಬಳಿ ಇಂದು ಬೆಳ್ಳಂಬೆಳಗ್ಗೆ ವಿದ್ಯಾರ್ಥಿಗಳು ಆಗಮಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು, ಕಾಲೇಜು ಸಿಬ್ಬಂದಿ ಮನವರಿಕೆ ಮಾಡುವ ಯತ್ನ ಮಾಡಿದರಾದರೂ ಕ್ಯಾರೆ ಎನ್ನದೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರೆಸಿ ಹಿಜಾಬ್ ಬೇಕು, ಶಿಕ್ಷಣವೂ ಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ನಿಷೇಧಾಜ್ಞೆ ಉಲ್ಲಂಘಿಸಿದ ವಿದ್ಯಾರ್ಥಿಗಳು ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಲಾಗಿದೆ. ಬೆಳಗಾವಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಿನ್ನೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದು, ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಕಾಲೇಜಿಗೆ ತೆರಳಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದರು.
ಚಿತ್ರದುರ್ಗ ಸರ್ಕಾರಿ ಪಿಯು ಕಾಲೇಜು ಬಳಿ ಆಗಮಿಸಿದ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆದು ಶಾಲೆಗೆ ಹೋಗುವಂತೆ ಸೂಚನೆ ನೀಡಿದರು. ಹಿಜಾಬ್ ನಮ್ಮ ಹಕ್ಕು. ನಾವು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದು ಕಾಲೇಜು ಮುಂದೆ ಪ್ರತಿಭಟನೆ ನಡೆಸಲು ಮುಂದಾದ ವಿದ್ಯಾರ್ಥಿನಿಯರನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದರು.
ನಗರದ ಎಸ್‍ಆರ್‍ಎಸ್ ಕಾಲೇಜಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡೇ ಬಂದಿದ್ದರು. ಇಂತಹ ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿ ಹೊರಹಾಕಿದೆ. 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗೇಟ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಸದ್ಯ ಕಾಲೇಜು ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಳಗಾವಿ ಪ್ಯಾರಾ ಮೆಡಿಕಲ್ ಕಾಲೇಜು, ಶಿವಮೊಗ್ಗ ಡಿವಿಎಸ್ ಕಾಲೇಜು, ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸೇರಿದಂತೆ ಹಲವೆಡೆ ಹಿಜಾಬ್‍ಗಾಗಿ ಪ್ರತಿಭಟನೆ ನಡೆದಿದೆ. ಯಾದಗಿರಿ ನಗರದ ನ್ಯೂ ಕನ್ನಡ ಕಾಲೇಜಿನ ಮುಂದೆ ಹಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಕೋಲಾರ ಸರ್ಕಾರಿ ಬಾಲಕಿಯರ ಜ್ಯೂನಿಯರ್ ಕಾಲೇಜಿಗೆ ಬಹುತೇಕ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ಹಿಜಾಬ್ ತೆಗೆಯಬೇಕು ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿರಲಿಲ್ಲ. ಎರಡು ದಿನಗಳಿಂದ ಕಾಲೇಜು ಗೇಟ್ ಬಳಿ ಮೌನ ಪ್ರತಿಭಟನೆ ಮಾಡಿದ್ದ ವಿದ್ಯಾರ್ಥಿನಿಯರು ಇಂದು ಕಾಲೇಜು ಕಡೆ ಸುಳಿಯಲಿಲ್ಲ.
