ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನಿರೀಕ್ಷೆ

Social Share

ಬೆಂಗಳೂರು,ಜ.31- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಬಜೆಟ್ ನಾಳೆ ಮಂಡನೆಯಾಗಲಿದ್ದು, ವಿಧಾನಸಭೆ ಚುನಾವಣೆ ಹೊಸ್ತಿನಲ್ಲಿರುವ ಕರ್ನಾಟಕಕ್ಕೆ ಬಂಪರ್ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ ಸಹಜವಾಗಿ ತಮ್ಮ ತವರು ರಾಜ್ಯಕ್ಕೆ ಬಜೆಟ್‍ನಲ್ಲಿ ಉಡುಗೊರೆಗಳ ಭಾಗ್ಯವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಮತದಾರರನ್ನು ಆಕರ್ಷಿಸಲು ಒಂದಿಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆ
ಹಸಿರು ನಿಶಾನೆ ತೋರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಬಿಆರ್‌ಎಸ್‌, ಎಎಪಿ

ಸಾಮಾನ್ಯವಾಗಿ ಚುನಾವಣೆ ನಡೆಯುವ ಯಾವುದೇ ರಾಜ್ಯಗಳಿಗೂ ಮೋದಿ ಸರ್ಕಾರ ಉಚಿತ ಉಡುಗೊರೆಗಳನ್ನು ನೀಡಿದ ಸಂಪ್ರದಾಯವನ್ನು ನಡೆಸಿಕೊಂಡು ಬಂದಿಲ್ಲ. ಉಚಿತ ಯೋಜನೆಗಳನ್ನೇ ಕಿತ್ತು ಹಾಕಿ ಜನರನ್ನು ಸ್ವಾವಲಂಬಿ ಮಾಡಲು ಮೋದಿ ಸರ್ಕಾರ ಒತ್ತು ಕೊಡುತ್ತದೆ. ಇದೇ ಪ್ರಧಾನವಾದರೆ ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸವಾಗಬಹುದು.

ಆದರೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಜೆಟ್‍ನಲ್ಲಿ ಯೋಜನೆಗಳನ್ನು ಘೋಷಣೆ ಮಾಡದಿದ್ದರೆ ಮತದಾರ ತಿರುಗಿ ಬೀಳಬಹುದೆಂಬ ಅಳುಕಿದೆ. ಹೀಗಾಗಿ ಜನರನ್ನು ಬಿಜೆಪಿಯತ್ತ ಆಕರ್ಷಿಸಲು ನಿರ್ಮಲಾ ಸೀತಾರಾಮನ್ ಜಾದು ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಏನೆಲ್ಲ ಆಗಬೇಕೋ ಆ ಯೋಜನೆಗಳ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಡಬಲ್ ಇಂಜಿನ್ ಸರ್ಕಾರದ ಬಗ್ಗೆಯೇ ಹೆಚ್ಚು ಪ್ರಸ್ತಾಪ ಮಾಡುತ್ತಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಏನೂ ಇಲ್ಲ ಅಂದರೆ ಪ್ರತಿಪಕ್ಷಗಳಿಗೆ ಇದು ಅಸ್ತ್ರವಾಗಲಿದೆ. ಹೀಗಾಗಿ ಒಂದಿಷ್ಟು ಯೋಜನೆಗಳನ್ನು ಘೋಷಿಸಿ ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಕನ್ನಡಿಗರ ಹಿತ ಕಾಪಾಡಲು ಬದ್ದವಾಗಿದೆ ಎಂಬ ಸಂದೇಶ ರವಾನಿಸಬಹುದೆಂದು ಹೇಳಲಾಗುತ್ತದೆ.

ಪಾಕ್ ಮಸೀದಿ ಸ್ಪೋಟದಲ್ಲಿ ಸತ್ತವರ ಸಂಖ್ಯೆ 80ಕ್ಕೆ ಏರಿಕೆ

ದೇಶದ ಜನರಿಗೆ, ಮಧ್ಯಮ ವರ್ಗ, ದುಡಿಯುವ ವರ್ಗ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟಿದೆ. ಇತ್ತ ಕರ್ನಾಟಕದ ಜನರಿಗೂ ಕೇಂದ್ರದ ಬಜೆಟ್ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದರಲ್ಲೂ ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ.

ಸಿಎಂ ಬಸವರಾಜ ಬೊಮ್ಮಾಯಿ ಫೆಬ್ರವರಿ 17ಕ್ಕೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಕೇಂದ್ರದ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಸಚಿವರಿಗೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಾದ 5,000 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮನವಿ ಮಾಡಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೇಂದ್ರದ ಮುಂದೆ ಕೋರಿಕೆ ಇಟ್ಟಿದೆ. ನೀರಾವರಿ ಯೋಜನೆಗಳಾದ ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ರಾಜ್ಯದ ಕೆಲವೆಡ ಅಕಾಲಿಕ ಮಳೆ ಸಾಧ್ಯತೆ

ಉಳಿದಂತೆ ರಾಜ್ಯಕ್ಕೆ ಹೆಚ್ಚಿನ ರೈಲ್ವೇ ಯೋಜನೆ, ಹೊಸ ರೈಲುಗಳನ್ನು ನೀಡುವಂತೆ ಬೇಡಿಕೆ ಇಟ್ಟಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ ಇನ್ನಷ್ಟು ನಗರಗಳನ್ನು ಸೇರಿಸುವಂತೆ ಕೇಂದ್ರ ಹಣಕಾಸು ಸಚಿವೆ ಮುಂದೆ ಬೇಡಿಕೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ರಾಜ್ಯದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡುವಂತೆ ಕೋರಲಾಗಿದೆ. ಉಳಿದಂತೆ ಸಿಎಂ ಈಗಾಗಲೇ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಉಪನಗರ ನಿರ್ಮಿಸಲು ಉದ್ದೇಶಿಸಿದ್ದಾರೆ.

ಜೊತೆಗೆ ರಾಜ್ಯದಲ್ಲಿ ಇನ್ನೂ 6 ಹೊಸ ಹೈಟೆಕ್ ನಗರಗಳನ್ನು ಕಟ್ಟುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಬೆಂಗಳೂರು ಸಮೀಪದ ದೇವನಹಳ್ಳಿ ಬಳಿ ಟೆಕ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳಿಗೆ ಕೇಂದ್ರದ ಅನುದಾನ ನೀಡುವಂತೆ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

Karnataka, high, expectation, central budget, assembly elections,

Articles You Might Like

Share This Article